ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಪ ಸಾಬೀತುಪಡಿಸಿದರೆ ಬೇಷರತ್ ಕ್ಷಮೆ ಯಾಚಿಸುವೆ: ಸಚಿವ ಎನ್‌. ಚಲುವರಾಯಸ್ವಾಮಿ

Published 18 ಮೇ 2024, 8:55 IST
Last Updated 18 ಮೇ 2024, 8:55 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜ್ವಲ್‌ ರೇವಣ್ಣಗೆ ಸಂಬಂಧಿಸಿದ ಪೆನ್‌ ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಲು ಆಮಿಷ ಒಡ್ಡಿದ್ದ ಆರೋಪವನ್ನು ಬಿಜೆಪಿ ಮುಖಂಡ ದೇವರಾಜೇಗೌಡ ಸಾಬೀತುಪಡಿಸಿದರೆ ಬೇಷರತ್‌ ಕ್ಷಮೆ ಯಾಚಿಸಲು ಸಿದ್ಧ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೇವಣ್ಣ ಕುಟುಂಬಕ್ಕೆ ಆಘಾತ ನೀಡಬೇಕು ಎಂದು ಹಿಂದೆ ಇದೇ ದೇವರಾಜೇಗೌಡ ಹೇಳುತ್ತಿದ್ದ. ವರ್ಷದಿಂದಲೂ ಆ ಪೆನ್‌ ಡ್ರೈವ್‌ ಆತನ ಬಳಿ ಇತ್ತು. ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬಹುದಿತ್ತಲ್ಲವೆ’ ಎಂದು ಕೇಳಿದರು.

‘ಈ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ. ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ ಪಾತ್ರವೂ ಇಲ್ಲ. ಏಪ್ರಿಲ್‌ 25ರ ವೇಳೆಗೆ ಪ್ರಕರಣ ಹೊರಬಿತ್ತು. ಏಪ್ರಿಲ್‌ 30ರ ಬಳಿಕ ಪ್ರಕರಣದ ಕಾವು ಏರಿತು. ನನಗೆ ನನ್ನ ಇಲಾಖೆಯ ಕೆಲಸ ಮಾಡುವುದೇ ಸಾಕಷ್ಟಿದೆ. ಇಂತಹ ಪ್ರಕರಣಗಳಲ್ಲಿ ಕೈ ಹಾಕಲು ಸಮಯವಿಲ್ಲ’ ಎಂದರು.

‘ಈ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ, ಕಾರ್ತಿಕ್‌ ಮತ್ತು ದೇವರಾಜೇಗೌಡ ಪ್ರಮುಖ ಆರೋಪಿಗಳು. ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯ ಹೊರ ಬರುತ್ತದೆ. ಬಂಧನದಲ್ಲಿರುವ ದೇವರಾಜೇಗೌಡ ₹ 100 ಕೋಟಿ ಆಮಿಷದ ಆರೋಪ ಮಾಡಿದರೆ, ಅದಕ್ಕೆ ಪ್ರಚಾರ ನೀಡುವುದು ಸರಿಯೆ’ ಎಂದು ಮಾಧ್ಯಮಗಳನ್ನು ಪ್ರಶ್ನಿಸಿದರು.

‘ಶಿವರಾಮೇಗೌಡ ನಮ್ಮ ಪಕ್ಷದಲ್ಲಿಲ್ಲ. ನಾನು ಅವರ ವಿರುದ್ಧ ಹೋರಾಟ ಮಾಡಿಕೊಂಡು ಬಂದವನು. ಅವರ ಜತೆ ವಿಶ್ವಾಸವಿರಬಹುದು, ಆದರೆ ರಾಜಕೀಯ ನಂಟು ಇಲ್ಲ’ ಎಂದು ಹೇಳಿದರು.

‘ಡಿ.ಕೆ. ಶಿವಕುಮಾರ್‌ ಈ ರಾಜ್ಯದ ಉಪ ಮುಖ್ಯಮಂತ್ರಿ. ಪ್ರಕರಣದ ಮಾಹಿತಿ ಕೊಡಲು ದೇವರಾಜೇಗೌಡ ಸಂಪರ್ಕಿಸಿರಬಹುದು. ಅದನ್ನೇ ತಿರುಚಿ ಆರೋಪ ಮಾಡುವುದು ಸರಿಯಲ್ಲ’ ಎಂದರು.

ಪ್ರಜ್ವಲ್‌ ಕರೆಸಲಿ: ‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು, ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶದಿಂದ ಕರೆಸಲಿ. ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಶರಣಾಗಿ ತನಿಖೆಗೆ ಸಹಕರಿಸುವಂತೆ ಸೂಚಿಸಲಿ. ಆತ ಶರಣಾದರೆ ತನಿಖೆ ಮುಂದಕ್ಕೆ ಸಾಗುತ್ತದೆ. ಸತ್ಯ ಹೊರಬರಲು ಸಾಧ್ಯವಾಗುತ್ತದೆ’ ಎಂದು ಚಲುವರಾಯಸ್ವಾಮಿ ಹೇಳಿದರು.

‘ಈ ಪ್ರಕರಣದಲ್ಲಿ ಶಿವಕುಮಾರ್‌ ಹೆಸರನ್ನು ಪದೇ ಪದೇ ಎಳೆದು ತರುವುದು ಸರಿಯಲ್ಲ. ಶಿವಕುಮಾರ್‌ ಅವರು ಕುಮಾರಸ್ವಾಮಿ ವಿರುದ್ದ ಹೋರಾಟವನ್ನೂ ಮಾಡಿದ್ದಾರೆ, ಅವರಿಗೆ ಸಹಾಯವನ್ನೂ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಸಹಾಯ ಮಾಡಿದ್ದನ್ನು ಮರೆತುಬಿಡುತ್ತಾರೆ’ ಎಂದು ಟೀಕಿಸಿದರು.

‘ರೇವಣ್ಣ ವಿರುದ್ಧ ಪ್ರಕರಣ ಸೃಷ್ಟಿಸಲಾಗಿದೆ’ ಎಂಬ ಎಚ್‌.ಡಿ. ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುವಾಗ ಸಿಕ್ಕ ಸಾಕ್ಷ್ಯದ ಆಧಾರದಲ್ಲಿ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯನ್ನು ಅಪಹರಣ ಮಾಡಿದ ಆರೋಪದಲ್ಲಿ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರೇವಣ್ಣ ಪಾತ್ರ ಇಲ್ಲದಿದ್ದರೆ ಏಕೆ ಪ್ರಕರಣ ದಾಖಲಿಸುತ್ತಿದ್ದರು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT