ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಚೇತರಿಕೆಗೆ ಅಡ್ಡಿಯಾಗಲಿದೆ ತೈಲ ದರ ಏರಿಕೆ

Last Updated 28 ಫೆಬ್ರುವರಿ 2022, 12:40 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ನಿಂದಾಗಿ ಮಂದಗತಿಯ ಬೆಳವಣಿಗೆ ಕಾಣುತ್ತಿರುವ ದೇಶದ ಆರ್ಥಿಕತೆಯ ಮೇಲೆ ಕಚ್ಚಾತೈಲ ದರ ಏರಿಕೆಯು ದುಷ್ಪರಿಣಾಮ ಉಂಟುಮಾಡಲಿದೆ ಎಂದು ಆರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ರಷ್ಯಾ–ಉಕ್ರೇನ್‌ ಸಂಘರ್ಷದಿಂದ ಕಚ್ಚಾ ತೈಲ ದರ ಏರಿಕೆ ಆಗಿದೆ. ಇದು ಆರ್ಥಿಕ ಬೆಳವಣಿಗೆಗೆ ತೊಡಕು ಉಂಟುಮಾಡಲಿದೆ. ಕುಟುಂಬಗಳು ಅಗತ್ಯ ವಸ್ತುಗಳು ‌ಮತ್ತು ಸೇವೆಗಳ ಮೇಲೆ ಮಾಡುವ ಖರ್ಚು, ಖಾಸಗಿ ಹೂಡಿಕೆ ಮೇಲೆ ಹೆಚ್ಚು ಪರಿಣಾಮ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

ಕಚ್ಚಾತೈಲ ದರದಲ್ಲಿ ಶೇಕಡ 10ರಷ್ಟು ಏರಿಕೆ ಆದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರದಲ್ಲಿ ಶೇ 0.2ರಷ್ಟು ಇಳಿಕೆ ಆಗಲಿದೆ. ಕಂಪನಿಗಳಿಗೆ ತಯಾರಿಕಾ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಆಗದೇ ಇರುವುದರಿಂದ ಅವುಗಳ ಲಾಭದಲ್ಲಿ ಇಳಿಕೆ ಕಂಡುಬರಲಿದೆ ಎಂದು ನೂಮುರಾ ಹೋಲ್ಡಿಂಗ್ಸ್‌ನ ಅರ್ಥಶಾಸ್ತ್ರಜ್ಞೆ ಸೋನಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಉಕ್ರೇನ್‌ ಬಿಕ್ಕಟ್ಟಿನಿಂದ ಆಗಿರುವ ತೈಲ ದರ ಏರಿಕೆಯು ಭಾರತದ ಆರ್ಥಿಕತೆಯ ಮೇಲೆ ಹೆಚ್ಚಿನ ಪ್ರಮಾಣದ ಅಪಾಯ ತಂದೊಡ್ಡಿದೆ ಎಂದು ಬ್ಯಾಂಕ್ ಆಫ್‌ ಬರೋಡಾದ ಆರ್ಥಿಕತಜ್ಞೆ ಅದಿತಿ ಗುಪ್ತಾ ಹೇಳಿದ್ದಾರೆ.

ಭಾರತವು ತನ್ನ ದೇಶಿ ಬೇಡಿಕೆಯ ಶೇ 80ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಬ್ರೆಂಟ್‌ ಕಚ್ಚಾತೈಲ ದರವು ಕಳೆದವಾರ ಬ್ಯಾರಲ್‌ಗೆ 105 ಡಾಲರ್‌ ದಾಟಿದ್ದರಿಂದ ಹಣದುಬ್ಬರ ಏರಿಕೆ ಆಗುವ ಸಾಧ್ಯತೆಯ ಜೊತೆಗೆ ರೂಪಾಯಿ ದುರ್ಬಲಗೊಳ್ಳಲಿದೆ. ವ್ಯಾಪಾರ ಕೊರತೆ ಅಂತರ ಹೆಚ್ಚಾಗಲಿದೆ ಎಂದಿದ್ದಾರೆ.

ಸರಕು ಮತ್ತು ಸೇವೆಗಳ ಖರೀದಿಗೆ ಜನರು ಮಾಡುತ್ತಿರುವ ಖರ್ಚು ಈಗಲೂ ಸಹ ಕೋವಿಡ್‌ ಪೂರ್ವದ ಮಟ್ಟಕ್ಕಿಂತ ಕಡಿಮೆ ಇದೆ. ಸಾರ್ವಜನಿಕರಿಂದ ಬರುವ ಬೇಡಿಕೆಯು ದೇಶದ ಜಿಡಿಪಿಗೆ ಶೇ 55ರಷ್ಟು ಕೊಡುಗೆ ನೀಡುತ್ತಿದೆ.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಸಣ್ಣ ಉದ್ದಿಮೆಗಳು, ರೆಸ್ಟಾರೆಂಟ್‌ಗಳು, ಪ್ರವಾಸೋದ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ರಿಟೇಲ್ ವ್ಯಾಪಾರವು ನಷ್ಟ ಅನುಭವಿಸಿದ್ದು, ಹೆಚ್ಚಿನ ಸಂಖ್ಯೆಯ ಉದ್ಯೋಗ ನಷ್ಟ ಕೂಡ ಉಂಟಾಗಿದೆ.

ಪೂರೈಕೆ ಕೊರತೆಯು ಅಲ್ಪಾವಧಿಯಲ್ಲಿ ತೊಡಕಾಗಿಯೇ ಉಳಿಯಲಿದೆ. ಇದು ನಿವಾರಣೆ ಆಗುತ್ತಿದ್ದಂತೆಯೇ ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ ಕಂಡುಬರಲಿದೆ ಎಂದು ಸಿಂಗಪುರದಲ್ಲಿ ಇರುವ ಕ್ಯಾಪಿಟಲ್‌ ಎಕನಾಮಿಕ್ಸ್‌ನ ಅರ್ಥಶಾಸ್ತ್ರಜ್ಞ ಶಿಲಾನ್‌ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT