ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ| ಎಫ್‌ಆ್ಯಂಡ್‌ಒ ವಹಿವಾಟು ತೆರಿಗೆ ಏರಿಕೆ

ಹಣಕಾಸು ಮಸೂದೆ 2023ರಲ್ಲಿ ಪ್ರಸ್ತಾವ
Last Updated 26 ಮಾರ್ಚ್ 2023, 16:22 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಾಯಿದಾ ವಹಿವಾಟಿನ ಮೇಲಿನ ಷೇರು ವಹಿವಾಟು ತೆರಿಗೆಯನ್ನು (ಎಸ್‌ಟಿಟಿ) ಹೆಚ್ಚಿಸುವ ಪ್ರಸ್ತಾವನೆಯು ‘ಹಣಕಾಸು ಮಸೂದೆ 2023’ರಲ್ಲಿ ಇದೆ. ಈ ಮಸೂದೆಗೆ ಲೋಕಸಭೆಯು ಅನುಮೋದನೆ ನೀಡಿದೆ.

ಇದು ನಿಯಮವಾಗಿ ಜಾರಿಗೆ ಬಂದ ನಂತರದಲ್ಲಿ ಎಫ್‌ಆ್ಯಂಡ್‌ಒ ವಹಿವಾಟು ವೆಚ್ಚಗಳು ಹೆಚ್ಚಲಿವೆ. ಈ ಏರಿಕೆಯು ಎಫ್‌ಆ್ಯಂಡ್‌ಒ ವಿಭಾಗದಲ್ಲಿ ಅತಿಯಾಗಿ ವಹಿವಾಟು ನಡೆಯುವುದನ್ನು ತಡೆಯಲು ಅವಕಾಶ ಮಾಡಿಕೊಡಲಿದೆ.

ಆಪ್ಷನ್ಸ್ ವಹಿವಾಟುಗಳ ಮೇಲಿನ ಎಸ್‌ಟಿಟಿ ಪ್ರಮಾಣವನ್ನು ಈಗಿರುವ ಶೇ 0.05ರಿಂದ ಶೇ 0.0625ಕ್ಕೆ ಹೆಚ್ಚಿಸುವ, ಫ್ಯೂಚರ್ಸ್ ವಹಿವಾಟು ಮೇಲಿನ ಎಸ್‌ಟಿಟಿ ಪ್ರಮಾಣವನ್ನು ಈಗಿರುವ ಶೇ 0.01ರಿಂದ ಶೇ 0.0125ಕ್ಕೆ ಹೆಚ್ಚಿಸುವ ಪ್ರಸ್ತಾವನೆಯು ಹಣಕಾಸು ಮಸೂದೆಯಲ್ಲಿ ಇದೆ.

ಎಸ್‌ಟಿಟಿ ಏರಿಕೆಯು ಸರ್ಕಾರದ ವರಮಾನವನ್ನು ಒಂದು ಹಂತದವರೆಗೆ ಹೆಚ್ಚಿಸಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಣ್ಣ ಹೂಡಿಕೆದಾರರಲ್ಲಿ ಹಲವರು ಎಫ್‌ಆ್ಯಂಡ್‌ಒ ವಿಭಾಗದಲ್ಲಿ ಅತಿಯಾಗಿ ವಹಿವಾಟು ನಡೆಸಿ ಹಣ ಕಳೆದುಕೊಳ್ಳುವುದಕ್ಕೆ ಕಡಿವಾಣ ಬೀಳಲಿದೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಎಸ್‌ಟಿಟಿ ಹೆಚ್ಚಳ ಮಾಡಿರುವ ಸಮಯ ಸರಿಯಿಲ್ಲ ಎಂದು ಉದ್ಯಮದ ಸಂಘಟನೆ ಪಿಎಚ್‌ಡಿಸಿಸಿಐ ಅಧ್ಯಕ್ಷ ಸಾಕೇತ್ ದಾಲ್ಮಿಯಾ ಹೇಳಿದ್ದಾರೆ. ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದೆ. ಈ ಸಮಯದಲ್ಲಿ ಎಸ್‌ಟಿಟಿ ಏರಿಕೆ ಮಾಡುವುದು ಹೂಡಿಕೆದಾರರ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ದಾಲ್ಮಿಯಾ ಹೇಳಿದ್ದಾರೆ.

ಹಣಕಾಸು ಮಸೂದೆಯು ಲೋಕಸಭೆಯ ಅನುಮೋದನೆ ಪಡೆದಿದ್ದು ಶುಕ್ರವಾರ. ಆ ದಿನದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಶೇಕಡ 1ರಷ್ಟು ಕುಸಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT