ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜಾ, ಸಾವಯವ ತರಕಾರಿ ಹಣ್ಣಿಗೆ ಫ್ರೆಷ್‌ ಬಾಕ್ಸ್

ಸ್ಟಾರ್ಟ್‌ಅಪ್‌
Last Updated 12 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಮೊಬೈಲ್‌, ಬಟ್ಟೆ, ಎಲೆಕ್ಟ್ರಾನಿಕ್ಸ್‌ ವಸ್ತು ಸೇರಿದಂತೆ ಬಹುತೇಕ ವಸ್ತುಗಳು ಆನ್‌ಲೈನ್‌ನಲ್ಲಿ ಎಲ್ಲೆಡೆ ಲಭ್ಯ ಇವೆ. ಕೆಲವು ಮಹಾ ನಗರಗಳಲ್ಲಿ ತರಕಾರಿ, ಹಣ್ಣುಗಳೂ ಆನ್‌ಲೈನ್‌ನಲ್ಲಿ ಲಭ್ಯ ಇವೆ. ಆ ರೀತಿ ಹುಬ್ಬಳ್ಳಿಯಲ್ಲಿಯೂ ಸಿಕ್ಕರೆ ಚೆನ್ನ ಅಲ್ಲವೇ? ಅಂತಹದೊಂದು ಅವಕಾಶ ಹುಬ್ಬಳ್ಳಿಗರಿಗೆ ಲಭಿಸಿದೆ.

ಬಿಸಿಲಲ್ಲಿ ಸಂತೆಗೆ, ಮಾರುಕಟ್ಟೆಗೆ ಹೋಗುವುದು ಬೇಕಾಗಿಲ್ಲ. ದೇಶಪಾಂಡೆ ಫೌಂಡೇಷನ್‌ನ ಸ್ಯಾಂಡ್‌ಬಾಕ್ಸ್‌ನಲ್ಲಿ ಇಬ್ಬರು ಯುವಕರು ಸೇರಿಕೊಂಡು ಆರಂಭಿಸಿರುವ ಸ್ಟಾರ್ಟ್‌ಅಪ್‌ ‘ಫ್ರೆಷ್ ಬಾಕ್ಸ್‌’ಗೆ ಆರ್ಡರ್‌ ನೀಡಿದರೆ ಸಾಕು, ನಿಮ್ಮ ಮನೆ ಬಾಗಿಲಿಗೇ ತರಕಾರಿ, ಹಣ್ಣು ಬರುತ್ತವೆ. ಬೆಂಡೆಕಾಯಿ, ಬೀನ್ಸ್‌, ಆಲೂಗೆಡ್ಡೆ, ಸೌತೆಕಾಯಿ, ಉಳ್ಳಾಗಡ್ಡಿ ಸೇರಿದಂತೆ ಯಾವುದೇ ಬಗೆಯ ತರಕಾರಿಯ ವಾರದ ಪಟ್ಟಿಯನ್ನು ನೀಡಿದರೆ ಮನೆ ಬಾಗಿಲಿಗೆ ಮುಟ್ಟಿಸಲಾಗುತ್ತದೆ. ಮಾವು, ದ್ರಾಕ್ಷಿ, ಬಾಳೆಹಣ್ಣು ಸೇರಿದಂತೆ ಎಲ್ಲ ಬಗೆಯ ಹಣ್ಣುಗಳೂ ಇಲ್ಲಿವೆ.

ಗ್ರಾಹಕರಿಗೆ ತಲುಪಿಸುವುದರ ಜತೆಗೆ ಬಿಗ್‌ ಬಜಾರ್‌, ರಿಲಯನ್ಸ್‌, ನೀಲ್‌ಗಿರೀಸ್‌, ಮೋರ್‌ ಮುಂತಾದ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರೈತರ ಉತ್ಪನ್ನಕ್ಕೆ ಉತ್ತಮ ದರದಲ್ಲಿ ಮೇಲಿನ ಕಂಪನಿಗಳಿಗೆ ಕೃಷಿ ಉತ್ಪನ್ನ ತಲುಪಿಸುವ ಕೆಲಸವನ್ನೂ ಫ್ರೆಷ್ ಬಾಕ್ಸ್‌ ಮಾಡುತ್ತಿದೆ.

3,000 ರೈತರ ತಂಡ ಕಟ್ಟಿಕೊಂಡಿರುವ ಫ್ರೆಷ್‌ ಬಾಕ್ಸ್‌ ತಂಡವು ಅವರಿಂದ ತರಕಾರಿ, ಹಣ್ಣುಗಳನ್ನು ತೆಗೆದುಕೊಳ್ಳುವುದು ಮಾತ್ರವಲ್ಲ, ಅವರಿಗೆ ಉತ್ತಮ ಕೃಷಿಗೆ ಬೇಕಾದ ಸೇವೆಯನ್ನೂ ನೀಡುತ್ತಿದೆ.

ರೈತರಿಂದ ಉತ್ಪನ್ನ ಖರೀದಿಸಿ ಮಾರಾಟ ಮಾಡುವುದಾದರೆ ರೈತರು ಹೆಚ್ಚು ಬೆಲೆ ಬಂದ ಕಡೆಗೆ ವಾಲುತ್ತಾರೆ. ಖರೀದಿಯಷ್ಟೇ ಮುಖ್ಯವಲ್ಲ, ರೈತರು ಸುಸ್ಥಿರ ಆದಾಯ ಪಡೆಯಬೇಕು. ಜೊತೆಗೆ ಉತ್ತಮ ಗುಣಮಟ್ಟದ ತರಕಾರಿ ಉತ್ಪಾದಿಸಬೇಕು. ಅದಕ್ಕೊಂದು ಮಾರುಕಟ್ಟೆ ಒದಗಿಸಬೇಕು ಎನ್ನುವುದು ಫ್ರೆಷ್‌ ಬಾಕ್ಸ್‌ ಪಾಲುದಾರರಾದ ರೋಹನ್‌ ಕುಲಕರ್ಣಿ ಹಾಗೂ ಪವನ ಪಾಟೀಲ ಅವರ ಉದ್ದೇಶವಾಗಿದೆ.

ರೈತರು ತಮ್ಮ ಜಮೀನನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದಿಲ್ಲ. ಇದನ್ನು ದೂರ ಮಾಡಿ, ಸಂಪೂರ್ಣ ಬಳಕೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ನಮ್ಮೊಂದಿಗೆ ಕೈ ಜೋಡಿಸುವ ರೈತರ ಹೊಲಗಳ ಅಳತೆ ಮಾಡಿಸಿ, ಪೂರ್ಣ ಬಳಕೆಗೆ ಯೋಜನೆ ಹಾಕಿಕೊಡಲಾಗುತ್ತದೆ. ಜತೆಗೆ ಮಣ್ಣು ಹಾಗೂ ನೀರಿನ ಪರೀಕ್ಷೆ ಮಾಡಲಾಗುತ್ತದೆ. ಯಾವುದೇ ಒಂದು ಬೆಳೆಯನ್ನು ಬೆಳೆಯಲು ಭೂಮಿಗೆ ಯಾವ ಪ್ರಮಾಣದಲ್ಲಿ ಯಾವ, ಯಾವ ಗೊಬ್ಬರ ಹಾಕಬೇಕು ಎಂಬುದನ್ನು ಅವರಿಗೆ ತಿಳಿಸಲಾಗುತ್ತದೆ.

‘ಬಿತ್ತನೆ ದಿನದಿಂದ ಹಿಡಿದು ಬೆಳೆ ಕಟಾವು ಆಗುವವರೆಗೆ ಏನು ಮಾಡಬೇಕು ಎಂಬ ಮಾಹಿತಿಯನ್ನು ರೈತರಿಗೆ ನೀಡಲಾಗುತ್ತದೆ. ಸಾವಯವ ಗೊಬ್ಬರವನ್ನೇ ಬಳಸಲು ಸಲಹೆ ನೀಡಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವುದರಿಂದ ಭೂಮಿ ಹಾಳಾಗುತ್ತದೆ. ಆದ್ದರಿಂದ ಅದನ್ನು ತಪ್ಪಿಸಲು ರೈತರ ಹೊಲದಲ್ಲಿ ಮಾಯಿಶ್ಚರ್‌ ಸೆನ್ಸರ್ ಅಳವಡಿಸಲಾಗುತ್ತದೆ. ಬೆಳೆಗೆ ಬೇಕಾದ ತೇವಾಂಶಕ್ಕಿಂತ ಕಡಿಮೆಯಾದರೆ ಮಾತ್ರ ನೀರು ಹರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಭೂಮಿಯ ಫಲವತ್ತತೆ ಕಾಪಾಡಲು ಅನುಕೂಲವಾಗುತ್ತದೆ. ಇದರಿಂದಾಗಿ ರೈತರ ಆದಾಯದಲ್ಲಿ ಶೇ 40 ರಷ್ಟು ಹೆಚ್ಚಳವಾಗಿದೆ’ ಎಂದು ರೋಹನ್‌ ಕುಲಕರ್ಣಿ ಹೇಳುತ್ತಾರೆ.

ರೈತರು ಬೆಳೆದಿರುವ ಬೆಳೆಯನ್ನು ಫ್ರೆಷ್‌ ಬಾಕ್ಸ್‌ನವರೇ ಖರೀದಿ ಮಾಡುತ್ತಾರೆ. ಅದನ್ನು ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತದೆ. ರಸಾಯನಿಕ ಮುಕ್ತವಾಗಿರುವುದರಿಂದ, ಗುಣಮಟ್ಟದ ತರಕಾರಿ ಇರುವುದರಿಂದ ಬೇಡಿಕೆ ಚೆನ್ನಾಗಿದೆ. ಕಂಪನಿಗಳಷ್ಟೇ ಅಲ್ಲ, 1, 600 ಗ್ರಾಹಕರಿಗೆ ನೇರವಾಗಿ ತರಕಾರಿ ತಲುಪಿಸಲಾಗುತ್ತಿದೆ. ವಾರ್ಷಿಕ ₹ 5 ರಿಂದ 6 ಕೋಟಿ ವಹಿವಾಟು ಮಾಡುತ್ತಿದೆ.

‘ಗಾಮನಗಟ್ಟಿ, ತೇಗೂರ, ನರೇಂದ್ರ, ಘಟಪ್ರಭಾ ಸೇರಿದಂತೆ ವಿವಿಧೆಡೆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಸಾವಯವ ಮಾವಿನ ಹಣ್ಣು ರಫ್ತು ಮಾಡಲಾಗಿತ್ತು. ಈ ಬಾರಿಯೂ ಬೇಡಿಕೆ ಇದೆ. ದುಬೈಗೆ ರಫ್ತು ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೇ ದೇಶದ ವಿವಿಧೆಡೆಯೂ ಕಳುಹಿಸಲಾಗುತ್ತದೆ. ಇದಕ್ಕಾಗಿಯೇ ಬ್ಲೂ ಡಾರ್ಟ್‌ ಕೊರಿಯರ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

25 ಮಂದಿ ನೇರವಾಗಿ, ನೂರಾರು ಜನರು ಪರೋಕ್ಷವಾಗಿ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದೇವೆ’ ಎನ್ನುತ್ತಾರೆ ರೋಹನ್‌.

‘ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾಸಿಸುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನವೋದ್ಯಮಿಗಳಿಗೆ ದೇಶಪಾಂಡೆ ಫೌಂಡೇಷನ್‌ ವತಿಯಿಂದ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ಈಗಾಗಲೇ 65 ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ ನೀಡಲಾಗಿದೆ’ ಎನ್ನುತ್ತಾರೆ ಸ್ಯಾಂಡ್‌ಬಾಕ್ಸ್‌ ಸ್ಟಾರ್ಟ್‌ ಅಪ್ಸ್‌ ಸಿಇಒ ಸಿ.ಎಂ. ಪಾಟೀಲ.

ಪ್ಲೇ ಸ್ಟೋರ್‌ನಲ್ಲಿ ಫ್ರೆಷ್‌ ಬಾಕ್ಸ್‌ (fresh boxx) ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಇಲ್ಲವೇ, ವೆಬ್‌ ಸೈಟ್‌ freshboxx.in ಅಥವಾ 78998 84488 ಮೂಲಕ ಬುಕ್‌ ಮಾಡಬಹುದು. ರೋಹನ್‌ ಕುಲಕರ್ಣಿ ಅವರನ್ನು 93424 12110 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT