ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ನಿರ್ವಹಣೆಗೆ ಇಂಡಿಯಾಅಸೆಟ್ಸ್‌

Last Updated 16 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಜನರು ತಮ್ಮ ಬಹುತೇಕ ಉಳಿತಾಯವನ್ನು ಬ್ಯಾಂಕ್‌, ಅಂಚೆ, ಷೇರುಪೇಟೆ, ಮ್ಯೂಚುವಲ್‌ ಫಂಡ್‌ ಮತ್ತಿತರ ಹಣಕಾಸು ಉತ್ಪನ್ನಗಳಲ್ಲಿ ತೊಡಗಿಸುತ್ತಾರೆ. ಕೆಲವರು ಚಿನ್ನ ಖರೀದಿಗೆ ಒಲವು ತೋರಿಸುತ್ತಾರೆ. ಹಣ ಹೂಡಿಕೆ ವಿಷಯದಲ್ಲಿ ರಿಯಲ್‌ ಎಸ್ಟೇಟ್‌ ಮೂರನೆ ಸ್ಥಾನದಲ್ಲಿ ಇದೆ. ವೈಯಕ್ತಿಕ ಹಣಕಾಸು ನಿರ್ವಹಿಸಲು ಹಲವಾರು ಸಂಸ್ಥೆಗಳಿವೆ. ಆದರೆ, ವ್ಯಕ್ತಿಗಳ ರಿಯಲ್‌ ಎಸ್ಟೇಟ್‌ ಸಂಪತ್ತನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡುವ ಸಂಸ್ಥೆಯ ಕೊರತೆ ಇತ್ತು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯಾ ಅಸೆಟ್ಸ್‌ (Indiassetz) ಸ್ಟಾರ್ಟ್‌ಅಪ್‌ ಆ ಕೊರತೆಯನ್ನು ಸಮರ್ಥವಾಗಿ ತುಂಬಿದೆ. ಇದೊಂದು ಜನರ ರಿಯಲ್‌ ಎಸ್ಟೇಟ್‌ ಸಂಪತ್ತಿನ ಸಮಗ್ರ ನಿರ್ವಹಣೆಯ ನವೋದ್ಯಮ ಆಗಿದೆ. ಬ್ಯಾಂಕಿಂಗ್‌ ವಹಿವಾಟಿನಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ಜನರು ತಮ್ಮ ಸ್ಥಿರಾಸ್ತಿಗಳ ನಿರ್ವಹಣೆಯ ಹೊಣೆಯನ್ನು ಇದರ ವಶಕ್ಕೆ ಒಪ್ಪಿಸಿ ನಿಶ್ಚಿಂತೆಯಿಂದ ಇರಬಹುದು.

ಜನರು ತಮ್ಮ ಹೆಸರಿನಲ್ಲಿ ಇರುವ ಆಸ್ತಿಗಳ ನಿರ್ವಹಣೆಗೆ ಹೆಚ್ಚಾಗಿ ಸ್ನೇಹಿತರು, ಕುಟುಂಬದ ಸದಸ್ಯರನ್ನು ಅವಲಂಬಿಸಿರುತ್ತಾರೆ. ರಿಯಲ್‌ ಎಸ್ಟೇಟ್‌ ಸಂಪತ್ತಿನ ನಿರ್ವಹಣೆ ಮತ್ತು ಹೂಡಿಕೆಗೆ ವಿಶ್ವಾಸಾರ್ಹ ಮತ್ತು ವೃತ್ತಿನಿರತ ಸಲಹೆಗಾರರತ್ತ ಈಗ ಹೆಚ್ಚಿನ ಒಲವು ಕಂಡು ಬರುತ್ತಿದೆ. ಮಾರುಕಟ್ಟೆಯಲ್ಲಿನ ಈ ಬಹುದೊಡ್ಡ ಕೊರತೆ ತುಂಬಲು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಸಮಾನ ಮನಸ್ಕರು ತಮ್ಮ ಹುದ್ದೆ ತೊರೆದು ಈ ನವೋದ್ಯಮವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದಾರೆ.

ಈ ಕಾರ್ಯದಲ್ಲಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ ಶಿವಂ ಸಿನ್ಹಾ, ಸೀಮಾ ಹರ್ಷಾ, ಅನ್ಶುಮನ್‌ ತಿವಾರಿ ಮತ್ತು ವಿಭಿನ್‌ ವಿ.ಪಿ ಅವರು ಜತೆಯಾಗಿದ್ದಾರೆ. ಶಿವಂ ಸಿನ್ಹಾ ಅವರು ಇದರ ಸ್ಥಾಪಕರು. ಸಹ ಸ್ಥಾಪಕರೆಲ್ಲರೂ ಬ್ಯಾಂಕರುಗಳೇ. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ತಮ್ಮೆಲ್ಲ ಅನುಭವ ಧಾರೆ ಎರೆದು ಇದನ್ನು ಸ್ಥಾಪಿಸಿದ್ದಾರೆ. 15 ರಿಂದ 16 ವರ್ಷಗಳ ಬ್ಯಾಂಕಿಂಗ್ ಅನುಭವ ಹೊಂದಿರುವ ಈ ವೃತ್ತಿಪರರು 2014ರಲ್ಲಿ ಈ ನವೋದ್ಯಮ ಸ್ಥಾಪಿಸಿ ಯಶಸ್ವಿಯಾಗಿ ಮುಂದುವರೆಸಿಕೊಂಡು ಹೊರಟಿದ್ದಾರೆ.

ಆಸ್ತಿ ಖರೀದಿ– ಮಾರಾಟ, ಒಳಗಾಂಗಣ ವಿನ್ಯಾಸ, ನಿರ್ವಹಣೆ, ಬಾಡಿಗೆ ನೀಡುವುದು, ತೆರಿಗೆ ಪಾವತಿ, ಹಣ ಹೂಡಿಕೆ, ಕಾನೂನು ಸಲಹೆ ಮತ್ತಿತರ ಕೆಲಸಗಳನ್ನೆಲ್ಲ ಈ ಸಂಸ್ಥೆಯೇ ನಿಭಾಯಿಸುತ್ತದೆ. ವ್ಯಕ್ತಿಗತ ಸಂಪತ್ತು ನಿರ್ವಹಣೆಯೇ ಇದರ ಮುಖ್ಯ ಧ್ಯೇಯವಾಗಿದೆ. ನಾಲ್ಕು ಜನರಿಂದ ಆರಂಭವಾದ ಈ ಸಂಸ್ಥೆಯಲ್ಲಿ ಸದ್ಯಕ್ಕೆ 40ಕ್ಕೂ ಹೆಚ್ಚು ಕೆಲಸ ನಿರ್ವಹಿಸುತ್ತಿದ್ದಾರೆ.

‘ಇಲ್ಲಿ ₹ 25 ಸಾವಿರ ಪಾವತಿಸಿ ಖಾತೆ ತೆರೆಯಬೇಕು. ಆಸ್ತಿ ಖರೀದಿ, ಮಾರಾಟ, ವಾರ್ಷಿಕ ನಿರ್ವಹಣೆ, ಒಳಾಂಗಣ ವಿನ್ಯಾಸ ಮತ್ತಿತರ 18 ಸೇವೆಗಳನ್ನು ಸಂಸ್ಥೆ ಒದಗಿಸುತ್ತದೆ. ಇವುಗಳಲ್ಲಿ 6 ಸೇವೆಗಳು ಉಚಿತವಾಗಿರುತ್ತವೆ. ಉಳಿದ ಸೇವೆಗಳಿಗೆ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ. ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 2016 ಜಾರಿಗೆ ಬಂದು ಖರೀದಿದಾರರ ಹಿತಾಸಕ್ತಿ ರಕ್ಷಣೆಗೆ ಮುಂದಾಗಿದೆ. ಇದೇ ಕಾರಣಕ್ಕೆ ಇಂಡಿಯಾ ಅಸೆಟ್ಸ್‌ ‘ರೇರಾ’ದಲ್ಲಿ ನೋಂದಣಿಯಾಗಿದೆ.

ಅನೇಕರ ಖರೀದಿ ಪತ್ರ ಕಳೆದು ಹೋಗಿರುತ್ತದೆ. ಆಸ್ತಿಯ ಸೂಕ್ತ ದಾಖಲೆಗಳು ಬಳಿಯಲ್ಲಿ ಇರುವುದಿಲ್ಲ. ಖಾತಾ ಮತ್ತಿತರ ಸರ್ಕಾರಿ ದಾಖಲೆಗಳನ್ನು ಪಡೆಯಲು ಅಲೆಯಬೇಕಾಗುತ್ತದೆ. ಆ ಎಲ್ಲ ತಾಪತ್ರಯಗಳನ್ನು ಈ ಸಂಸ್ಥೆಯೇ ನಿಭಾಯಿಸುತ್ತದೆ. ಈ ಬಗೆಯ ಪೂರ್ಣ ಪ್ರಮಾಣದ ಸೇವೆ ಒದಗಿಸುತ್ತಿರುವ ದೇಶದ ಏಕೈಕ ಸಂಸ್ಥೆ ಇದಾಗಿರುವುದು ಇದರ ಹೆಗ್ಗಳಿಕೆಯಾಗಿದೆ. ವ್ಯಕ್ತಿಗಳ ರಿಯಲ್‌ ಎಸ್ಟೇಟ್‌ ಸಂಪತ್ತು ನಿರ್ವಹಣೆಯ ಬ್ಯಾಂಕ್‌ ಆಗಿ ಇದು ಕಾರ್ಯನಿರ್ವಹಿಸುತ್ತಿದೆ. ಆಸ್ತಿಗಳನ್ನು ವೈಯಕ್ತಿಕವಾಗಿ ನಿರ್ವಹಿಸುವ ತಲೆನೋವನ್ನು ಇದಕ್ಕೆ ಒಪ್ಪಿಸಿ ನೆಮ್ಮದಿಯಿಂದ ಇರಬಹುದು.

‘ವಿದೇಶಗಳಲ್ಲಿ ನೆಲೆಸಿರುವ, ಪದೇ ಪದೇ ಕೆಲಸ ಬದಲಿಸಿ ನಗರಗಳಿಂದ ನಗರಗಳಿಗೆ ಅಲೆಯುವ ಹೊಸ ತಲೆಮಾರಿನವರಿಗೆ ವಯಸ್ಸಾದ ಪಾಲಕರು ಖರೀದಿಸಿದ್ದ ಸ್ಥಿರಾಸ್ತಿಗಳ ಉಸ್ತುವಾರಿ ಮತ್ತು ನಿರ್ವಹಣೆಯು ದೊಡ್ಡ ತಲೆನೋವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಕೆಲಸದ ಒತ್ತಡದಲ್ಲಿ ಖರೀದಿಸಿದ ಆಸ್ತಿಯ ದಾಖಲೆ ಪತ್ರಗಳನ್ನು ಪರಿಶೀಲಿಸುವ ವ್ಯವಧಾನವೂ ಕೆಲ ಬುದ್ಧಿವಂತರಿಗೆ ಇರುವುದಿಲ್ಲ. ಇದರಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಕೋರ್ಟ್‌ಗೆ ಅಲೆದಾಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಈ ನವೋದ್ಯಮ ನೆರವಿಗೆ ಬರುತ್ತದೆ. ಸಂಸ್ಥೆಯ ಸದಸ್ಯರು ವಕೀಲರ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಲು ಸಿದ್ಧರಿರಬೇಕಾಗುತ್ತದೆ’ ಎಂದು ಸಂಸ್ಥೆಯ ಸಿಒಒ ಸೀಮಾ ಹರ್ಷಾ (42) ಹೇಳುತ್ತಾರೆ.

ಬೆಂಗಳೂರಿನವರೇ ಆಗಿರುವ ಸೀಮಾ ಹರ್ಷಾ ಅವರು ಸೆಂಚುರಿಯನ್‌ ಬ್ಯಾಂಕ್‌, ಬ್ಯಾಂಕ್‌ ಮಸ್ಕಟ್, ಡಿಎಚ್‌ಎಫ್‌ಎಲ್‌, ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ.

’ಇಲ್ಲಿ ಸದಸ್ಯತ್ವ ಹೊಂದಲು ಯಾವುದೇ ನಿಬಂಧನೆ ಇಲ್ಲ. ಸಂಪತ್ತಿನ ಪ್ರಮಾಣವೂ ಮುಖ್ಯವಲ್ಲ. ಸದ್ಯಕ್ಕೆ ಎರಡು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಇವರಲ್ಲಿ ಅರ್ಧದಷ್ಟು ಜನರು ಅನಿವಾಸಿ ಭಾರತೀಯರಿದ್ದಾರೆ.

‘ಬೆಂಗಳೂರಿನಂತಹ ಮಹಾನಗರಗಳಲ್ಲಿ ಆಸ್ತಿ ಒಂದೆಡೆ ಇದ್ದರೆ, ಮಾಲೀಕರು ಇನ್ನೊಂದು ಮೂಲೆಯಲ್ಲಿ ನೆಲೆಸಿರುತ್ತಾರೆ. ಅಂತಹ ಆಸ್ತಿಗಳ ನಿರ್ವಹಣೆಯ ಹೊಣೆಯನ್ನೂ ಇದು ಹೊತ್ತುಕೊಳ್ಳುತ್ತದೆ. ಸಂಸ್ಥೆಯು ರಿಯಲ್‌ ಎಸ್ಟೇಟ್‌ ವಲಯದ ಯಾವುದೇ ಡೆವಲಪರ್ಸ್‌ ಜತೆ ವ್ಯವಹರಿಸುವುದಿಲ್ಲ. ಸದಸ್ಯರು ಕೇಳಿದರೆ ಮಾತ್ರ ಅವರಿಗೆ ಇಂತಹ ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುವುದು. ಪ್ರಾಜೆಕ್ಟ್‌ ಮಾರಾಟ ಮಾಡಲು ನೆರವಾಗುವ ರಿಯಲ್‌ ಎಸ್ಟೇಟ್‌ ಸಂಸ್ಥೆಗಳ ಕೊಡುಗೆಯನ್ನು ನಯವಾಗಿ ತಿರಸ್ಕರಿಸಲಾಗಿದೆ’ ಎಂದು ಸೀಮಾ ಹರ್ಷಾ ಸ್ಪಷ್ಟಪಡಿಸುತ್ತಾರೆ.

ಆರಂಭದಲ್ಲಿ ಕೌಟುಂಬಿಕ ಪರಿಚಿತರು, ಸ್ನೇಹಿತರ ಮೂಲಕ ಪ್ರಚಾರ ಮಾಡಿ, ಅವರ ಸಂಪತ್ತನ್ನು ಯಶಸ್ವಿಯಾಗಿ ನಿರ್ವಹಿಸಿ ಸಂಸ್ಥೆ ಕಟ್ಟಿ ಬೆಳೆಸಲಾಗಿದೆ. ಈಗ ಗ್ರಾಹಕರು ಸಂಸ್ಥೆಯ ಸೇವೆ ಕೇಳಿಕೊಂಡು ಬರುತ್ತಿದ್ದಾರೆ. ಸಿಂಗಪುರದಿಂದಲೂ ಭಾರಿ ಬೇಡಿಕೆ ಕಂಡುಬರುತ್ತಿದೆ. ಹಣಕಾಸು ಸಂಪತ್ತು ನಿರ್ವಹಣಾ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಅವುಗಳ ಗ್ರಾಹಕರ ಆಸ್ತಿ ನಿರ್ವಹಣೆಯ ಹೊಣೆಗಾರಿಕೆಯನ್ನೂ ವಹಿಸಿಕೊಂಡಿದೆ. ಸಂಸ್ಥೆಯು ರಿಯಲ್ ಎಸ್ಟೇಟ್‌ ಬ್ಯಾಂಕ್‌ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಸ್ತಿ ನಿರ್ವಹಣೆ ಕ್ಷೇತ್ರದಲ್ಲಿ ಇದೊಂದು ದೇಶದಲ್ಲಿಯೇ ವಿಶಿಷ್ಟವಾದ ಸಂಸ್ಥೆಯಾಗಿದೆ. ‍ಪ್ರತಿಷ್ಠಿತ ಸಂಸ್ಥೆಗಳ ಉನ್ನತ ಹುದ್ದೆಯಲ್ಲಿ ಇರುವವರೂ ಇದರ ಸದಸ್ಯರಾಗಿದ್ದಾರೆ. ಬದುಕಿನಲ್ಲಿ ಮಹತ್ತರವಾದುದನ್ನು ಸಾಧಿಸಿದವರ ಸಂಪತ್ತು ನಿರ್ವಹಣೆಗೆ ಇಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ.

ಇತರ ಸೇವೆ ಒದಗಿಸುವವರು ಮತ್ತು ದಲ್ಲಾಳಿಗಳ ಜತೆ ಸಮನ್ವಯತೆಯಿಂದ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯು ತನ್ನ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ಒದಗಿಸುತ್ತಿದೆ. ಗ್ರಾಹಕರಿಗೆ ಮಾರುಕಟ್ಟೆ ಸಂಶೋಧನೆಯ ಸೇವೆಯನ್ನೂ ನೀಡುತ್ತಿದೆ. ಸದ್ಯಕ್ಕೆ ಭಾರತದಲ್ಲಿನ ಸಂಪತ್ತು ನಿರ್ವಹಣೆಗೆ ಗಮನ ಕೇಂದ್ರೀಕರಿಸಲಾಗಿದೆ. ಕೇವಲ ವ್ಯಕ್ತಿಗಳಿಗೆ ಮಾತ್ರ ಸೇವೆ ಒದಗಿಸಲಾಗುವುದು. ಸದ್ಯಕ್ಕೆ ಬೆಂಗಳೂರು, ಹೈದರಾಬಾದ್‌, ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕ್ರಮೇಣ ನಂತರ ಮುಂಬೈ, ಪುಣೆ, ದೆಹಲಿಗೆ ವಿಸ್ತರಿಸುವ ಆಲೋಚನೆ ಇದೆ. ವಾರ್ಷಿಕ ಶೇ 100ರಷ್ಟು ವಹಿವಾಟು ವೃದ್ಧಿಕಾಣುತ್ತಿರುವ ಸಂಸ್ಥೆಯು ಸಂಪತ್ತು ನಿರ್ವಹಣೆ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಮಾಹಿತಿಗೆ:indiassetz.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT