ಮಂಗಳವಾರ, ಆಗಸ್ಟ್ 20, 2019
27 °C
ಗ್ರ್ಯಾಂಟ್‌ ಥೋರ್ನ್‌ಟನ್‌ ಪ್ರಾಥಮಿಕ ವರದಿ

ಐಎಲ್‌ಆ್ಯಂಡ್‌ಎಫ್‌ಎಸ್‌: ಉತ್ತಮ ರೇಟಿಂಗ್ಸ್‌ಗೆ ಆಮಿಷ, ಬೆದರಿಕೆ

Published:
Updated:
Prajavani

ನವದೆಹಲಿ: ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಐಎಲ್‌ಆ್ಯಂಡ್‌ಎಫ್‌ಎಸ್‌) ಹಣಕಾಸು ಪರಿಸ್ಥಿತಿ ಹದಗೆಟ್ಟಿದ್ದರೂ ಉತ್ತಮ ರೇಟಿಂಗ್ಸ್‌ ನೀಡುವಂತೆ ಸಂಸ್ಥೆಯ ಮಾಜಿ ಉನ್ನತಾಧಿಕಾರಿಗಳು ರೇಟಿಂಗ್ಸ್‌ ಸಂಸ್ಥೆಗಳಿಗೆ ಆಮಿಷ ಒಡ್ಡುವ, ಒತ್ತಡ ಹೇರುವ ಮತ್ತು ಬೆದರಿಕೆಯ ತಂತ್ರಗಳನ್ನೂ ಅನುಸರಿಸಿದ್ದಾರೆ ಎಂದು ಲೆಕ್ಕಪತ್ರ ಪರಿಶೋಧನಾ ಕಂಪನಿ ಗ್ರ್ಯಾಂಟ್‌ ಥೋರ್ನ್‌ಟನ್‌ ತಿಳಿಸಿದೆ.

ರೇಟಿಂಗ್ಸ್‌ ಅನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಕ್ಕೂ ಮೊದಲೇ ಅದನ್ನು ಬದಲಾಯಿಸುವಂತೆ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆಗಳಿಗೆ ಆಮಿಷ ಒಡ್ಡಲಾಗಿತ್ತು. ಹಿರಿಯ ಅಧಿಕಾರಿಗಳು ಮತ್ತು ಅವರ ಕುಟುಂಬದವರಿಗೂ ಗಿಫ್ಟ್‌ಗಳನ್ನು ನೀಡಿದೆ ಎಂದು ಆಂತರಿಕ ವರದಿಯಲ್ಲಿ ತಿಳಿಸಿದೆ.

ಕ್ರಿಸಿಲ್‌, ಕೇರ್ ರೇಟಿಂಗ್ಸ್‌, ಐಸಿಆರ್‌ಎ, ಇಂಡಿಯಾ ರೇಟಿಂಗ್ಸ್‌ ಮತ್ತು ಬ್ರಿಕ್‌ವರ್ಕ್‌ ಸಂಸ್ಥೆಗಳಿಂದ ರೇಟಿಂಗ್ಸ್‌ ಸೇವೆಗಳನ್ನು ಪಡೆದು
ಕೊಂಡಿದೆ ಎಂದು ಹೇಳಿದೆ.

2013 ಏಪ್ರಿಲ್‌ನಿಂದ 2018ರ ಸೆಪ್ಟೆಂಬರ್ ಅವಧಿಯಲ್ಲಿ ಐಎಲ್‌ಆ್ಯಂಡ್‌ಎಫ್‌ಎಸ್‌ ಲಿಮಿಟೆಡ್‌ ಮತ್ತು ಅದರ ಕೆಲವು ಸಮೂಹ ಕಂಪನಿಗಳು ನಡೆಸಿರುವ ಗರಿಷ್ಠ ಮೌಲ್ಯದ ಎಲ್ಲಾ ವಹಿವಾಟುಗಳ ಕುರಿತು ಲೆಕ್ಕಪತ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಂಸ್ಥೆಯ ಹೊಸ ಆಡಳಿತ ಮಂಡಳಿಯು ಗ್ರ್ಯಾಂಡ್‌ ಥೋರ್ನ್‌ಟನ್‌ಗೆ ಸೂಚನೆ ನೀಡಿತ್ತು.

‘ಯಾವುದೇ ಲೋಪ ನಡೆದಿಲ್ಲ’

ಸಂಸ್ಥೆಯ ಮಾನದಂಡ ನಿಗದಿ ಮಾಡುವ  ಸಂಬಂಧ ಯಾವುದೇ ಲೋಪ ನಡೆದಿಲ್ಲ. ರೇಟಿಂಗ್‌ ನೀಡುವ ಪ್ರಕ್ರಿಯೆಯ ಬಗ್ಗೆ ಸೀಮಿತ ಜ್ಞಾನದ ಆಧಾರದ ಮೇಲೆ ಆಂತರಿಕ ವರದಿ ನೀಡಲಾಗಿದ್ದು, ಇದೊಂದು ಏಕಪಕ್ಷೀಯ ನಿಲುವಾಗಿದೆ ಎಂದು ರೇಟಿಂಗ್ಸ್‌ ಸಂಸ್ಥೆಗಳ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Post Comments (+)