ಗುರುವಾರ , ಡಿಸೆಂಬರ್ 3, 2020
20 °C
ಆರ್‌ಬಿಐನ ಮಾಜಿ ಗವರ್ನರ್‌ ಡಿ. ಸುಬ್ಬರಾವ್‌ ಅಭಿಪ್ರಾಯ

ಆರ್ಥಿಕತೆ: ಮಧ್ಯಮಾವಧಿಗೆ ಮಂದಗತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸದ್ಯದ ಆರ್ಥಿಕ ಚೇತರಿಕೆಯು ಲಾಕ್‌ಡೌನ್‌ನಿಂದ ಆಗಿದ್ದ ಪರಿಣಾಮಗಳಿಂದ ಹೊರಬರುವ ಪ್ರಕ್ರಿಯೆಯಷ್ಟೇ ಆಗಿದೆ. ಇದನ್ನು ದೀರ್ಘಾವಧಿಯ ಚೇತರಿಕೆಯ ಸೂಚನೆ ಎಂದು ನೋಡುವುದು ತಪ್ಪಾಗಲಿದೆ’ ಎಂದು ಆರ್‌ಬಿಐನ ಮಾಜಿ ಗವರ್ನರ್‌ ಡಿ. ಸುಬ್ಬರಾವ್‌ ಅಭಿಪ್ರಾಯಪಟ್ಟಿದ್ದಾರೆ.

‘ದೇಶದ ಆರ್ಥಿಕ ಚೇತರಿಕೆಯು ಅಲ್ಪಾವಧಿ ಮತ್ತು ಮಧ್ಯಮಾವಧಿಗೆ ಮಂದಗತಿಯಲ್ಲಿಯೇ ಇರಲಿದೆ. ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿವೆ ಎಂದು ಸರ್ಕಾರ ಹೇಳುತ್ತಿರುವುದು  ಸರಿಯಲ್ಲ. ಲಾಕ್‌ಡೌನ್‌ನಿಂದಾಗಿ ಆಗಿದ್ದ ಪರಿಣಾಮಗಳಿಂದ ಆರ್ಥಿಕತೆಯು ಹೊರಬರುತ್ತಿದೆಯಷ್ಟೇ’ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಕೊರೊನಾ ವೈರಸ್‌ ಪಿಡುಗು ಜಗತ್ತನ್ನು ಪ್ರವೇಶಿಸುವ ವೇಳಗೂ ಮೊದಲೇ ಭಾರತದ ಆರ್ಥಿಕತೆಯು ಸಂಕಷ್ಟದಲ್ಲಿತ್ತು. 2017–18ರಲ್ಲಿ ಶೇ 7 ರಷ್ಟು ಇದ್ದ ದೇಶದ ಜಿಡಿಪಿ, 2018–19ರಲ್ಲಿ ಶೇ 6.1ಕ್ಕೆ ಹಾಗೂ 2019–20ರಲ್ಲಿ ಶೇ 4.2ಕ್ಕೆ ಇಳಿಕೆಯಾಗಿದೆ.

‘ವೈರಸ್‌ ಹರಡುವಿಕೆ ಇನ್ನೂ ನಿಂತಿಲ್ಲ. ದಿನವೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಅಲ್ಲದೆ, ಹೊಸ ಪ್ರದೇಶಗಳಿಗೂ ಹರಡುತ್ತಿದೆ. ಈ ಸಮಸ್ಯೆಗಳಿಂದಾಗಿ ದೇಶದ ವಿತ್ತೀಯ ಕೊರತೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಲಿದೆ. ಸಾಲದ ಹೊರೆಯೂ ಹೆಚ್ಚಾಗಲಿದೆ. ಹಣಕಾಸು ವಲಯದ ಸ್ಥಿತಿಯು ಇನ್ನಷ್ಟು ಹದಗೆಡಲಿದೆ. ಈ ಸವಾಲುಗಳನ್ನು ಹೇಗೆ ಪರಿಹರಿಸುತ್ತೇವೆ ಎನ್ನುವುದರ ಮೇಲೆ ಮಧ್ಯಮಾವಧಿಯ ಬೆಳವಣಿಗೆಯು ಅವಲಂಬಿತವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ದೇಶದ ವಿತ್ತೀಯ ಕೊರತೆಯು 2020–21ರಲ್ಲಿ ಶೇ 6.6ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ. ಸರ್ಕಾರ ಹಾಕಿಕೊಂಡಿರುವ ಶೇ 3.5ರ ಗುರಿಗೆ ಹೋಲಿಸಿದರೆ ಸರಿಸುಮಾರು ಎರಡುಪಟ್ಟು ಹೆಚ್ಚಳವಾಗುವ ಹತ್ತಿರಕ್ಕೆ ಬರಲಿದೆ.

2019-20ರಲ್ಲಿ ಆರ್ಥಿಕ ಬೆಳವಣಿಗೆ ದಶಕದ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜಾಗತಿಕ ಮತ್ತು ದೇಶಿ ಸಂಸ್ಥೆಗಳ ಅಂದಾಜಿನ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ 3.2 ರಿಂದ ಶೇ 9.5ರ ಆಸುಪಾಸಿನಲ್ಲಿ ಸಂಕುಚಿತಗೊಳ್ಳಲಿದೆ.

ಗ್ರಾಮೀಣ ಆರ್ಥಿಕತೆಯು ನಗರಕ್ಕಿಂತಲೂ ಉತ್ತಮ ಚೇತರಿಕೆ ಕಂಡಿದೆ ಎಂದು ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಕೇಂದ್ರ ಸರ್ಕಾರವು ಸಾಕಷ್ಟು ವೆಚ್ಚ ಮಾಡುತ್ತಿಲ್ಲ ಎನ್ನುವ ಟೀಕೆಯನ್ನು ಅವರು ಒಪ್ಪಿದ್ದಾರೆ. ಸರ್ಕಾರವು ವೆಚ್ಚ ಮಾಡುದರಿಂದ ಮಾತ್ರವೇ ಅಲ್ಪಾವಧಿಯಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯ. 

ಖಾಸಗಿ ಉಪಭೋಗ, ಹೂಡಿಕೆ ಮತ್ತು ರಫ್ತು ಇಳಿಮುಖವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಸರ್ಕಾರ ಹೆಚ್ಚು ವೆಚ್ಚ ಮಾಡದೇ ಹೋದರೆ ಸುಸ್ತಿ ಸಾಲದಂತಹ ಹಲವು ಸಮಸ್ಯೆಗಳು ಎದುರಾಗಲಿವೆ. ಇದು ಆರ್ಥಿಕತೆಯ ಮೇಲೆ ಪರಿಣಾಮ ಉಂಟುಮಾಡಲಿದೆ. ಆದರೆ, ಸರ್ಕಾರವು ಸಾಲ ಪಡೆಯುವುದಕ್ಕೂ ಒಂದು ಮಿತಿ ಹಾಕಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು