ನವದೆಹಲಿ: ಭಾರತದ ಸಾಲಪತ್ರ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹11,366 ಕೋಟಿ (ಆಗಸ್ಟ್ 24ರ ವರೆಗೆ) ಹೂಡಿಕೆ ಮಾಡಿದ್ದಾರೆ. ಜನವರಿಯಿಂದ ಇಲ್ಲಿಯವರೆಗೆ ಈ ಮಾರುಕಟ್ಟೆಯಲ್ಲಿ ಒಟ್ಟಾರೆ ಹೂಡಿಕೆಯು ₹1 ಲಕ್ಷ ಕೋಟಿ ದಾಟಿದೆ.
ಜೂನ್‌ನಲ್ಲಿ ಜೆ.ಪಿ. ಮಾರ್ಗನ್‌ನ ಗ್ಲೋಬಲ್ ಬಾಂಡ್ ಇಂಡೆಕ್ಸ್‌ಗೆ ಭಾರತದ ಬಾಂಡ್ ಸೇರ್ಪಡೆಯಾಗಿದೆ. ಇದರಿಂದ ಭಾರತದ ಬಾಂಡ್‌ಗಳತ್ತ ವಿದೇಶಿ ಹೂಡಿಕೆದಾರರು ಹೆಚ್ಚು ಗಮನ ನೆಟ್ಟಿದ್ದಾರೆ. ಹಾಗಾಗಿ, ಬಂಡವಾಳದ ಒಳಹರಿವು ಹೆಚ್ಚುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಭಾರತದ ಸಾಲಪತ್ರ ಮಾರುಕಟ್ಟೆಯಲ್ಲಿ ಮೇ ತಿಂಗಳಿನಲ್ಲಿ ₹8,760 ಕೋಟಿ, ಜೂನ್‌ನಲ್ಲಿ ₹14,955 ಹಾಗೂ ಜುಲೈನಲ್ಲಿ ₹22,363 ಕೋಟಿ ಹೂಡಿಕೆಯಾಗಿದೆ. ಏಪ್ರಿಲ್‌ನಲ್ಲಿ ₹10,949 ಕೋಟಿ ಬಂಡವಾಳವನ್ನು ವಿದೇಶಿ ಹೂಡಿಕೆದಾರರು ಹಿಂಪಡೆದಿದ್ದರು.
ಆಗಸ್ಟ್‌ನಲ್ಲಿ ಇಲ್ಲಿಯವರೆಗೆ ದೇಶೀಯ ಷೇರುಪೇಟೆಗಳಿಂದ ವಿದೇಶಿ ಬಂಡವಾಳ ಹೂಡಿಕೆದಾರರು ₹16,305 ಕೋಟಿಯನ್ನು ಹಿಂಪಡೆದಿದ್ದಾರೆ. ಜಾಗತಿಕ ಬಿಕ್ಕಟ್ಟು, ಅಮೆರಿಕದಲ್ಲಿ ತಲೆದೋರಿದ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಷೇರುಪೇಟೆಯಲ್ಲಿ ಬಂಡವಾಳದ ಹೊರಹರಿವು ಹೆಚ್ಚಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.