ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪಿಎಫ್‌: ಶೇಕಡ 8.5ರಷ್ಟು ಬಡ್ಡಿ

Last Updated 4 ಮಾರ್ಚ್ 2021, 13:53 IST
ಅಕ್ಷರ ಗಾತ್ರ

ನವದೆಹಲಿ: ಹಾಲಿ ಆರ್ಥಿಕ ವರ್ಷದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳಿಗೆ (ಇಪಿಎಫ್‌) ಶೇಕಡ 8.5ರಷ್ಟು ಬಡ್ಡಿ ನೀಡಲು ಭವಿಷ್ಯ ನಿಧಿ ಸಂಘಟನೆ ಗುರುವಾರ ತೀರ್ಮಾನಿಸಿದೆ. ಸಂಘಟನೆಯು ಐದು ಕೋಟಿಗೂ ಹೆಚ್ಚಿನ ಚಂದಾದಾರರನ್ನು ಹೊಂದಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅತ್ಯುನ್ನತ ಸಮಿತಿಯಾದ ಕೇಂದ್ರ ಧರ್ಮದರ್ಶಿಗಳ ಮಂಡಳಿಯ ಸಭೆಯು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅಧ್ಯಕ್ಷತೆಯಲ್ಲಿ ಶ್ರೀನಗರದಲ್ಲಿ ನಡೆಯಿತು. 2020–21ನೇ ಸಾಲಿನ ಬಡ್ಡಿ ದರವನ್ನು ಸಭೆಯಲ್ಲಿ ಅಂತಿಮಗೊಳಿಸಲಾಯಿತು.

ಬಡ್ಡಿ ದರದ ವಿಚಾರದಲ್ಲಿ ಧರ್ಮದರ್ಶಿಗಳ ಮಂಡಳಿ ಕೈಗೊಂಡಿರುವ ತೀರ್ಮಾನವನ್ನು ಕೇಂದ್ರ ಹಣಕಾಸು ಸಚಿವಾಲಯದ ಸಮ್ಮತಿಗಾಗಿ ರವಾನಿಸಲಾಗುತ್ತದೆ. ಹಣಕಾಸು ಸಚಿವಾಲಯದ ಸಮ್ಮತಿ ದೊರೆತ ನಂತರ, ಶೇ 8.5ರಷ್ಟು ಬಡ್ಡಿಯನ್ನು ಭವಿಷ್ಯ ನಿಧಿ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.

‘2021ನೇ ಹಣಕಾಸು ವರ್ಷದಲ್ಲಿ, ಈಕ್ವಿಟಿಯಲ್ಲಿನ ಹೂಡಿಕೆಯನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಇಪಿಎಫ್‌ಒ ತೀರ್ಮಾನಿಸಿದೆ. ಈಕ್ವಿಟಿ ಮೇಲಿನ ಹೂಡಿಕೆಯಿಂದ ಬಂದ ಆದಾಯ ಹಾಗೂ ಸಾಲಪತ್ರಗಳ ಮೇಲಿನ ಹೂಡಿಕೆಯಿಂದ ಸಿಕ್ಕಿರುವ ಬಡ್ಡಿಯ ಪರಿಣಾಮವಾಗಿ ಈ ವರ್ಷ ಇಷ್ಟು ಬಡ್ಡಿದರವನ್ನು ಶಿಫಾರಸು ಮಾಡಲು ಸಾಧ್ಯವಾಗಿದೆ. ಹೆಚ್ಚಿನ ಬಡ್ಡಿ ದರವನ್ನು ನೀಡುವಂತೆ ಶಿಫಾರಸು ಮಾಡಿದ ನಂತರವೂ, ಇಪಿಎಫ್‌ಒ ಬಳಿ ಆರೋಗ್ಯಕರ ಅನ್ನಿಸುವಷ್ಟು ಮಿಗತೆ ಹಣ ಉಳಿದುಕೊಳ್ಳುತ್ತದೆ. ಈ ಹಣವು ಭವಿಷ್ಯದಲ್ಲಿ ಕೂಡ ಹೆಚ್ಚಿನ ಪ್ರಮಾಣದ ಬಡ್ಡಿ ನೀಡಲು ನೆರವಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

ಈ ವರ್ಷದಲ್ಲಿ ಶೇ 8.5ರಷ್ಟು ಬಡ್ಡಿ ನೀಡಿದ ನಂತರ, ಇಪಿಎಫ್‌ಒ ಬಳಿ ₹ 300 ಕೋಟಿ ಹೆಚ್ಚುವರಿ ಹಣ ಉಳಿಯಲಿದೆ ಎಂದು ಧರ್ಮದರ್ಶಿಗಳ ಮಂಡಳಿಯ ಸದಸ್ಯ ಕೆ.ಇ. ರಘುನಾಥನ್ ತಿಳಿಸಿದ್ದಾರೆ.

2014ನೆಯ ಹಣಕಾಸು ವರ್ಷದಿಂದಲೂ ಇಪಿಎಫ್‌ಒ ಶೇ 8.5ಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡುತ್ತಿದೆ. 2015–16ರಿಂದ ಇಪಿಎಫ್‌ಒ, ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದನ್ನು ಆರಂಭಿಸಿದೆ. ಮೊದಲಿಗೆ ಸಂಘಟನೆಯು ಎನ್‌ಎಸ್‌ಇ–50 ಮತ್ತು ಬಿಎಸ್‌ಸಿ–30 ಸೂಚ್ಯಂಕಗಳ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿತು.

ವರ್ಷ;ಬಡ್ಡಿ (%)

2019–20;8.5

2018–19;8.65

2017–18;8.55

2016–17;8.65

2015–16;8.8

2014–15;8.75

2013–14;8.75

2012–13;8.5

2011–12;8.25

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT