ಶನಿವಾರ, ಮಾರ್ಚ್ 6, 2021
28 °C
ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಹೇಳಿಕೆ

ಜಿಡಿಪಿ ದರ ಹೆಚ್ಚಳ ಉತ್ಪ್ರೇಕ್ಷಿತ: ಅರವಿಂದ ಸುಬ್ರಮಣಿಯನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ವೃದ್ಧಿ ದರ ಲೆಕ್ಕ ಹಾಕುವ ವಿಧಾನದಲ್ಲಿ ಬದಲಾವಣೆ ಮಾಡಿರುವುದರಿಂದ ದೇಶಿ ಆರ್ಥಿಕತೆಯ ಬೆಳವಣಿಗೆ ದರವು ತಪ್ಪಾಗಿ ಬಿಂಬಿತವಾಗಿದೆ’ ಎಂದು ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರು ತಮ್ಮ ಸಂಶೋಧನಾ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಒಟ್ಟು ಆಂತರಿಕ ಉತ್ಪಾದನೆಯನ್ನು (ಜಿಡಿಪಿ) ಶೇ 2.5ರಷ್ಟು ಅತಿಯಾಗಿ ಅಂದಾಜು ಮಾಡಲಾಗಿದೆ ಎನ್ನುವುದು ಅವರ ತರ್ಕವಾಗಿದೆ. 2011–12 ರಿಂದ 2016–17ರ ಅವಧಿಯಲ್ಲಿನ ಸರ್ಕಾರದ ಅಧಿಕೃತ ಅಂದಾಜು ಆಗಿರುವ ಶೇ 7ರಷ್ಟು ವೃದ್ಧಿ ದರ ಬದಲಿಗೆ ಅದು ವಾಸ್ತವದಲ್ಲಿ ಶೇ 4.5ರಷ್ಟು ಇರಬೇಕಾಗಿತ್ತು ಎಂದು ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರಕಟಿಸಲಾಗಿರುವ ಅವರ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

‘ದೇಶಿ ಜಿಡಿಪಿಗೆ ಪರಿಗಣಿಸುವ ಆಧಾರಗಳು ಮತ್ತು ಲೆಕ್ಕ ಹಾಕುವ ವಿಧಾನವನ್ನು 2011–12ರಿಂದೀಚೆಗೆ ಬದಲಿಸಲಾಗಿದೆ. ಈ ಬದಲಾವಣೆಯ ಕಾರಣದಿಂದಾಗಿಯೇ ವೃದ್ಧಿ ದರದ ಬಗ್ಗೆ ಹೆಚ್ಚುವರಿ ಅಂದಾಜು ಕಂಡು ಬಂದಿದೆ’ ಎಂದು ಅರವಿಂದ್‌ ಹೇಳಿದ್ದಾರೆ.

2019ರ ಮೇ ತಿಂಗಳಲ್ಲಿ ತಮ್ಮ ಸೇವಾವಧಿ ವಿಸ್ತರಣೆಯ ಅವಧಿ ಕೊನೆಗೊಳ್ಳುವ ಮೊದಲೇ (2018ರ ಆಗಸ್ಟ್‌) ಅರವಿಂದ್‌ ಅವರು ತಮ್ಮ ಹುದ್ದೆ ತೊರೆದಿದ್ದರು.

‘ತಯಾರಿಕಾ ವಲಯದ ‍ಪ್ರಗತಿಗೆ ಸಂಬಂಧಿಸಿದಂತೆ ತಪ್ಪು ಲೆಕ್ಕಾಚಾರ ಹಾಕಲಾಗಿದೆ. ಇದರಿಂದಾಗಿ ಆರ್ಥಿಕತೆಗೆ ಸಂಬಂಧಿಸಿದ ನೀತಿಯು ಕಠಿಣವಾಗಿರಲಿದೆ. ಆರ್ಥಿಕ ಸುಧಾರಣಾ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರುವುದಕ್ಕೆ ಅಡಚಣೆಗಳು ಎದುರಾಗಲಿವೆ. ಗರಿಷ್ಠ ಪ್ರಮಾಣದಲ್ಲಿನ ವೃದ್ಧಿ ದರ ಸಾಧಿಸಲು ಆದ್ಯತೆ ನೀಡಬೇಕಾಗುತ್ತದೆ’ ಎಂದು ಅರವಿಂದ ಹೇಳಿದ್ದಾರೆ.

ಹೊಸ ವಿಧಾನದಲ್ಲಿ ಜಿಡಿಪಿ ಲೆಕ್ಕ ಹಾಕಿರುವುದು ವಿವಾದಕ್ಕೆ ಎಡೆಮಾಡಿ ಕೊಟ್ಟಿರುವ ಸಂದರ್ಭದಲ್ಲಿಯೇ ಈ ಸಂಶೋಧನಾ ವರದಿ ಪ್ರಕಟಗೊಂಡಿದೆ. ನರೇಂದ್ರ ಮೋದಿ ನೇತೃತ್ವದಲ್ಲಿನ ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಡಿಪಿ ಲೆಕ್ಕ ಹಾಕುವುದನ್ನು ಪರಿಷ್ಕರಿಸಲಾಗಿತ್ತು. ಬಿಜೆಪಿ ನೇತೃತ್ವದಲ್ಲಿನ ಎನ್‌ಡಿಎ ಸರ್ಕಾರವು 2015ರ ಜನವರಿಯಲ್ಲಿ ಜಿಡಿಪಿ ಲೆಕ್ಕ ಹಾಕಲು ಆಧಾರ ವರ್ಷವನ್ನು 2004–05ರ ಬದಲಿಗೆ 2011–12ಕ್ಕೆ ಬದಲಾಯಿಸಿತ್ತು. ಇದನ್ನು ಆಧರಿಸಿ 2018ರ ಆಗಸ್ಟ್‌ನಲ್ಲಿ ವೃದ್ಧಿ ದರವನ್ನು ಹೊಸದಾಗಿ ಲೆಕ್ಕ ಹಾಕಲಾಗಿತ್ತು. ಇದರಿಂದಾಗಿ ಕಾಂಗ್ರೆಸ್‌ ನೇತೃತ್ವದಲ್ಲಿನ ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿನ ವೃದ್ಧಿ ದರವನ್ನು ಕುಗ್ಗಿಸಲಾಗಿತ್ತು.

2001–02ರಿಂದ 2017–18ರ ಅವಧಿಯಲ್ಲಿನ 17 ಪ್ರಮುಖ ಆರ್ಥಿಕ ಮಾನದಂಡಗಳನ್ನು ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ತಮ್ಮ ಈ ವಿಶ್ಲೇಷಣೆಗೆ ಪೂರಕವಾಗಿ ಅರವಿಂದ ಅವರು ಈ ಆರ್ಥಿಕ ಮಾನದಂಡಗಳಲ್ಲಿ ಕುಸಿತ ದಾಖಲಾಗಿರುವುದನ್ನು ಸಾಕ್ಷ್ಯವಾಗಿ ಒದಗಿಸಿದ್ದಾರೆ.

‘ರಾಷ್ಟ್ರೀಯ ವರಮಾನದ ಲೆಕ್ಕಪತ್ರವನ್ನು ಹೊಸ ದೃಷ್ಟಿಕೋನದಿಂದ ನೋಡುವ ಅಗತ್ಯ ಈಗ ಎದುರಾಗಿದೆ. ಗರಿಷ್ಠ ವೃದ್ಧಿ ದರವನ್ನು ಪುನರ್‌ ಸ್ಥಾಪಿಸುವುದು ಹೊಸ ಸರ್ಕಾರದ ಮುಂದಿರುವ ತುರ್ತು ಸವಾಲು ಆಗಿರಲಿದೆ’ ಎಂದೂ ಅರವಿಂದ ಹೇಳಿದ್ದಾರೆ.

2018–19ರ ಹಣಕಾಸು ವರ್ಷದಲ್ಲಿನ ಆರ್ಥಿಕ ವೃದ್ಧಿ ದರವು (ಶೇ 6.8) ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವುದನ್ನು ಕೇಂದ್ರ ಸರ್ಕಾರದ ಅಧಿಕೃತ ಅಂಕಿ ಅಂಶಗಳೇ ಇತ್ತೀಚೆಗೆ ದೃಢಪಡಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು