ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವಿಮೆ ಕ್ಲೇಮ್‌: ತಿರಸ್ಕೃತ ಆಗಲು ಕಾರಣಗಳೇನು?

Last Updated 22 ಏಪ್ರಿಲ್ 2022, 15:30 IST
ಅಕ್ಷರ ಗಾತ್ರ

ಆರೋಗ್ಯ ವಿಮೆಯ ಅಡಿ ನೀವು ಸಲ್ಲಿಸುವ ಕ್ಲೇಮ್ ಅರ್ಜಿ ತಿರಸ್ಕೃತ ಆಗದಂತೆ ನೋಡಿಕೊಳ್ಳಲು ಈ ಐದು ಅಂಶಗಳನ್ನು ನೆನಪಿನಲ್ಲಿ ಇರಿಸಿಕೊಳ್ಳಿ.

* ಹಿಂದಿನ ಅಥವಾ ಪ್ರಸ್ತುತ ಅನಾರೋಗ್ಯವನ್ನು ಮರೆಮಾಚುವುದು: ಆರೋಗ್ಯ ವಿಮೆ ಪಾಲಿಸಿ ಖರೀದಿಸುವಾಗ ಪ್ರಾಮಾಣಿಕವಾಗಿರಿ. ನಿಮ್ಮ ಆರೋಗ್ಯದ ವಿಚಾರದಲ್ಲಿ ಹಿಂದೆ ಏನೇನು ಆಗಿತ್ತು ಎಂಬುದನ್ನು ವಿವರವಾಗಿ ತಿಳಿಸಿ. ಪಾಲಿಸಿ ಖರೀದಿಯ ಸಮಯದಲ್ಲಿ ನಿಮ್ಮಲ್ಲಿ ಇರಬಹುದಾದ ಯಾವುದೇ ಕಾಯಿಲೆಯನ್ನು ತಿಳಿಸದೆ ಇದ್ದರೆ ನಂತರದ
ದಿನಗಳಲ್ಲಿ ಅದು ಕ್ಲೇಮ್ ತಿರಸ್ಕೃತವಾಗಲು ಕಾರಣವಾಗಬಹುದು.

* ವಿಮಾ ಮೊತ್ತ ಮೀರುವುದು: ವಿಮಾ ರಕ್ಷಣೆಯ ಮೊತ್ತ ಅಂದರೆ, ಆಸ್ಪತ್ರೆಗೆ ನೀವು ದಾಖಲಾದರೆ ನಿಮ್ಮ ವಿಮಾ ಕಂಪನಿಯು ಒಂದು ವರ್ಷದ ಅವಧಿಯಲ್ಲಿ ನಿಮಗೆ ಪಾವತಿಸಬಹುದಾದ ಗರಿಷ್ಠ ಮೊತ್ತ. ಉದಾಹರಣೆಗೆ, ನಿಮ್ಮ ಬಳಿ ₹ 5 ಲಕ್ಷದ ವಿಮಾ ರಕ್ಷಣೆ ಇದೆ ಎಂದು ಭಾವಿಸಿ. ನಿಮ್ಮ ಆಸ್ಪತ್ರೆಯ ಬಿಲ್ ಮೊತ್ತ ₹ 6 ಲಕ್ಷವಾಗಿದ್ದರೆ ವಿಮಾ ಕಂಪನಿಯು ನಿಮಗೆ ಕೇವಲ ₹ 5 ಲಕ್ಷ ಪಾವತಿಸುತ್ತದೆ. ಇನ್ನುಳಿದ ₹ 1 ಲಕ್ಷವನ್ನು ನೀವೇ ಭರಿಸಬೇಕಾಗುತ್ತದೆ.

ಆದರೆ, ನೀವು ಆ್ಯಡ್-ಆನ್ ಪ್ರಯೋಜನ ಪಡೆದುಕೊಂಡಿದ್ದರೆ ವಿಮಾ ರಕ್ಷಣೆಯ ಮೊತ್ತ ಒಂದು ವರ್ಷದೊಳಗೆ ಮುಗಿದುಹೋದರೂ, ಅದನ್ನು ಸ್ವಯಂಚಾಲಿತವಾಗಿ ಮತ್ತೆ ಭರ್ತಿ ಮಾಡಿಕೊಳ್ಳಬಹುದು. ಆಗ ನಿಮ್ಮ ಕ್ಲೇಮ್ ಅರ್ಜಿ ತಿರಸ್ಕೃತ ಆಗುವುದಿಲ್ಲ.

* ಕಾಯುವಿಕೆಯ ಅವಧಿ: ಬಹುತೇಕ ಆರೋಗ್ಯ ವಿಮೆ ಪಾಲಿಸಿಗಳು ಆರಂಭಿಕ ಕಾಯುವಿಕೆಯ ಅವಧಿಯೊಂದಿಗೆ ಬರುತ್ತವೆ. ಸಾಮಾನ್ಯವಾಗಿ, ಪಾಲಿಸಿ ಸಕ್ರಿಯಗೊಳಿಸಲು, 15ರಿಂದ 30 ದಿನಗಳ ಅವಧಿ ಇರುತ್ತದೆ. ಪಾಲಿಸಿ ಪಡೆಯುವ ವ್ಯಕ್ತಿಯಲ್ಲಿ ಅದಾಗಲೇ ಇರಬಹುದಾದ ಕಾಯಿಲೆಗಳಿಗಾಗಿ ಈ ಅವಧಿಯು 2ರಿಂದ 4 ವರ್ಷಗಳವರೆಗೆ ಕಾಯುವಿಕೆ ಅವಧಿ ಇರುತ್ತದೆ.

ಕಾಯುವಿಕೆ ಅವಧಿಯ ಸಮಯದಲ್ಲಿ ವ್ಯಕ್ತಿಗೆ ಆರೋಗ್ಯ ವಿಮೆ ಅಡಿ ಹಣ ಕ್ಲೇಮ್‌ ಮಾಡಲು ಅವಕಾಶ ಇಲ್ಲ.

* ಕೆಲವು ವಿನಾಯಿತಿಗಳು (Specific Exclusions): ನಿಮ್ಮ ವಿಮಾ ಪಾಲಿಸಿಯು ಕೆಲವು ಕಾಯಿಲೆಗಳನ್ನು ಕವರ್ ಮಾಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೆ, ಅಂತಹ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಸಲ್ಲಿಸುವ ಕ್ಲೇಮ್ ತಿರಸ್ಕೃತವಾಗುತ್ತದೆ. ಹೀಗಾಗಿ, ನಿಮಗೆ ಯಾವ ಕಾಯಿಲೆಗಳಿಗೆ ವಿಮೆಯ ರಕ್ಷೆ ಸಿಗುವುದಿಲ್ಲ ಎಂಬುದನ್ನು ತಿಳಿಸಲು ವಿಮೆ ಒದಗಿಸುವವರಲ್ಲಿ ಕೇಳಿ.

* ಪಾಲಿಸಿಯ ನಿಯಮಗಳು: ಪಾಲಿಸಿಯಲ್ಲಿನ ಕೆಲವು ನಿಯಮಗಳ ಉಲ್ಲಂಘನೆಯು ಕ್ಲೇಮ್ ತಿರಸ್ಕಾರಕ್ಕೆ ಕಾರಣವಾಗಬಹುದು. ಉದಾಹರಣೆಗೆ, ಕೋವಿಡ್ ಕ್ಲೇಮ್‌ ಸಂದರ್ಭವನ್ನು ಪರಿಗಣಿಸೋಣ. ವಿಮೆ ಹೊಂದಿರುವ ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಕೋವಿಡ್-19ರಿಂದ ಹೆಚ್ಚು ತೊಂದರೆಗೆ ‌ಒಳಗಾದ ಯಾವುದೇ ರಾಷ್ಟ್ರಕ್ಕೆ ಪ್ರಯಾಣಿಸಿದ ಇತಿಹಾಸ ಹೊಂದಿದ್ದರೆ, ನಿಮ್ಮ ವಿಮಾ ಕಂಪನಿಯು ಕ್ಲೇಮ್ ತಿರಸ್ಕರಿಸಬಹುದು.

ಆರೋಗ್ಯ ವಿಮೆ ಖರೀದಿಸುವ ಮೊದಲು ಸಂಪೂರ್ಣವಾದ, ವಾಸ್ತವವಾದ, ನಿಖರ ಮಾಹಿತಿಯನ್ನು ನೀಡುವುದು ಅತಿಮುಖ್ಯ.

(ಲೇಖಕ ಡಿಜಿಟ್ ಇನ್ಶೂರೆನ್ಸ್ ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT