ಮಂಗಳವಾರ, ಜನವರಿ 19, 2021
24 °C

ಬಿಇಎಂಎಲ್‌ ಷೇರು ವಿಕ್ರಯ: ಪ್ರಾಥಮಿಕ ಬಿಡ್ ಆಹ್ವಾನ

ಪಿಟಿಐ Updated:

ಅಕ್ಷರ ಗಾತ್ರ : | |

ಬಿಇಎಂಎಲ್‌ ಕಂಪನಿ

ನವದೆಹಲಿ: ತನ್ನ ಮಾಲೀಕತ್ವದಲ್ಲಿರುವ ಬಿಇಎಂಎಲ್‌ ಕಂಪನಿಯಲ್ಲಿನ ಶೇಕಡ 26ರಷ್ಟು ಷೇರುಗಳನ್ನು ಮಾರಾಟ ಮಾಡಲು ಮುಂದಡಿ ಇರಿಸಿರುವ ಕೇಂದ್ರ ಸರ್ಕಾರವು, ಷೇರು ಖರೀದಿಸಲು ಆಸಕ್ತಿ ತೋರಿಸಿ ಪ್ರಾಥಮಿಕ ಬಿಡ್ ಸಲ್ಲಿಸುವಂತೆ ಆಹ್ವಾನಿಸಿದೆ.

‘ಶೇಕಡ 26ರಷ್ಟು ಷೇರುಗಳನ್ನು ಖರೀದಿಸಿದವರಿಗೆ ಕಂಪನಿಯ ಆಡಳಿತ ನಿರ್ವಹಣೆಯ ಅಧಿಕಾರವೂ ಸಿಗಲಿದೆ. ಎರಡು ಹಂತಗಳ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಈ ಕಂಪನಿಯಿಂದ ಸರ್ಕಾರ ತನ್ನ ಹೂಡಿಕೆಯನ್ನು ಹಿಂದಕ್ಕೆ ಪಡೆಯಲಿದೆ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

ಷೇರು ಖರೀದಿಗೆ ಆಸಕ್ತಿ ಇರುವವರು ಮಾರ್ಚ್‌ 1ರೊಳಗೆ ಅರ್ಜಿ ಸಲ್ಲಿಸಬೇಕು. ಈಗಿನ ಮಾರುಕಟ್ಟೆ ಮೌಲ್ಯದ ಪ್ರಕಾರ ಶೇಕಡ 26ರಷ್ಟು ಷೇರುಗಳ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ ₹ 1,000 ಕೋಟಿ ಸಿಗಬಹುದು. ಬಿಇಎಂಎಲ್‌ ಕಂಪನಿಯ ಷೇರಿನ ಮೌಲ್ಯ ಶುಕ್ರವಾರದ ಅಂತ್ಯದ ವೇಳೆಗೆ ₹ 974.25 ಆಗಿತ್ತು. ರಕ್ಷಣೆ, ರೈಲು, ಇಂಧನ, ಗಣಿಗಾರಿಕೆ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಬಿಇಎಂಎಲ್‌ ಚಟುವಟಿಕೆ ಹೊಂದಿದೆ.

2019–20ರಲ್ಲಿ ಕಂಪನಿಯ ಒಟ್ಟು ಆದಾಯ ₹ 3,028 ಕೋಟಿ ಆಗಿತ್ತು. ಬಿಇಎಂಎಲ್‌ ಖಾಸಗೀಕರಣದ ವಿಚಾರದಲ್ಲಿ ಸಲಹೆ ನೀಡಲು ಕೇಂದ್ರ ಸರ್ಕಾರವು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್‌ ಕಂಪನಿಯನ್ನು ನೇಮಿಸಿದೆ. ಈಗ ಕಂಪನಿಯಲ್ಲಿ ಇರುವ ಸರ್ಕಾರದ ಷೇರುಪಾಲು ಶೇಕಡ 54.03ರಷ್ಟು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು