ನವದೆಹಲಿ : ಸತತ ಮೂರು ತ್ರೈಮಾಸಿಕಗಳಲ್ಲಿ ಹೂಡಿಕೆಯ ಹೊರಹರಿವು ಕಂಡಿದ್ದ ಹೈಬ್ರಿಡ್ ಮ್ಯೂಚುವಲ್ ಫಂಡ್‌ಗಳು ಈಗ ಮತ್ತೆ ಹೂಡಿಕೆದಾರರನ್ನು ಆಕರ್ಷಿಸಿವೆ. ಜೂನ್ ತ್ರೈಮಾಸಿಕದಲ್ಲಿ ಹೂಡಿಕೆದಾರರು ಹೈಬ್ರಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ₹14 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ.
2021ರ ಡಿಸೆಂಬರ್ ತ್ರೈಮಾಸಿಕದ ಬಳಿಕ ಆಗಿರುವ ಗರಿಷ್ಠ ಹೂಡಿಕೆ ಇದಾಗಿದೆ. ಆ ಅವಧಿಯಲ್ಲಿ ₹20,422 ಕೋಟಿ ಹೂಡಿಕೆ ಆಗಿತ್ತು.
2022ರ ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಆಗಿದ್ದಕ್ಕಿಂತಲೂ (₹10,084 ಕೋಟಿ ) ಹೆಚ್ಚು ಹೂಡಿಕೆ ಆಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.
ಹೈಬ್ರಿಡ್ ಫಂಡ್‌ಗಳ ನಿರ್ವಹಣಾ ಸಂಪತ್ತು ಮೌಲ್ಯವೂ ಹೆಚ್ಚಾಗಿದೆ. ಈಕ್ವಿಟಿ ಮತ್ತು ಡೆಟ್ ಫಂಡ್‌ಗಳ ಸಂಯೋಜನೆಯೇ ಹೈಬ್ರಿಡ್ ಫಂಡ್.
ಹೂಡಿಕೆದಾರರು ಹೈಬ್ರಿಡ್ ಫಂಡ್‌ಗಳಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹14,436 ಕೋಟಿ, ಡಿಸೆಂಬರ್ ತ್ರೈಮಾಸಿಕದಲ್ಲಿ ₹7,041 ಕೋಟಿ ಹಾಗೂ ಮಾರ್ಚ್ ತ್ರೈಮಾಸಿಕದಲ್ಲಿ ₹7,420 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು.
ಡೆಟ್ ಫಂಡ್‌ಗಳಿಗೆ ತೆರಿಗೆ ಲೆಕ್ಕಹಾಕುವ ವಿಚಾರದಲ್ಲಿ ಮೊದಲು ಇದ್ದ ನಿಯಮಗಳನ್ನು ಬದಲಾಯಿಸಿರುವುದು ಹೈಬ್ರಿಡ್ ಫಂಡ್‌ಗಳಲ್ಲಿ ಹೂಡಿಕೆ ಹೆಚ್ಚಾಗಲು ಕಾರಣ ಎಂದು ಕ್ಲೈಂಟ್ ಅಸೋಸಿಯೇಟ್ಸ್‌ನ ಸಹ ಸಂಸ್ಥಾಪಕ ಹಿಮಾಂಶು ಕೊಹ್ಲಿ ಹೇಳಿದ್ದಾರೆ. ಹೂಡಿಕೆದಾರರು ಡೆಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಪ್ರಮಾಣವನ್ನು ಕಡಿಮೆ ಮಾಡಿದ್ದು, ಹೈಬ್ರಿಡ್ ಫಂಡ್‌ಗಳಲ್ಲಿ ಮಾಡುವ ಹೂಡಿಕೆಯನ್ನು ಹೆಚ್ಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜೂನ್ ತ್ರೈಮಾಸಿಕದಲ್ಲಿ ಆಗಿರುವ ಒಟ್ಟು ಹೂಡಿಕೆಯಲ್ಲಿ ಶೇ 98ರಷ್ಟು (₹13,721 ಕೋಟಿ) ಆರ್ಬಿಟ್ರೇಜ್ ಫಂಡ್‌ನಿಂದಲೇ ಬಂದಿದೆ.
2023ರ ಜೂನ್ ತ್ರೈಮಾಸಿಕದ ಅಂತ್ಯಕ್ಕೆ ಹೈಬ್ರಿಡ್ ಫಂಡ್‌ಗಳ ನಿರ್ವಹಣಾ ಸಂಪತ್ತು ಮೌಲ್ಯವು ಶೇ 11ರಷ್ಟು ಹೆಚ್ಚಾಗಿದ್ದು ₹5.25 ಲಕ್ಷ ಕೋಟಿಗೆ ಏರಿಕೆ ಕಂಡಿದೆ. 2022ರ ಜೂನ್ ತ್ರೈಮಾಸಿಕದಲ್ಲಿ ₹4.71 ಲಕ್ಷ ಕೋಟಿಯಷ್ಟು ಇತ್ತು.
ಹೈಬ್ರಿಡ್ ಫಂಡ್‌ಗಳ ನಿರ್ವಹಣಾ ಸಂಪತ್ತು ವೃದ್ಧಿ ಡೆಟ್ ಫಂಡ್‌ಗಳಲ್ಲಿ ತಗ್ಗಿದ ಹೂಡಿಕೆ