ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಆರ್ಥಿಕತೆಗೆ ಒತ್ತು ನೀಡಲು ಮುಹಮ್ಮದ್ ಯೂನುಸ್‌ ಸಲಹೆ

ಪ್ರಸ್ತುತ ಹಣಕಾಸು ವ್ಯವಸ್ಥೆಯಲ್ಲಿ ಲೋಪ:
Last Updated 31 ಜುಲೈ 2020, 21:32 IST
ಅಕ್ಷರ ಗಾತ್ರ

ನವದೆಹಲಿ: ‘ಈಗಿರುವ ಹಣಕಾಸು ವ್ಯವಸ್ಥೆಯನ್ನು ತಪ್ಪಾಗಿ ರೂಪಿಸಲಾಗಿದೆ ಎನ್ನುವುದನ್ನು ಕೋವಿಡ್‌–19 ಸಂಕಷ್ಟದ ಸಂದರ್ಭ ಸಾಬೀತುಪಡಿಸಿದೆ. ಹೀಗಾಗಿ, ಗ್ರಾಮೀಣ ಪ್ರದೇಶ ಕೇಂದ್ರಿತ ಆರ್ಥಿಕತೆಗೆ ಒತ್ತು ನೀಡುವ ಅಗತ್ಯವಿದೆ’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ, ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್‌ಗಳ ಸಂಸ್ಥಾಪಕ ಮುಹ್ಮಮದ್‌ ಯೂನುಸ್‌ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಜತೆ ಶುಕ್ರವಾರ ಸಮಾಲೋಚನೆ ನಡೆಸಿದ ಅವರು, ‘ಗ್ರಾಮೀಣ ಆರ್ಥಿಕತೆ ಮತ್ತು ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡಿರುವ ಹೊಸ ಶಕೆ ಆರಂಭಿಸಬೇಕಾಗಿದೆ’ ಎಂದು ಪ್ರತಿಪಾದಿಸಿದ್ದಾರೆ. ಕೋವಿಡ್‌–19 ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರು ತಜ್ಞರ ಜತೆ ಸರಣಿ ಸಮಾಲೋಚನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಸರಣಿಯ ಅಂಗವಾಗಿ ಯೂನಸ್‌ ಅವರ ಜತೆ ಸಮಾಲೋಚನೆ ಆಯೋಜಿಸಲಾಗಿತ್ತು.

‘ಹೊಸ ಜಗತ್ತು ನಿರ್ಮಿಸಲು ಕೋವಿಡ್‌ ನಮಗೆ ಸದಾವಕಾಶ ನೀಡಿದೆ ಎಂದು ಭಾವಿಸಿಕೊಳ್ಳಬೇಕು. ಜಾಗತಿಕ ತಾಪಮಾನ ಇಲ್ಲದ, ಹೆಚ್ಚು, ಹೆಚ್ಚು ಆಸ್ತಿ ಒಗ್ಗೂಡಿಸುವಿಕೆಗೆ ಅವಕಾಶ ಇಲ್ಲದ ಮತ್ತು ನಿರುದ್ಯೋಗ ಇಲ್ಲದ ವಾತಾವರಣ ನಿರ್ಮಿಸಬೇಕಾಗಿದೆ. ಇದಕ್ಕಾಗಿ ದೃಢ ನಿರ್ಧಾರಗಳನ್ನು ಕೈಗೊಳ್ಳಲು ಕೋವಿಡ್‌–19 ಅವಕಾಶ ನೀಡಿದೆ’ ಎಂದು ಹೇಳಿದ್ದಾರೆ.

ಪಾಶ್ಚಿಮಾತ್ಯ ಆರ್ಥಿಕ ಮಾದರಿಯನ್ನು ಟೀಕಿಸಿದ ಅವರು, ‘ಕೇವಲ ನಗರ ಕೇಂದ್ರಿತ ಆರ್ಥಿಕತೆಯನ್ನು ಮಾತ್ರ ಪಾಶ್ಚಿಮಾತ್ಯ ಆರ್ಥಿಕತೆ ಪರಿಗಣಿಸುತ್ತದೆ. ಗ್ರಾಮೀಣ ಆರ್ಥಿಕತೆ ಎಂದರೆ ಕೇವಲ ಕಾರ್ಮಿಕರನ್ನು ಪೂರೈಸುವುದು ಎಂದು ಭಾವಿಸಿದೆ’ ಎಂದಿದ್ದಾರೆ.

‘ಕೇವಲ ವಿಶ್ವಾಸದ ತಳಹದಿ ಹೊಂದಿರುವ ಗ್ರಾಮೀಣ ಬ್ಯಾಂಕ್‌ಗಳು ಲಕ್ಷಾಂತರ ಡಾಲರ್‌ ಮೊತ್ತದಷ್ಟು ಸಾಲ ನೀಡಿವೆ. ಬಡ್ಡಿ ಸಮೇತ ಅವರು ಸಾಲವನ್ನು ಹಿಂತಿರುಗಿಸುತ್ತಿದ್ದಾರೆ. ಬಡವರಿಗೆ ಹಣಕಾಸಿನ ನೆರವು ಒದಗಿಸಿದರೆ ಅಭಿವೃದ್ಧಿ ಖಚಿತ’ ಎಂದು
ಪ್ರತಿಪಾದಿಸಿದ್ದಾರೆ.

‘ನಾವು ಆರಂಭಿಸಿರುವ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕಾನೂನು ಬಿಕ್ಕಟ್ಟು ಸೃಷ್ಟಿಯಾಗುವುದಿಲ್ಲ. ಹೀಗಾಗಿ, ವಕೀಲರಿಗೆ ಅವಕಾಶವೇ ಇಲ್ಲದಂತಾಗಿದೆ. ನಮಗೆ ಗ್ರಾಹಕರ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT