ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಾಕ್‌ಡೌನ್‌: ಮೇ ತಿಂಗಳಲ್ಲಿ ಸೇವಾ ವಲಯದ ಚಟುವಟಿಕೆ ಕುಸಿತ

Last Updated 3 ಜೂನ್ 2021, 10:50 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಮೇ ತಿಂಗಳಲ್ಲಿ ನಕಾರಾತ್ಮಕ ಮಟ್ಟ ತಲುಪಿವೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದು ಹಾಗೂ ಲಾಕ್‌ಡೌನ್‌ ನಿರ್ಬಂಧಗಳು ಜಾರಿಗೆ ಬಂದಿದ್ದು ಇದಕ್ಕೆ ಮುಖ್ಯ ಕಾರಣ.

ಏಪ್ರಿಲ್‌ನಲ್ಲಿ 54ರಷ್ಟು ಇದ್ದ ದೇಶದ ಸೇವಾ ವಲಯದ ಚಟುವಟಿಕೆಗಳ ಸೂಚ್ಯಂಕವು ಕೋವಿಡ್‌–19 ಸಾಂಕ್ರಾಮಿಕವು ತೀವ್ರಗೊಂಡ ಪರಿಣಾಮವಾಗಿ ಮೇ ತಿಂಗಳಲ್ಲಿ 46.4ಕ್ಕೆ ಕುಸಿದಿದೆ. ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಗುರುತಿಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ, ಅದು ಕುಸಿತ ಎಂದು ತೀರ್ಮಾನಿಸಲಾಗುತ್ತದೆ.

‘ಕೋವಿಡ್ ಸಾಂಕ್ರಾಮಿಕವು ತೀವ್ರಗೊಂಡ ಕಾರಣದಿಂದಾಗಿ ಚಟುವಟಿಕೆಗಳ ಮೇಲೆ ನಿರ್ಬಂಧಗಳು ಜಾರಿಗೆ ಬಂದವು. ಇದರಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಂಪನಿಗಳು ನೀಡುವ ಸೇವೆಗಳಿಗೆ ಬೇಡಿಕೆ ಕಡಿಮೆ ಆಯಿತು. ಎಂಟು ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಸೇವಾ ವಲಯದ ವಹಿವಾಟು ತಗ್ಗಿತು’ ಎಂದು ಐಎಚ್‌ಎಸ್‌ ಮರ್ಕಿಟ್ ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ತಿಳಿಸಿದರು.

‘ಹೊಸ ವಹಿವಾಟುಗಳ ಸಂಖ್ಯೆ ಕಡಿಮೆ ಆಗಿದೆ. ಹಾಗಾಗಿ ಕಂಪನಿಗಳು ತಮ್ಮ ವೆಚ್ಚಗಳ ಮೇಲೆ ನಿಯಂತ್ರಣ ಇರಿಸಲು ಯತ್ನಿಸುತ್ತಿವೆ. ಸೇವಾ ವಲಯದ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಿದವು. ಮುಂದಿನ ದಿನಗಳ ಕುರಿತ ಚಿಂತೆಯು ಉದ್ಯೋಗ ಸೃಷ್ಟಿಗೆ ಅಡ್ಡಿಯಾಗಬಹುದು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸೇವಾ ವಲಯ ಹಾಗೂ ತಯಾರಿಕಾ ವಲಯದ ಚಟುವಟಿಕೆಗಳ ಸ್ಥಿತಿಯನ್ನು ತಿಳಿಸುವ ಕಾಂಪೊಸಿಟ್ ಪಿಎಂಐ ಔಟ್‌ಪುಟ್‌ ಸೂಚ್ಯಂಕವು ಏಪ್ರಿಲ್‌ ತಿಂಗಳಿನಲ್ಲಿ 55.4 ಇದ್ದುದು ಮೇ ತಿಂಗಳಲ್ಲಿ 48.1‌ಕ್ಕೆ ಇಳಿದಿದೆ. ಇದು ದೇಶದ ಖಾಸಗಿ ವಲಯದ ಚಟುವಟಿಕೆಗಳು ಮತ್ತೆ ಕುಸಿತ ಕಂಡಿರುವುದನ್ನು ಸೂಚಿಸುತ್ತಿದೆ. ಖಾಸಗಿ ವಲಯದಲ್ಲಿ ಉದ್ಯೋಗಗಳ ಸಂಖ್ಯೆಯು ಸತತ 15ನೆಯ ತಿಂಗಳಿನಲ್ಲಿಯೂ ಕಡಿಮೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT