ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ ಟ್ಯಾಕ್ಸಿ ಸೇವೆಗೆ ನಿಯಮಾವಳಿ ರೂಪಿಸಿ: ರ‍್ಯಾಪಿಡೊ ಕಂಪನಿ ಒತ್ತಾಯ

Published 13 ಮಾರ್ಚ್ 2024, 12:18 IST
Last Updated 13 ಮಾರ್ಚ್ 2024, 12:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದಲ್ಲಿ ಆ್ಯಪ್‌ ಆಧಾರಿತ ಬೈಕ್‌ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸ್ಪಷ್ಟವಾದ ನಿಯಮಾವಳಿಗಳನ್ನು ರೂಪಿಸಬೇಕಿದೆ’ ಎಂದು ರ‍್ಯಾಪಿಡೊ ಕಂಪನಿಯ ಸಹ ಸಂಸ್ಥಾಪಕ ಪವನ್‌ ಗುಂಟುಪಲ್ಲಿ ಒತ್ತಾಯಿಸಿದರು.

‘ಸದ್ಯ ಸರ್ಕಾರವು ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ವಿದ್ಯುತ್‌ ಚಾಲಿತ ಬೈಕ್‌ ಟ್ಯಾಕ್ಸಿ ಸೇವೆ ರದ್ದುಪಡಿಸಿರುವುದು ಸ್ವಾಗತಾರ್ಹ. ಈ ಆದೇಶವು ರ‍್ಯಾಪಿಡೊ ಬೈಕ್‌ ಟ್ಯಾಕ್ಸಿ ಸೇವೆಗೆ ಅನ್ವಯಿಸುವುದಿಲ್ಲ. ಆದರೆ, ಈ ಬಗ್ಗೆ ಗೊಂದಲ ಸೃಷ್ಟಿಸಲಾಗುತ್ತಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆ ಸಂಬಂಧ ಹೈಕೋರ್ಟ್‌ನಲ್ಲಿ ಕಂಪನಿಯು ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿ ಇದೆ ಎಂದರು.

ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಗುಜರಾತ್‌, ಅಸ್ಸಾಂ, ಒಡಿಶಾ, ಬಿಹಾರದಲ್ಲಿ ಅಲ್ಲಿನ ಸರ್ಕಾರಗಳು ಬೈಕ್‌ ಟ್ಯಾಕ್ಸಿ ಸೇವೆಗೆ ಪ್ರತ್ಯೇಕ ನಿಯಮಾವಳಿಗಳನ್ನು ರೂಪಿಸಿವೆ ಎಂದರು.

ಸದ್ಯ ವಿವಿಧ ಕಂಪನಿಗಳಡಿ ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ 10 ಲಕ್ಷ ಸವಾರರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 5 ಲಕ್ಷ ರ್‍ಯಾಪಿಡೊ ಸವಾರರು ಇದ್ದಾರೆ ಎಂದು ತಿಳಿಸಿದರು. 

ಮೋಟಾರು ವಾಹನಗಳ ಕಾಯ್ದೆ 1988ರ ಸೆಕ್ಷನ್‌ 2(7)ರ ಅನ್ವಯ  ದ್ವಿಚಕ್ರ ವಾಹನಗಳಿಗೆ ಕಾಂಟ್ರಾಕ್ಟ್‌ ಕ್ಯಾರೇಜ್‌ ಪರ್ಮಿಟ್ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಸೂಚಿಸಿದೆ. ಇತರೆ ರಾಜ್ಯಗಳಲ್ಲಿ ಈಗಾಗಲೇ ಈ ಮಾದರಿ ಅನುಸರಿಸಲಾಗುತ್ತಿದೆ. ಕರ್ನಾಟಕದಲ್ಲಿಯೂ ಜಾರಿಗೊಂಡರೆ ಬೈಕ್‌ ಟ್ಯಾಕ್ಸಿ ಸೇವೆಯ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. 

ಮಹಿಳೆಯರ ಸುರಕ್ಷತೆಗೆ ಕಂಪನಿಯು ಒತ್ತು ನೀಡಿದೆ. ತಡರಾತ್ರಿ ಸೇವೆ ವೇಳೆಯು ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ಅಪಾಯ ಎದುರಾದರೆ ತುರ್ತು ಕರೆ ಮಾಡಬಹುದು. ಕಾಲ್‌ಸೆಂಟರ್‌ ಮೂಲಕವೂ ಗ್ರಾಹಕರು ನಿಗದಿತ ಸ್ಥಳ ತಲುಪಿರುವ ಬಗ್ಗೆ ಪರಿಶೀಲಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.

ಕಂಪನಿಯ ಕಾನೂನು ಸಲಹೆಗಾರರಾದ ಶಾಂತನು ಶರ್ಮಾ, ಪ್ರಜ್ವಲ್‌, ಅಭಿಷೇಕ್‌ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT