ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಗಿತದತ್ತ ಶೇಂಗಾ ಎಣ್ಣೆ ಉದ್ಯಮ

ಕಳಪೆ ಗುಣಮಟ್ಟದ ಬೀಜ: ಶೇ 70ರಷ್ಟು ಮಿಲ್‌ಗಳು ಬಾಗಿಲು ಮುಚ್ಚಿವೆ
Last Updated 3 ಜನವರಿ 2019, 20:15 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಈ ವರ್ಷ ಎದುರಾಗಿರುವ ತೀವ್ರ ಬರದ ಕಾರಣ ಶೇಂಗಾ ಬೆಳೆ ಕೈಕೊಟ್ಟಿದ್ದು, ಇದು ಶೇಂಗಾ ಎಣ್ಣೆ ಉದ್ಯಮದ ಮೇಲೆ ನೇರ ಪರಿಣಾಮ ಬೀರಿದೆ.

ಶೇಂಗಾ ಕಾಯಿ ಸುಲಿಯುವ ಮಿಲ್‌ಗಳು (ಡಿಕಾಟಿಕೇಟರ್) ಹಾಗೂ ಆಯಿಲ್ ಮಿಲ್‌ಗಳು ಕಾರ್ಯ ಸ್ಥಗಿತಗೊಳಿಸುವ ಹಾದಿಯಲ್ಲಿವೆ. ಈಗಾಗಲೇ ಶೇ 70ರಷ್ಟು ಮಿಲ್‌ಗಳು ಸ್ಥಗಿತಗೊಂಡಿವೆ. ಉಳಿದವು ಈ ತಿಂಗಳ ಅಂತ್ಯಕ್ಕೆ ಬೀಗ ಹಾಕಲು ದಿನಗಣನೆ ಶುರುವಾಗಿದೆ ಎಂದು ಉದ್ಯಮದ ವ್ಯಾಪಾರಿಗಳು ಹೇಳುತ್ತಾರೆ.

ಈ ಬಗ್ಗೆ ಮಾಹಿತಿ ನೀಡಿದ ಕೊಂಡ್ಲಹಳ್ಳಿ ಮಹೇಂದ್ರ ಆಯಿಲ್ ಇಂಡಸ್ಟ್ರೀಸ್ ಮಾಲೀಕ ಎಂ.ಇ. ಮಂಜುನಾಥ್, ‘ನಾನು ವ್ಯಾಪಾರ ಆರಂಭಿಸಿದ ನಂತರ ಈ ವರ್ಷದಷ್ಟು ಕಳಪೆ ಗುಣಮಟ್ಟದ ಇಳುವರಿ ಕಂಡಿರಲಿಲ್ಲ. ಸಾಮಾನ್ಯವಾಗಿ ಪ್ರತಿ 100 ಗ್ರಾಂ ಕಾಯಿಗೆ ಶೇ 73ರಿಂದ ಶೇ75ರಷ್ಟು ಗ್ರಾಂ ಬೀಜ ಲಭ್ಯವಾಗುತ್ತಿತ್ತು. ಆದರೆ, ಈ ವರ್ಷ ಶೇ 55ರಿಂದ ಶೇ 65 ಗ್ರಾಂ ಬೀಜ ಸಿಗುತ್ತಿದೆ. ಇದರಲ್ಲಿ ಗುಣಮಟ್ಟದ ಎಣ್ಣೆ ತೆಗೆಯಲು ಸಾಧ್ಯವಿಲ್ಲ. ಸಣ್ಣ ಪುಟ್ಟ ಹೋಟೆಲ್‌ಗಳಿಗೆ ಹಾಗೂ ತಿನ್ನಲು ಮಾತ್ರ ಖರೀದಿಸಬಹುದು. ಈ ಕಾರಣಕ್ಕಾಗಿಯೇ ಅನೇಕ ಡಿಕಾಟಿಕೇಟರ್ ಮಾಲೀಕರು ಈ ವರ್ಷ ಬಾಗಿಲು ಮುಚ್ಚಿದ್ದಾರೆ’ ಎಂದು ಹೇಳಿದರು.

ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕುಗಳಲ್ಲಿ ಅಂದಾಜು 60ಕ್ಕೂ ಹೆಚ್ಚು ಡಿಕಾಟಿಕೇಟರ್ ಇವೆ. ಚಳ್ಳಕೆರೆಯಲ್ಲಿ 15 ಡಿಕಾಟಿಕೇಟರ್ ಹಾಗೂ 7 ಮಿಲ್ ನಡೆಯುತ್ತಿವೆ. ಇವು ಯಾವಾಗ ಬೇಕಾದರೂ ಸ್ಥಗಿತವಾಗಬಹುದು.

‘ರಾಜ್ಯದಲ್ಲಿ ಪ್ರತಿವರ್ಷ 4 ಲಕ್ಷ ಟನ್ ಶೇಂಗಾ ವಹಿವಾಟು ಆಗುತ್ತಿತ್ತು. ಈ ವರ್ಷ ಇದರ ಪ್ರಮಾಣ 1.20 ಲಕ್ಷದಿಂದ 1.50 ಲಕ್ಷದಷ್ಟಿದೆ. ಈ ವರ್ಷ ದೊರೆಯುತ್ತಿರುವುದು ‘ಕಲ್ಯಾಣಿ’ ಮಾದರಿ ಬೀಜ. ಇದು ಶೇಂಗಾ ಬೀಜದಲ್ಲೇ ಕಳಪೆ ಗುಣಮಟ್ಟದ್ದು. ಇದನ್ನು ರಫ್ತು ಮಾಡಲು ಸಾಧ್ಯವಿಲ್ಲ. ಯಾವ ರಾಜ್ಯದವರೂ ಖರೀದಿಸುತ್ತಿಲ್ಲ. ಹೆಚ್ಚಾಗಿ ಪಕ್ಷಿಗಳ ಆಹಾರಕ್ಕೆ ಬಳಸುತ್ತಾರೆ’ ಎಂದು ಚಳ್ಳಕೆರೆ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಸತೀಶ್ ತಿಳಿಸಿದರು.

‘ಜಿಎಸ್‌ಟಿಯಿಂದ ಉದ್ಯಮಕ್ಕೆ ತೊಂದರೆಯಾಗಿಲ್ಲ. ಬರ ಹಾಗೂ ಕಳಪೆ ಇಳುವರಿ ಹಿನ್ನಡೆಗೆ ಮುಖ್ಯ ಕಾರಣವಾಗಿದೆ. ಈ ವರ್ಷ ಶೇ 10ರಷ್ಟು ಇಳುವರಿ ಬಂದಿರಬಹುದು. ಉತ್ತಮ ತಳಿಗಳನ್ನು ಅಭಿವೃದ್ಧಿಪಡಿಸುವಂತೆ ಕೃಷಿ ವಿಜ್ಞಾನಿಗಳಿಗೆ ಮನವಿ ಮಾಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಮೊದಲು ಈ ಬಗ್ಗೆ ಗಮನಹರಿಸಬೇಕಿದೆ’ ಎಂದೂ ಅವರು ಹೇಳಿದ್ದಾರೆ.

***

ಗುಣಮಟ್ಟ ಕಡಿಮೆ ಇರುವ ಕಾರಣ ಸಾರ್ಕ್ ದೇಶಗಳೂ ಸೇರಿ ಎಲ್ಲಿಗೂ ಶೇಂಗಾ ರಫ್ತು ಆಗುತ್ತಿಲ್ಲ. ಶೇ 50ರಿಂದ ಶೇ 60 ಗ್ರಾಂ ಕಂಡೀಷನ್ ಹೊಂದಿರುವ ಬೀಜ ದೊರೆಯುತ್ತಿವೆ.

ಸತೀಶ್, ಅಧ್ಯಕ್ಷ, ವಾಣಿಜ್ಯೋದ್ಯಮಿಗಳ ಸಂಘ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT