ಸೋಮವಾರ, ಮೇ 23, 2022
30 °C

ಜಿಎಸ್‌ಟಿ: ಶೇ 5ರ ತೆರಿಗೆ ಸ್ಲ್ಯಾಬ್‌ ರದ್ದು?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಶೇಕಡ 5ರ ತೆರಿಗೆ ಸ್ಲ್ಯಾಬ್‌ ರದ್ದು ಮಾಡುವ ಬಗ್ಗೆ ಮುಂದಿನ ತಿಂಗಳು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಜಿಎಸ್‌ಟಿ ಮೂಲಕ ಸಿಗುವ ವರಮಾನವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ರಾಜ್ಯಗಳು ಒಲವು ಹೊಂದಿದ್ದು, ವ್ಯಾ‍ಪಕವಾಗಿ ಬಳಕೆಯಾಗುವ ಕೆಲವು ಸರಕುಗಳನ್ನು ಶೇ 3ರ ತೆರಿಗೆ ಸ್ಲ್ಯಾಬ್‌ಗೆ ವರ್ಗಾವಣೆ ಮಾಡುವ ಹಾಗೂ ಇನ್ನುಳಿದ ಸರಕುಗಳನ್ನು ಶೇ 8ರ ತೆರಿಗೆ ಸ್ಲ್ಯಾಬ್‌ಗೆ ವರ್ಗಾವಣೆ ಮಾಡುವ ಬಗ್ಗೆ ಮಂಡಳಿಯು ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈಗ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ನಾಲ್ಕು ಹಂತಗಳಲ್ಲಿ (ಶೇ 5, 12, 18 ಮತ್ತು 28) ತೆರಿಗೆ ವಿಧಿಸಲಾಗುತ್ತಿದೆ. ಅಲ್ಲದೆ, ಚಿನ್ನ ಮತ್ತು ಚಿನ್ನದ ಆಭರಣಗಳಿಗೆ ಶೇ 3ರಷ್ಟು ತೆರಿಗೆ ಇದೆ. ಬ್ರ್ಯಾಂಡ್ ಇಲ್ಲದ ಹಾಗೂ ಪ್ಯಾಕ್ ಮಾಡಿರದ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದೆ.

ವರಮಾನ ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದ ಮಂಡಳಿಯು, ವಿನಾಯಿತಿ ಇರುವ ಕೆಲವು ಆಹಾರೇತರ ವಸ್ತುಗಳನ್ನು ಶೇ 3ರ ತೆರಿಗೆ ಸ್ಲ್ಯಾಬ್‌ಗೆ ತರುವ ಬಗ್ಗೆಯೂ ಪರಿಶೀಲಿಸಬಹುದು ಎನ್ನಲಾಗಿದೆ. ಶೇ 5ರ ತೆರಿಗೆ ಸ್ಲ್ಯಾಬ್‌ ರದ್ದು ಮಾಡಿ, ಅದನ್ನು ಶೇ 7, 8 ಅಥವಾ 9ಕ್ಕೆ ಹೆಚ್ಚಿಸುವ ಬಗ್ಗೆಯೂ ಚರ್ಚೆಯಾಗುವ ನಿರೀಕ್ಷೆ ಇದೆ. ಒಂದು ಲೆಕ್ಕಾಚಾರದ ಪ್ರಕಾರ ಶೇ 5ರ ತೆರಿಗೆ ಸ್ಲ್ಯಾಬ್‌ನಲ್ಲಿನ ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ಶೇ 1ರಷ್ಟು ತೆರಿಗೆ ವಿಧಿಸಿದರೆ ವಾರ್ಷಿಕವಾಗಿ ಹೆಚ್ಚುವರಿ ₹ 50 ಸಾವಿರ ಕೋಟಿ ವರಮಾನ ಸಿಗಲಿದೆ. ಈ ತೆರಿಗೆ ಸ್ಲ್ಯಾಬ್‌ನಲ್ಲಿ ಮುಖ್ಯವಾಗಿ ಆಹಾರ ವಸ್ತುಗಳು ಇವೆ.

ಈಗ ಶೇ 5ರಷ್ಟು ತೆರಿಗೆ ಇರುವ ಬಹುತೇಕ ವಸ್ತುಗಳಿಗೆ ಶೇ 8ರಷ್ಟು ತೆರಿಗೆ ವಿಧಿಸಲು ಮಂಡಳಿ ತೀರ್ಮಾನಿಸಬಹುದು ಎಂದು ಮೂಲಗಳು ಹೇಳಿವೆ.

ಜಿಎಸ್‌ಟಿ ವ್ಯವಸ್ಥೆಯಿಂದಾಗಿ ರಾಜ್ಯಗಳಿಗೆ ಆಗಬಹುದಾದ ವರಮಾನ ನಷ್ಟಕ್ಕೆ ಪರಿಹಾರ ಕೊಡುವ ಕ್ರಮವು ಜೂನ್‌ಗೆ ಕೊನೆಗೊಳ್ಳಲಿದೆ. ಹೀಗಾಗಿ, ಜಿಎಸ್‌ಟಿ ವರಮಾನದ ವಿಚಾರದಲ್ಲಿ ರಾಜ್ಯಗಳು ಕೇಂದ್ರದ ಮೇಲಿನ ಅವಲಂಬನೆ ನಿವಾರಿಸಿಕೊಳ್ಳುವುದು ಮಹತ್ವ ಪಡೆದುಕೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.