ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 SRH vs PBKS | ಎರಡನೇ ಸ್ಥಾನಕ್ಕೇರುವತ್ತ ಸನ್‌ ಚಿತ್ತ

ಹೈದರಾಬಾದ್ ತಂಡಕ್ಕೆ ಪಂಜಾಬ್ ಕಿಂಗ್ಸ್ ಸವಾಲು ಇಂದು
Published 18 ಮೇ 2024, 23:30 IST
Last Updated 18 ಮೇ 2024, 23:30 IST
ಅಕ್ಷರ ಗಾತ್ರ

ಹೈದರಾಬಾದ್: ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸುವ ಗುರಿಯೊಂದಿಗೆ ಭಾನುವಾರ ಕಣಕ್ಕಿಳಿಯಲಿದೆ. 

ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಕಳೆದ ಮೂರು ಆವೃತ್ತಿಗಳಲ್ಲಿಯೂ ಹೈದರಾಬಾದ್ ತಂಡವು ನಾಲ್ಕರ ಘಟ್ಟ ಪ್ರವೇಶಿಸಿರಲಿಲ್ಲ. ಆದರೆ ಈ ಬಾರಿ ಇಡೀ ಟೂರ್ನಿಯಲ್ಲಿ ರನ್‌ಗಳ ಹೊಳೆಯನ್ನು ಹರಿಸಿರುವ ಸನ್‌ರೈಸರ್ಸ್ ತಂಡವು ಆತ್ಮವಿಶ್ವಾಸದ ಉತ್ತುಂಗದಲ್ಲಿದೆ. ರನ್‌ ಗಳಿಕೆಯಲ್ಲಿ ಹಲವು ದಾಖಲೆಗಳನ್ನು ಈ ತಂಡದ ಬ್ಯಾಟರ್‌ಗಳು ಬರೆದಿದ್ದಾರೆ.  ಅಧಿಕಾರಯುತ ಜಯಗಳೊಂದಿಗೆ 15 ಅಂಕಗಳನ್ನು ಸಂಪಾದಿಸಿದೆ.

ಆಸ್ಟ್ರೇಲಿಯಾದ ಯಶಸ್ವಿ ನಾಯಕ ಪ್ಯಾಟ್ ಕಮಿನ್ಸ್ ಅವರ ಮುಂದಾಳತ್ವದಲ್ಲಿ ಸನ್‌ರೈಸರ್ಸ್ ತಂಡದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡನ್ ಮರ್ಕರಂ, ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್  ಅವರು ಎದುರಾಳಿ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದಾರೆ. 

ಬೌಲಿಂಗ್‌ಗನಲ್ಲಿ ಭುವನೇಶ್ವರ್ ಕುಮಾರ್, ಜೈದೇವ್ ಉನದ್ಕತ್ ಹಾಗೂ ಟಿ ನಟರಾಜನ್ ಉತ್ತಮ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಮಳೆ ಬಂದ ಕಾರಣ ತಂಡಕ್ಕೆ ಕೇವಲ ಒಂದು ಅಂಕ ಸಿಕ್ಕಿತ್ತು. ಲೀಗ್ ಹಂತದಲ್ಲಿ ಇದು ಉಭಯ ತಂಡಗಳಿಗೂ ಕೊನೆಯ ಪಂದ್ಯವಾಗಿದೆ.

10 ಅಂಕ ಗಳಿಸಿರುವ ಪಂಜಾಬ್ ತಂಡವು ಪ್ಲೇ ಆಫ್‌ ಹಾದಿಯಿಂದ ಈಗಾಗಲೇ ಹೊರಬಿದ್ದಿದೆ. ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ನಾಯಕ ಶಿಖರ್ ಧವನ್ ಅವರು ತಂಡಕ್ಕೆ ಲಭ್ಯರಾಗಿಲ್ಲ. ಅವರ ಬದಲಿಗೆ ಸ್ಯಾಮ್ ಕರನ್ ತಂಡವನ್ನು ಮುನ್ನಡೆಸಿದರು. ಇದೀಗ ಅವರೂ ತಮ್ಮ ತವರಿಗೆ ಮರಳಿದ್ದಾರೆ. ಜಿತೇಶ್ ಶರ್ಮಾ ಅವರು ಈ ಪಂದ್ಯದಲ್ಲಿ ಹಂಗಾಮಿ ನಾಯಕರಾಗಿದ್ದಾರೆ.

ತಂಡದ ಆಶುತೋಷ್ ಶರ್ಮಾ, ಶಶಾಂಕ್ ಸಿಂಗ್ ಹಾಗೂ ಪ್ರಭಸಿಮ್ರನ್ ಸಿಂಗ್ ಅವರು ಉತ್ತಮವಾಗಿ ಆಡಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಕನ್ನಡಿಗ ವಿದ್ವತ್ ಕಾವೇರಪ್ಪ ತಮಗೆ ಸಿಕ್ಕ ಅವಕಾಶದಲ್ಲಿ ಗಮನ ಸೆಳೆದಿದ್ದಾರೆ. ಹರಪ್ರೀತ್ ಬ್ರಾರ್, ಆರ್ಷದೀಪ್ ಸಿಂಗ್ ಹಾಗೂ ಹರ್ಷಲ್ ಪಟೇಲ್ ಅವರೂ ಉತ್ತಮ ಲಯದಲ್ಲಿದ್ದಾರೆ. ಸಮಾಧಾನಕರ ಜಯದೊಂದಿಗೆ ಟೂರ್ನಿಯಿಂದ ನಿರ್ಗಮಿಸುವ ಏಕೈಕ ಗುರಿ ಪಂಜಾಬ್ ತಂಡಕ್ಕಿದೆ. 

ಆದರೆ ಪಂಜಾಬ್ ಗೆದ್ದರೆ ಸನ್‌ರೈಸರ್ಸ್ ತಂಡವು ದ್ವಿತೀಯ ಸ್ಥಾನಕ್ಕೇರುವ ಉದ್ದೇಶ ಈಡೇರುವುದು ಕಷ್ಟವಾಗಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT