ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ದೂರುಗಳ ಇತ್ಯರ್ಥ: ಕ್ಯಾಬ್ ಕಂಪನಿಗಳಿಗೆ ಕೇಂದ್ರದ ಎಚ್ಚರಿಕೆ

Last Updated 10 ಮೇ 2022, 15:40 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಹಕರಿಂದ ಬರುತ್ತಿರುವ ದೂರುಗಳನ್ನು ಇತ್ಯರ್ಥಪಡಿಸದೆ ಇದ್ದರೆ, ತಮ್ಮ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳದೆ ಇದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರವು ಓಲಾ, ಉಬರ್‌ನಂತಹ ಕ್ಯಾಬ್ ಸೇವಾ ಕಂಪನಿಗಳಿಗೆ ಮಂಗಳವಾರ ಎಚ್ಚರಿಕೆ ನೀಡಿದೆ.

ಕ್ಯಾಬ್ ಚಾಲಕರು ಗ್ರಾಹಕರಿಂದ ಬರುವ ಬುಕಿಂಗ್ ಸ್ವೀಕರಿಸಿದ ನಂತರದಲ್ಲಿ, ಟ್ರಿಪ್ ರದ್ದು ಮಾಡುವಂತೆ ಗ್ರಾಹಕರನ್ನು ಒತ್ತಾಯಿಸುತ್ತಾರೆ. ಇದರಿಂದಾಗಿ ಗ್ರಾಹಕರು ದಂಡ ಪಾವತಿಸಬೇಕಾಗುತ್ತದೆ. ಕೆಲವು ಕ್ಯಾಬ್ ಸೇವಾ ಕಂಪನಿಗಳು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ವಹಿವಾಟು ನಡೆಸುತ್ತಿವೆ ಎಂಬ ದೂರುಗಳು ಗ್ರಾಹಕರಿಂದ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕ್ಯಾಬ್ ಸೇವಾ ಕಂಪನಿಗಳ ಜೊತೆ ಮಂಗಳವಾರ ಸಭೆ ನಡೆಸಿದೆ.

‘ಗ್ರಾಹಕರಿಂದ ಬರುತ್ತಿರುವ ದೂರುಗಳು ಹೆಚ್ಚಾಗುತ್ತಿರುವ ಬಗ್ಗೆ ನಾವು ಕಂಪನಿಗಳಿಗೆ ಅಂಕಿ–ಅಂಶಗಳನ್ನು ನೀಡಿದ್ದೇವೆ. ವ್ಯವಸ್ಥೆ ಸುಧಾರಿಸಿಕೊಳ್ಳಬೇಕು ಎಂದು ಸೂಚಿಸಿದ್ದೇವೆ’ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕ್ಯಾಬ್ ಸೇವಾ ಕಂಪನಿಗಳು ‍ಪರಿಹಾರ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು ಎಂದು ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತೆ ನಿಧಿ ಖರೆ ಹೇಳಿದ್ದಾರೆ. ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನಡೆದುಕೊಳ್ಳುವುದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದನ್ನು ಕಂಪನಿಗಳಿಗೆ ತಿಳಿಸಲಾಗಿದೆ ಎಂದು ಖರೆ ಹೇಳಿದ್ದಾರೆ.

ಓಲಾ, ಉಬರ್, ಮೆರು, ರ್‍ಯಾಪಿಡೊ ಮತ್ತು ಜುಗ್ನು ಕಂಪನಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಲಿಲ್ಲ.

ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸಲು ಕೊಡಬೇಕಿರುವ ಶುಲ್ಕವು ಬೇರೆ ಬೇರೆ ಸಂದರ್ಭಗಳಲ್ಲಿ ಬದಲಾಗುವುದು ಏಕೆ ಎಂದು ಕೇಂದ್ರವು ಕಂಪನಿಗಳನ್ನು ಪ್ರಶ್ನಿಸಿದೆ. ಸೇವೆ ಪಡೆಯಲು ಆ್ಯಪ್ ಬಳಸುವವರ ದತ್ತಾಂಶ ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆಯೇ ಎಂದೂ ಕೇಳಿದೆ.

ಹಾಲಿ ಗ್ರಾಹಕರಿಗೆ ದುಬಾರಿ ಶುಲ್ಕ ವಿಧಿಸಲಾಗುತ್ತದೆ, ಹೊಸ ಗ್ರಾಹಕರಿಗೆ ಕಡಿಮೆ ದರಕ್ಕೆ ಸೇವೆ ಒದಗಿಸಲಾಗುತ್ತದೆ. ಇದು ಸರಿಯಾದ ನಡೆಯಲ್ಲ ಎಂದು ಖರೆ ಈಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT