ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ನಲ್ಲಿ ತಯಾರಿಕಾ ಚಟುವಟಿಕೆ ಹೆಚ್ಚಳ

ಬೇಡಿಕೆ ಮತ್ತು ತಯಾರಿಕೆ ಹೆಚ್ಚಳ; ತಗ್ಗಿದ ತಯಾರಿಕಾ ವೆಚ್ಚದ ಮೇಲಿನ ಒತ್ತಡ
Published 1 ಡಿಸೆಂಬರ್ 2023, 12:41 IST
Last Updated 1 ಡಿಸೆಂಬರ್ 2023, 12:41 IST
ಅಕ್ಷರ ಗಾತ್ರ

ನವದೆಹಲಿ: ದೇಶದ ತಯಾರಿಕಾ ವಲಯವು ನವೆಂಬರ್‌ ತಿಂಗಳಿನಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ತಯಾರಿಕಾ ವೆಚ್ಚ ಕಡಿಮೆ ಆಗುತ್ತಿರುವುದು ಮತ್ತು ಬೇಡಿಕೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.

ತಯಾರಿಕಾ ವಲಯದ ಬೆಳವಣಿಗೆಯನ್ನು ತಿಳಿಸುವ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್ ಇಂಡೆಕ್ಸ್‌ (ಪಿಎಂಐ) ಅಕ್ಟೋಬರ್‌ನಲ್ಲಿ 55.5 ಇದ್ದಿದ್ದು ನವೆಂಬರ್‌ನಲ್ಲಿ 56ಕ್ಕೆ ಏರಿಕೆ ಕಂಡಿದೆ. ತಯಾರಿಕಾ ವೆಚ್ಚವು 40 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. 

ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತಲೂ ಕೆಳಗಿನ ಮಟ್ಟದಲ್ಲಿ ಇದ್ದರೆ ನಕಾರಾತ್ಮಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸತತ 29ನೇ ತಿಂಗಳಿನಲ್ಲಿಯೂ ಒಟ್ಟಾರೆ ಬೆಳವಣಿಗೆಯು ಸಕಾರಾತ್ಮಕವಾಗಿಯೇ ಮುಂದುವರಿದಿದೆ.

ಹೊಸ ವಹಿವಾಟುಗಳಿಗೆ ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಬಂದಿದೆ. 2023ನೇ ವರ್ಷವು ಮುಗಿಯುವ ಹಂತದಲ್ಲಿದ್ದು, ಭಾರತದ ತಯಾರಿಕಾ ವಲಯವು ಉತ್ತಮ ಸ್ಥಿತಿಯಲ್ಲಿದೆ. ಹೀಗಾಗಿ 2024ರಲ್ಲಿಯೂ ಇದೇ ರೀತಿಯ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಎಸ್‌ ಅ್ಯಂಡ್‌ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ 8 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದ್ದ ಬೆಳವಣಿಗೆಯು ನವೆಂಬರ್‌ನಲ್ಲಿ ಮತ್ತೆ ಹೆಚ್ಚಾಗಿದೆ. ತಯಾರಿಕೆ ಮತ್ತು ಬೇಡಿಕೆಯು ಹೆಚ್ಚಾಗುತ್ತಿರುವುದು ವಲಯದ ಒಟ್ಟಾರೆ ಪ್ರಗತಿಗೆ ಪೂರಕವಾಗಿದೆ ಎಂದು ಸಮೀಕ್ಷೆಯು ತಿಳಿಸಿದೆ.

ಕಚ್ಚಾ ಸರಕುಗಳ ದರವು ನವೆಂಬರ್‌ನಲ್ಲಿಯೂ ಏರಿಕೆ ಕಂಡಿದೆ. ಆದರೆ, ಕಚ್ಚಾ ಸರಕುಗಳಿಗೆ ಜಾಗತಿಕ ಬೇಡಿಕೆ ತಗ್ಗಿರುವುದರಿಂದ ಭಾರತದಲ್ಲಿ ಪೂರೈಕೆಯಲ್ಲಿ ಸುಧಾರಣೆ ಕಂಡುಬಂದಿದೆ. ಇದು ಬೆಲೆ ಏರಿಕೆ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಲಿಮಾ ತಿಳಿಸಿದ್ದಾರೆ.

ದೇಶಿ ಬೇಡಿಕೆಯು ಉತ್ತಮವಾಗಿದ್ದರೂ ಜಾಗತಿಕ ಬೇಡಿಕೆ ತಗ್ಗಿದೆ. ಹೊಸ ರಫ್ತು ಯೋಜನೆಗಳು ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT