ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಫಸ್ಟ್‌ ಅರ್ಜಿ ಅಂಗೀಕರಿಸಿದ ಎನ್‌ಸಿಎಲ್‌ಟಿ

ಆಡಳಿತ ಮಂಡಳಿ ಅಮಾನತು, ಬಿಕ್ಕಟ್ಟು ಪರಿಹರಿಸಲು ವೃತ್ತಿಪರರ ನೇಮಕ
Published 10 ಮೇ 2023, 14:30 IST
Last Updated 10 ಮೇ 2023, 14:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಹಣಕಾಸಿಗೆ ಸಂಬಂಧಿಸಿದ ಹೊಣೆಗಾರಿಕೆಗಳನ್ನು ನಿಭಾಯಿಸಲು ನಮ್ಮಿಂದ ಆಗುತ್ತಿಲ್ಲ’ ಎಂದು ಗೋ ಫಸ್ಟ್‌ ಕಂಪನಿಯು ಸ್ವಯಂಪ್ರೇರಿತವಾಗಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ವಿಚಾರಣೆಗೆ ಅಂಗೀಕರಿಸಿದೆ.

ಕಂಪನಿಯ ಆಡಳಿತ ಮಂಡಳಿಯನ್ನು ಅಮಾನತಿನಲ್ಲಿ ಇರಿಸಲಾಗಿದೆ. ಗೋ ಫಸ್ಟ್‌ಗೆ ಲೀಸ್ ಆಧಾರದಲ್ಲಿ ನೀಡಿರುವ ವಿಮಾನಗಳನ್ನು ಹಿಂಪಡೆಯುವಂತಿಲ್ಲ ಎಂದು ಲೀಸ್ ನೀಡಿರುವ ಕಂಪನಿಗಳಿಗೆ ಎನ್‌ಸಿಎಲ್‌ಟಿ ಹೇಳಿದೆ.

ಗೋ ಫಸ್ಟ್‌ ಕಂಪನಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ನೌಕರರಿದ್ದಾರೆ. ಕಂಪನಿಯಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಎನ್‌ಸಿಎಲ್‌ಟಿ, ವೃತ್ತಿಪರರೊಬ್ಬರನ್ನು (ಐಆರ್‌ಪಿ) ನೇಮಕ ಮಾಡಿದೆ. ಐಆರ್‌ಪಿ ಆಗಿ ನೇಮಕಗೊಂಡಿರುವ ಅಭಿಲಾಷ್ ಲಾಲ್ ಅವರು ನೌಕರರನ್ನು ಕೆಲಸದಿಂದ ತೆಗೆಯುವಂತಿಲ್ಲ ಎಂದು ಎನ್‌ಸಿಎಲ್‌ಟಿ ಆದೇಶಿಸಿದೆ.

ಗೋ ಫಸ್ಟ್‌ ಕಂಪನಿಯು ₹11,463 ಕೋಟಿ ಸಾಲದ ಹೊರೆ ಹೊತ್ತಿದೆ. ಎನ್‌ಸಿಎಲ್‌ಟಿ ಎದುರು ಇರುವ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಕಂಪನಿಯು ತನ್ನ ಆಸ್ತಿಯನ್ನು ವರ್ಗಾವಣೆ ಮಾಡುವಂತಿಲ್ಲ, ಮಾರಾಟ ಮಾಡುವಂತಿಲ್ಲ.

‘ಐಆರ್‌ಪಿ ಆಗಿ ನೇಮಕಗೊಂಡಿರುವ ಅಭಿಲಾಷ್ ಲಾಲ್ ಅವರು ಕಂಪನಿಯ ಚಟುವಟಿಕೆಗಳು ಮುಂದುವರಿಯುವಂತೆ ಮಾಡಲು ಹಾಗೂ ಕಂಪನಿಯ ಸೇವೆಗಳು ಸುಗಮವಾಗಿ ಲಭ್ಯವಾಗುವಂತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಎನ್‌ಸಿಎಲ್‌ಟಿ ಹೇಳಿದೆ.

ಕಂಪನಿಯ ಆಡಳಿತ ಮಂಡಳಿಯನ್ನು ಅಮಾನತಿನಲ್ಲಿ ಇರಿಸಿರುವ ಎನ್‌ಸಿಎಲ್‌ಟಿ, ಆಡಳಿತ ಮಂಡಳಿಯ ಸದಸ್ಯರು ಲಾಲ್ ಅವರಿಗೆ ಎಲ್ಲ ನೆರವು ನೀಡಬೇಕು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT