ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಸಾಲ ನಿರ್ವಹಣೆ ಹೇಗೆ?

Last Updated 30 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಸ್ವಂತ ಮನೆ ಕನಸನ್ನು ನನಸು ಮಾಡುವುದು ಹಲವು ಸಂದರ್ಭದಲ್ಲಿ ಸವಾಲಿನದ್ದು. ಸಾಕಷ್ಟು ಹಣವಿದ್ದರೆ ಯಾವುದೇ ತೊಂದರೆ ಇಲ್ಲದೆ ಮನೆ ನಿರ್ಮಿಸಬಹುದು. ಒಂದು ವೇಳೆ ಇಲ್ಲದೆ ಇದ್ದರೆ ಆಗ ಸಾಕಷ್ಟು ಹಣಕಾಸಿನ ವ್ಯವಸ್ಥೆ ಮಾಡಲೇಬೇಕು. ಸ್ವಂತ ಮನೆ ಹೊಂದುವುದು ಇಂದು ಹೆಮ್ಮೆ ವಿಚಾರ. ಇದು ಸಾಕಾರವಾಗಬೇಕಾದರೆ ಗೃಹಸಾಲದ ಮೊರೆ ಹೋಗಬೇಕಾಗುತ್ತದೆ. ಇದು ದೊಡ್ಡ ಹಣಕಾಸಿನ ಸಿದ್ಧತೆ ವಿಚಾರವೂ ಆಗಿದೆ. ಯಾವುದೇ ಗೃಹಸಾಲ ಪಡೆದರೆ ಅದರ ಅವಧಿಗೆ ಅನುಗುಣವಾಗಿ ಸಮಾನವಾದ ತಿಂಗಳ ಕಂತಿನಲ್ಲಿ ಅದನ್ನು ಮರುಪಾವತಿ ಮಾಡಬೇಕಾಗುತ್ತದೆ.

ಸಾಲದ ಮರುಪಾವತಿ ಮಾಡುವುದರಿಂದ ನಿಮ್ಮನ್ನು ಅದು ಹಣಕಾಸಿನ ಹೊರೆಯಿಂದ ಬಿಡುಗಡೆ ಮಾಡುವುದರ ಜತೆಗೆ ಸಾಲದ ಅವಧಿಯಲ್ಲಿ ಬಡ್ಡಿ ಕಟ್ಟುವುದನ್ನೂ ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದಕ್ಕೆ ಕೆಲವು ಸಲಹೆಗಳೂ ಇಲ್ಲಿವೆ. ಸರಿಯಾದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ ಸಾಲದ ಆಯ್ಕೆಯಂತೆಯೆ ಅದಕ್ಕೆ ಸರಿಯಾದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ನಿಮ್ಮ ವಾರ್ಷಿಕ ಆದಾಯವನ್ನು ಅವಲಂಬಿಸಿರುತ್ತದೆ. ಅರ್ಜಿದಾರರ ಆದಾಯಮಟ್ಟ ಅವಲಂಬಿಸಿ ಸಾಲ ಕೊಡುವವರು ಆದಾಯ ಅನುಪಾತದ ಶೇ 35 ರಿಂದ ಶೇ 50 ರ ಕಂತನ್ನು ಒಪ್ಪಿಕೊಳ್ಳುತ್ತಾರೆ. ಹೆಚ್ಚಿನ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಂಡಿದ್ದರೆ ಪಾವತಿ ಕಂತೂ ಸಹ ಕಡಿಮೆಯಾಗುತ್ತದೆ. ಯಾವಾಗಲಾದರೂ ನಿಮ್ಮ ಆದಾಯದಲ್ಲಿ ಹೆಚ್ಚಾದರೆ ಆಗ ಮರುಪಾವತಿ ಮೊತ್ತವನ್ನೂ ಹೆಚ್ಚಿಸಿಕೊಳ್ಳಬಹುದು.

ಮುಂಚಿತ ಪಾವತಿ ಮಾಡಿ
ದೊಡ್ಡ ಮೊತ್ತದ ಹಣವನ್ನು ಮೊದಲೇ ಪಾವತಿ ಮಾಡುವುದರಿಂದ ಕಟ್ಟಬಹುದಾದ ಬಡ್ಡಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ದೀರ್ಘಾವಧಿಯಲ್ಲಿ ಹೊರೆಯನ್ನು ಇಳಿಸಿಕೊಳ್ಳಬಹುದು. ಸಾಮಾನ್ಯವಾಗಿ ಬ್ಯಾಂಕ್‌ಗಳು ಇಲ್ಲವೇ ಗೃಹ ಸಾಲದ ಹಣಕಾಸು ಸಂಸ್ಥೆಗಳು ಭಾಗಶಃ ಪಾವತಿ ಮತ್ತು ಮುಂಚಿತ ಪಾವತಿಗೆ ಶುಲ್ಕ ವಿಧಿಸುವುದಿಲ್ಲ. ಸ್ಟಾಕ್‌ ಮತ್ತು ಷೇರುಗಳು, ಆಸ್ತಿ ಮಾರಾಟ, ಸಂಬಳದ ಬೋನಸ್, ಠೇವಣಿ (ಎಫ್‌ಡಿ)ಮುಕ್ತಾಯಗೊಳಿಸಿದರೆ ಸಿಗುವ ಹಣ, ತೆರಿಗೆ ಉಳಿತಾ ಹೂಡಿಕೆಗಳು ಅವಧಿ ಮುಕ್ತಾಯವಾದಾಗ ದೊರೆಯುವ ಹಣ ಹೀಗೆ ಇತರೆ ಹಲವನ್ನು ಸಾಲದ ಮುಂಚಿತ ಪಾವತಿಗೆ ಬಳಸಿಕೊಳ್ಳಬಹುದು.

ಹಣಕಾಸು ಮೂಲಗಳನ್ನು ಗುರುತಿಸಿಕೊಳ್ಳಿ
ಉಳಿತಾಯ ಮತ್ತು ಹೂಡಿಕೆಯ ಮೂಲಗಳಾದ ಇಪಿಎಫ್‌, ಪಿಪಿಎಫ್‌, ಅಂಚೆ ಠೇವಣಿಗಳು ಮತ್ತು ಯೂಲಿಪ್‌ಗಳ ಪಟ್ಟಿಯೊಂದನ್ನು ಮಾಡಿಕೊಳ್ಳಿ. ಇದರಿಂದ ಹೆಚ್ಚಿನ ‍ಪ್ರತಿಫಲ ಇಲ್ಲದ ಅನಗತ್ಯ ಹೂಡಿಕೆ ಮೇಲೆ ಅವಲಂಬನೆಯಾಗುವುದನ್ನು ತ‍ಪ್ಪಿಸಬಹುದು. ಇಂತಹ ಯಾವುದೇ ಹೂಡಿಕೆಗಳನ್ನು ಮುಕ್ತಾಯ ಮಾಡುವುದು ಜಾಣತನವಾಗುತ್ತದೆ. ಮನೆ ಸಾಲದ ಇಎಂಐ ಪಾವತಿ ಮೇಲೆ ಗಮನಹರಿಸುವುದು ಒಳ್ಳೆಯದು.

ಕಡಿಮೆ ಬಡ್ಡಿ ಸಿಗುವ ಕಡೆ ಗಮನಹರಿಸಿ
ಕಡಿಮೆ ಬಡ್ಡಿ ಮತ್ತು ಹೆಚ್ಚಿನ ನಿರ್ಬಂಧಗಳಿಲ್ಲದ ಸಾಲದ ಮೂಲಗಳ ಕಡೆಗೆ ಗಮನಹರಿಸಿದರೆ ಮನೆ ಸಾಲದ ಹೊರೆ ಇನ್ನೂ ಕಡಿಮೆಯಾಗುತ್ತದೆ. ಬ್ಯಾಂಕ್ ಮತ್ತು ಗೃಹಸಾಲ ಸಂಸ್ಥೆಗಳು ಯಾವಾಗ ಗೃಹಸಾಲದ ಬಡ್ಡಿದರವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ನೋಡುತ್ತಾ ಇರಬೇಕು. ಆಗ ಈಗಾಗಲೇ ಸಾಲ ಪಡೆದ ಸಂಸ್ಥೆ ಇಲ್ಲವೇ ಸಾಲಗಾರರಲ್ಲಿ ಸಹ ಬಡ್ಡಿ ಕಡಿಮೆ ಮಾಡುವಂತೆ ಮನವಿ ಮಾಡಲು ಅವಕಾಶವಾಗುತ್ತದೆ.

ತಿಂಗಳ ಪಾವತಿ ತಪ್ಪಿಸಬೇಡಿ
ಹಣಕಾಸು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಉತ್ತಮ ಕ್ರೆಡಿಟ್‌ ಇತಿಹಾಸವಿರುವಂತೆ ನೋಡಿಕೊಳ್ಳುವುದು ಅತೀ ಅಗತ್ಯ. ಪ್ರತಿ ತಿಂಗಳ ಪಾವತಿ (ಇಎಂಐ) ತಪ್ಪಿಹೋಗದಂತೆ ಗಮನವಿಟ್ಟರೆ ಹೊರೆ ಕಡಿಮೆಯಾಗುತ್ತದೆ.
(ಆಧಾರ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌)

***

ಆನ್‌ಮೊಬೈಲ್‌ ವಿಡಿಯೊ
ಮೊಬೈಲ್ ಮನರಂಜನಾ ಸಂಸ್ಥೆ ಆನ್ ಮೊಬೈಲ್ ಕಂಪನಿಯು ಆನ್‌ಮೊ (ONMO) ವಿಡಿಯೊಗಳನ್ನು ಬಿಡುಗಡೆ ಮಾಡಿದೆ.

ಜಾಗತಿಕ ಮಟ್ಟಕ್ಕೆ ಹೋಲಿಸಿದರೆ, ಭಾರತೀಯರಲ್ಲಿ ತಮ್ಮ ಸ್ಥಳೀಯ ಭಾಷೆಯ ಬಗ್ಗೆ ಅಭಿಮಾನ ಹೆಚ್ಚು. ತಮ್ಮ ಸಮುದಾಯ ಮತ್ತು ಸಂಸ್ಕೃತಿಗೆ ತುಂಬಾ ಹತ್ತಿರವಿರುವ ಕಾರಣ ಭಾರತೀಯರು ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಮಾಹಿತಿಯನ್ನು ಅಪೇಕ್ಷೆ ಪಡುತ್ತಾರೆ. ಆದರೆ, ಅಪೇಕ್ಷಿತ ವಿಷಯವು, ವಿವಿಧ ಚಾನೆಲ್ ಗಳಿಗೆ ಸಂಬಂಧ ಪಟ್ಟಂತೆ ಬೇರೊಂದು ಸ್ಥಳದಲ್ಲಿ, ಮತ್ತ್ಯಾವುದೊ ಸ್ವರೂಪದ್ಲಿ ಲಭ್ಯವಿರುವುದೇ ದೊಡ್ಡ ಸವಾಲಾಗಿದೆ. ಆನ್‌ಮೊ ವಿಡಿಯೊ, ಮನರಂಜನೆಯ ‘ಏಕೈಕ ನಿಲುಗಡೆಯ ತಾಣ’ವಾಗಲಿದೆ. ಆರಂಭದಲ್ಲಿ ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಬಂಗಾಳಿ-ಈ ಐದು ಭಾಷೆಗಳಲ್ಲಿ ವಿಶೇಷ ವಿಷಯಗಳನ್ನು ಗ್ರಾಹಕರಿಗೆ ಒದಗಿಸಲಿದೆ.

ಗೃಹಿಣಿ, ಕಾಲೇಜು ವಿದ್ಯಾರ್ಥಿ, ಶಾಲಾ ಮಕ್ಕಳು, ವೃತ್ತಿನಿರತ ವೃತ್ತಿಪರರು ಅಥವಾ ಹಿರಿಯ ನಾಗರಿಕರು-ಯಾರೇ ಆಗಲಿ, ಆನ್‌ಮೊ ವಿಡಿಯೊಗಳು ಎಲ್ಲರಿಗೂ ಇಷ್ಟ ಆಗುವ ಮನರಂಜನೆಯ ವಿಧದಲ್ಲಿ ಮೂಡಿ ಬರಲಿವೆ. ಮೂವಿ ದೃಶ್ಯಾವಳಿ, ಅಡುಗೆ ವಿಧಾನ, ಆಸಕ್ತಿಯ ಸ್ಥಳ, ಅಲಂಕಾರ ಸಲಹೆ, ಮಕ್ಕಳ ಮನರಂಜನೆ, ಭಕ್ತಿ, ಆರೋಗ್ಯ ಮತ್ತು ಫಿಟ್ನೆಸ್ ಮುಂತಾದ ವಿಭಾಗಗಳನ್ನು ಒಳಗೊಂಡಿರಲಿದೆ. ಇದರ ಚಂದಾದಾರಿಕೆ ಶುಲ್ಕ ಕಡಿಮೆ ಇದೆ. ವೆಬ್, ಮೊಬೈಲ್ ಮತ್ತು ಕಡಿಮೆ ಬ್ಯಾಂಡ್‌ ವಿಡ್ತ್‌ಗೂ ಹೊಂದಿಕೊಳ್ಳುವಂತೆ ವಿಡಿಯೊ ರೂಪಿಸಲಾಗಿದೆ.

ಮಾಹಿತಿ ಜಾಲ ಮತ್ತು ಸ್ಮಾರ್ಟ್ಫೋನ್‌ಗಳ ಹೆಚ್ಚಿನ ಲಭ್ಯತೆ ಮತ್ತು ಕಡಿಮೆ ವೆಚ್ಚದ ಕಾರಣ ಡಿಜಿಟಲ್ ಮಾರುಕಟ್ಟೆಯಲ್ಲಿ ಸ್ಥಳೀಯ ವಿದ್ಯಮಾನಗಳಿಗೆ ಅತಿದೊಡ್ಡ ಮಾರುಕಟ್ಟೆ ಲಭ್ಯ ಇರಲಿದೆ. ಮಾಹಿತಿಗೆ www.onmobile.com ತಾಣಕ್ಕೆ ಭೇಟಿ ನೀಡಬಹುದು.

ರೈಲ್ವೆ ದೂರಿಗೆ ‘ಜೀರೊ ಎಫ್‌ಐಆರ್‌’
ರೈಲುಗಳಲ್ಲಿ ಪ್ರಯಾಣಿಸುವವರು ಲೈಂಗಿಕ ಕಿರುಕುಳ, ಅಪರಾಧ ವಿಷಯಗಳಿಗೆ ಸಂಬಂಧಿಸಿದಂತೆ ದೂರು ನೀಡಲು ಇನ್ನು ಮುಂದೆ ಮುಂದಿನ ರೈಲು ನಿಲ್ದಾಣದವರೆಗೂ ಕಾಯಬೇಕಾಗಿಲ್ಲ, ರೈಲ್ವೆ ಆ್ಯಪ್‌ನ ‘ಜೀರೊ ಎಫ್‌ಐಆರ್‌’ ಅಪ್ಲಿಕೇಷನ್‌ ಮೂಲಕ ತಕ್ಷಣಕ್ಕೆ ದೂರು ದಾಖಲಿಸಬಹುದು. ದೂರು ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ರೈಲ್ವೆ ಪೊಲೀಸರು ಪ್ರಯಾಣಿಕರ ಬಳಿಗೆ ಬಂದು ಭದ್ರತೆ ನೀಡಲಿದ್ದಾರೆ. ಈ ಸೌಲಭ್ಯವು ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲಿದೆ. ದೂರು ನೀಡುವಾಗ ರೈಲು ಮತ್ತು ಸೀಟ್‌ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ. ಈ ರೀತಿ ದೂರು ನೀಡಿದ ಕೂಡಲೇ ಎಫ್‌ಐಆರ್ ಸ್ವಯಂಚಾಲಿತವಾಗಿ ದಾಖಲಾಗುತ್ತದೆ. ಇದರ ಒಂದು ದಾಖಲೆ ಪ್ರತಿ ಟಿಕೆಟ್ ಕಲೆಕ್ಟರ್‌ ಮತ್ತು ರೈಲ್ವೆ ಪೊಲೀಸರಿಗೆ ರವಾನೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT