ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಕುಸಿತದ ಅಂದಾಜು ತಗ್ಗಿಸಿದ ಇಂಡ್‌ರಾ

Last Updated 24 ಡಿಸೆಂಬರ್ 2020, 10:26 IST
ಅಕ್ಷರ ಗಾತ್ರ

ಮುಂಬೈ: ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಕುಸಿತವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ (–) 7.8ರಷ್ಟಿರಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಸಂಸ್ಥೆ ಗುರುವಾರ ಹೇಳಿದೆ. ಜಿಡಿಪಿ ಕುಸಿತವು ಶೇ (–) 11.8ರಷ್ಟಿರಲಿದೆ ಎಂದು ಈ ಹಿಂದೆ ಹೇಳಿತ್ತು.

ದೇಶದ ಆರ್ಥಿಕತೆಯು ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತಲು ವೇಗವಾಗಿ ಚೇತರಿಕೆ ಕಂಡಿದೆ. ಅಲ್ಲದೆ, ಕೋವಿಡ್‌–19 ಸಾಂಕ್ರಾಮಿಕದಿಂದ ಆಗಿರುವ ಅಡಚಣೆಗಳು ಸಹ ಬಹಳಷ್ಟು ವೇಗವಾಗಿ ದೂರಾಗುತ್ತಿವೆ. ಹೀಗಾಗಿ ಜಿಡಿಪಿ ಅಂದಾಜನ್ನು ಪರಿಷ್ಕರಣೆ ಮಾಡಿರುವುದಾಗಿ ಅದು ತಿಳಿಸಿದೆ.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ (–) 23.9ರಷ್ಟು ಕುಸಿತ ಕಂಡಿತ್ತು. ಎರಡನೇ ತ್ರೈಮಾಸಿಕದಲ್ಲಿ ಕುಸಿತವು ಶೇ (–) 7.5ಕ್ಕೆ ತಗ್ಗಿದೆ. ಹಬ್ಬ ಹಾಗೂ ದಾಸ್ತಾನು ಮಾಡಿದ್ದ ಉತ್ಪನ್ನಗಳ ಬೇಡಿಕೆಯು ಜಿಡಿಪಿಯ ಚೇತರಿಕೆಯಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ಹೀಗಾಗಿ ಸೆಪ್ಟೆಂಬರ್ ತ್ರೈಮಾಸಿಕದ ಚೇತರಿಕೆಯು ಮುಂದೆಯೂ ಸ್ಥಿರವಾಗಿರುವುದೇ ಎನ್ನುವ ಪ್ರಶ್ನೆ ಮೂಡಿದೆ ಎಂದೂ ಅದು ಹೇಳಿದೆ.

ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ (–) 0.8ರಷ್ಟು ಇರಲಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಶೇ 0.3ರಷ್ಟು ಸಕಾರಾತ್ಮಕ ಬೆಳವಣಿಗೆ ಕಾಣಲಿದೆ ಎಂದು ತಿಳಿಸಿದೆ. 2021–22ರ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ಮಾತ್ರವೇ ಜಿಡಿಪಿ ಸಕಾರಾತ್ಮಕ ಹಾದಿಗೆ ಮರಳಲಿದೆ ಎಂದು ಈ ಹಿಂದೆ ಹೇಳಿತ್ತು.

ತಯಾರಿಕಾ ವಲಯದ ಬೆಳವಣಿಗೆಯು ಎರಡನೇ ತ್ರೈಮಾಸಿಕದಲ್ಲಿ ಉತ್ತಮವಾಗಿದೆ. ಗಣಿಗಾರಿಕೆ ಮತ್ತು ನಿರ್ಮಾಣ ವಲಯದ ಬೆಳವಣಿಗೆ ಇಳಿಮುಖವಾಗಿದೆ. ಇನ್ನೊಂದೆಡೆ, ಪರಸ್ಪರ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ರಿಯಲ್ ಎಸ್ಟೇಟ್‌, ಹೊಟೇಲ್‌ ಮತ್ತು ಪ್ರವಾಸೋದ್ಯಮ ವಲಯಗಳ ಬೆಳವಣಿಗೆಯು ಇನ್ನೂ ಕೆಲವು ಸಮಯದವರೆಗೆ ಮಂದಗತಿಯಲ್ಲೇ ಸಾಗಲಿದೆ ಎಂದು ವಿವರಿಸಿದೆ.

ಉತ್ತಮ ಮುಂಗಾರಿನಿಂದಾಗಿ ಲಾಕ್‌ಡೌನ್‌ ಹೊರತಾಗಿಯೂ ಕೃಷಿ ವಲಯವು ಉತ್ತಮ ಬೆಳವಣಿಗೆ ಕಾಣುತ್ತಿದೆ. ಕೃಷಿ ವಲಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 3.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ಇದೇ ವೇಳೆ, ಕೈಗಾರಿಕೆ ಮತ್ತು ಸೇವೆಗಳ ವಲಯಗಳು ಕ್ರಮವಾಗಿ ಶೇ 10.3 ಮತ್ತು ಶೇ 9.8ರಷ್ಟು ಕುಸಿತ ಕಾಣಲಿವೆ ಎಂದಿದೆ.

ಹಣದುಬ್ಬರ: ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಮತ್ತು ಸಗಟು ಹಣದುಬ್ಬರವು ಕ್ರಮವಾಗಿ ಶೇ 6.8 ಮತ್ತು ಶೇ (–) 0.3ರಷ್ಟಿರಲಿದೆ. ಇದರಿಂದಾಗಿ ಹಣಕಾಸು ನೀತಿಯಲ್ಲಿ ಬದಲಾವಣೆ ಮಾಡಲು ಆರ್‌ಬಿಐಗೆ ಸೀಮಿತ ಅವಕಾಶ ಸಿಗಲಿದೆ.

ವಿತ್ತೀಯ ಕೊರತೆ: ವಿತ್ತೀಯ ಕೊರತೆಯನ್ನು ಶೇ 3.5ರಲ್ಲಿ ನಿಯಂತ್ರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಅಕ್ಟೋಬರ್‌ನಲ್ಲಿಯೇ ಬಜೆಟ್‌ ಅಂದಾಜಿನ ಶೇ 119.7ರಷ್ಟಾಗಿದೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ 7ರಷ್ಟಾಗುವ ಸಾಧ್ಯತೆ ಇದೆ ಎಂದು ಇಂಡಿಯಾ ರೇಟಿಂಗ್ಸ್‌ ಹೇಳಿದೆ.

2020-21ಕ್ಕೆ ಜಿಡಿಪಿ ಅಂದಾಜು (%)

ಎಡಿಬಿ; (–) 8

ಇಂಡ್‌ರಾ; (–) 7.8

ಎಸ್‌ಆ್ಯಂಡ್‌ಪಿ;‌ (–)7.7

ಎಸ್‌ಬಿಐ; (–)7.4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT