ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನ, ಬೆಳ್ಳಿ ಆಮದು ಶೇ 210ರಷ್ಟು ಏರಿಕೆ

ಕಸ್ಟಮ್ಸ್ ಸುಂಕ ರಿಯಾಯಿತಿ ಪರಿಷ್ಕರಣೆ ಅಗತ್ಯ: ಜಿಟಿಆರ್‌ಐ
Published 17 ಜೂನ್ 2024, 13:40 IST
Last Updated 17 ಜೂನ್ 2024, 13:40 IST
ಅಕ್ಷರ ಗಾತ್ರ

ನವದೆಹಲಿ: ಮುಕ್ತ ವ್ಯಾಪಾರ ಒಪ್ಪಂದದ ಪಾಲುದಾರ ರಾಷ್ಟ್ರ ಅರಬ್‌ ಸಂಯುಕ್ತ ಸಂಸ್ಥಾನದಿಂದ (ಯುಎಇ) ಭಾರತಕ್ಕೆ 2023–24ರ ಹಣಕಾಸು ವರ್ಷದಲ್ಲಿ ₹89,392 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಮದಾಗಿದೆ. 

ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಆಮದು ಪ್ರಮಾಣದಲ್ಲಿ ಶೇ 210ರಷ್ಟು ಏರಿಕೆಯಾಗಿದೆ. ಭಾರತ-ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಅಡಿಯಲ್ಲಿ ಯುಎಇಗೆ ಭಾರತ ನೀಡಿದ ಆಮದು ಸುಂಕದ ರಿಯಾಯಿತಿಯಿಂದ ಚಿನ್ನ ಮತ್ತು ಬೆಳ್ಳಿಯ ಆಮದು ತೀವ್ರ ಏರಿಕೆಯಾಗಿದೆ. ಕಸ್ಟಮ್ಸ್ ಸುಂಕ ರಿಯಾಯಿತಿಯನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನೀಷಿಯೇಟಿವ್ (ಜಿಟಿಆರ್‌ಐ) ಸೋಮವಾರ ಹೇಳಿದೆ.

ಬೆಳ್ಳಿಯ ಆಮದಿನ ಮೇಲೆ ಶೇ 7ರಷ್ಟು ಕಸ್ಟಮ್ಸ್ ಸುಂಕದ ರಿಯಾಯಿತಿ ಇದೆ. ಚಿನ್ನದ ಆಮದಿಗೆ  160 ಟನ್‌ವರೆಗೆ ಶೇ 1ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಯುಎಇಯಿಂದ ಖಾಸಗಿ ಸಂಸ್ಥೆಗಳು ಕೂಡ ಗಿಫ್ಟ್ ಸಿಟಿಯಲ್ಲಿನ ಇಂಡಿಯಾ ಇಂಟರ್‌ನ್ಯಾಷನಲ್‌ ಬುಲಿಯನ್ ಎಕ್ಸ್‌ಚೇಂಜ್‌ (ಐಐಬಿಎಕ್ಸ್‌) ಮೂಲಕ ಆಮದು ಮಾಡಿಕೊಳ್ಳಲು ಅವಕಾಶ ಇದೆ. ಇದರಿಂದ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿಯ ಆಮದು ಹೆಚ್ಚಳವಾಯಿತು. ಈ ಹಿಂದೆ, ಅಧಿಕೃತ ಏಜೆನ್ಸಿಗಳು ಮಾತ್ರ ಇಂತಹ ಆಮದುಗಳನ್ನು ನಿರ್ವಹಿಸಬಹುದಾಗಿತ್ತು ಎಂದು ವರದಿ ಹೇಳಿದೆ.

ಯುಎಇಯಿಂದ ಭಾರತಕ್ಕೆ 2022–23ರ ಹಣಕಾಸು ವರ್ಷದಲ್ಲಿ ಒಟ್ಟು ಆಮದು ಮೌಲ್ಯವು ₹4.44 ಲಕ್ಷ ಕೋಟಿ ಆಗಿತ್ತು. 2023–24ರ ಹಣಕಾಸು ವರ್ಷದಲ್ಲಿ ₹4 ಲಕ್ಷ ಕೋಟಿ ಆಗಿದೆ ಎಂದು ವರದಿ ತಿಳಿಸಿದೆ.

ವ್ಯಾಪಾರ ನೀತಿಯ ಸಮತೋಲನ, ದೇಶೀಯ ವರಮಾನದ ರಕ್ಷಣೆ, ಆಮದಿನಲ್ಲಿ ನ್ಯಾಯಸಮ್ಮತವಾದ ಸ್ಪರ್ಧೆ ಸಾಧ್ಯವಾಗುವಂತೆ ಕೆಲವು ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.

ಚಿನ್ನ ಮತ್ತು ಬೆಳ್ಳಿಯ ಆಮದು ಹೆಚ್ಚಳವನ್ನು ತಗ್ಗಿಸಲು ಸಿಇಪಿಎ ಅಡಿಯಲ್ಲಿ ರಿಯಾಯಿತಿ ಸುಂಕದ ದರಗಳನ್ನು ಮರುಮೌಲ್ಯಮಾಪನ ಮಾಡಬೇಕಿದೆ ಮತ್ತು ಪರಿಷ್ಕರಿಸುವ ಅಗತ್ಯವಿದೆ. ಬೆಲೆಬಾಳುವ ಲೋಹದ ಆಮದು ಪ್ರಮಾಣ ಮತ್ತು ಸ್ವರೂಪವನ್ನು ನಿಯಂತ್ರಿಸಲು ಐಐಬಿಎಕ್ಸ್‌ ನಿಯಮಗಳನ್ನು ಬಿಗಿಗೊಳಿಸಬೇಕಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT