ನವದೆಹಲಿ: ಕೈಗಾರಿಕೆ, ಸಾರ್ವಜನಿಕ, ಸಹಕಾರ ಮತ್ತು ಖಾಸಗಿ ವಲಯದ 78 ಲಕ್ಷ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ₹7,500 ಪಿಂಚಣಿ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಇಪಿಎಸ್–95 ರಾಷ್ಟ್ರೀಯ ಆಂದೋಲನ ಸಮಿತಿ (ಎನ್‌ಎಸಿ) ಶುಕ್ರವಾರ ತಿಳಿಸಿದೆ.
ಪಿಂಚಣಿ ಹೆಚ್ಚಳಕ್ಕೆ ಆಗ್ರಹಿಸಿ ನವದೆಹಲಿಯಲ್ಲಿ ಸಮಿತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸಮಿತಿಯ ಪ್ರತಿನಿಧಿಗಳು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನಸುಖ್ ಮಾಂಡವೀಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದ ಬಳಿಕ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ ಎಂದು ಸಮಿತಿ ತಿಳಿಸಿದೆ.
ಸದ್ಯ ಪಿಂಚಣಿದಾರರಿಗೆ ಮಾಸಿಕ ₹1,450 ಪಿಂಚಣಿ ದೊರೆಯುತ್ತಿದೆ. 36 ಲಕ್ಷ ಪಿಂಚಣಿದಾರರು ಕನಿಷ್ಠ ₹1 ಸಾವಿರಕ್ಕಿಂತಲೂ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ. ಹಾಗಾಗಿ, ಈ ಮೊತ್ತ ಹೆಚ್ಚಿಸಲು ಒತ್ತಾಯಿಸಲಾಗಿದೆ ಎಂದು ತಿಳಿಸಿದೆ.
‘ಪಿಂಚಣಿ ಹೆಚ್ಚಳದ ಜೊತೆಗೆ ಅದಕ್ಕೆ ಅನುಗುಣವಾಗಿ ತುಟ್ಟಿಭತ್ಯೆ ನೀಡಬೇಕು. ಪಿಂಚಣಿದಾರರು ಮತ್ತು ಅವರ ಪತ್ನಿಯರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಲಾಗಿದೆ’ ಎಂದು ಸಮಿತಿಯ ಅಧ್ಯಕ್ಷ ಅಶೋಕ್ ರಾವುತ್ ತಿಳಿಸಿದ್ದಾರೆ.