ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ವಲಯದ ಚಟುವಟಿಕೆ ಹೆಚ್ಚಳ

Last Updated 5 ಅಕ್ಟೋಬರ್ 2021, 12:56 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಸೆಪ್ಟೆಂಬರ್‌ನಲ್ಲಿ ಬೆಳವಣಿಗೆಯ ಹಾದಿಯಲ್ಲಿಯೇ ಮುಂದುವರಿದಿವೆ. ಆದರೆ, ಆಗಸ್ಟ್‌ನಲ್ಲಿ ದಾಖಲಾಗಿದ್ದ 18 ತಿಂಗಳ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಚಟುವಟಿಕೆಗಳ ಪ್ರಮಾಣ ತುಸು ತಗ್ಗಿದೆ.

ಬೇಡಿಕೆ ಚುರುಕು ಪಡೆದಿದ್ದು, ಕೋವಿಡ್‌ ಸಂಬಂಧಿತ ನಿರ್ಬಂಧಗಳು ಸಡಿಲವಾಗಿದ್ದು ಸೇವಾ ವಲಯದ ಚಟುವಟಿಕೆಗಳ ಬೆಳವಣಿಗೆಗೆ ಕಾರಣ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಸರ್ವಿಸಸ್ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ 55.2 ಅಂಶದಷ್ಟು ಇತ್ತು. ಇದು ಆಗಸ್ಟ್‌ನಲ್ಲಿ 56.7ರಷ್ಟಿತ್ತು. ಇದು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಚಟುವಟಿಕೆಗಳು ಬೆಳವಣಿಗೆ ಕಂಡಿವೆ ಎಂದೂ 50ಕ್ಕಿಂತ ಕಡಿಮೆ ಇದ್ದರೆ ಕುಸಿತ ಕಂಡಿವೆ ಎಂದೂ ಅರ್ಥೈಸಲಾಗುತ್ತದೆ.

‘ಆಗಸ್ಟ್‌ನ ಮಟ್ಟಕ್ಕಿಂತ ಸೆಪ್ಟೆಂಬರ್‌ನಲ್ಲಿ ಚಟುವಟಿಕೆಗಳ ಪ್ರಮಾಣ ತಗ್ಗಿದ್ದರೂ, 2020ರ ಫೆಬ್ರುವರಿ ನಂತರದ ಎರಡನೆಯ ವೇಗದ ಬೆಳವಣಿಗೆ ದಾಖಲಾಗಿದೆ’ ಎಂದು ಐಎಚ್‌ಎಸ್ ಮರ್ಕಿಟ್ ಸಂಸ್ಥೆ ಹೇಳಿದೆ. ಬೇಡಿಕೆಯಲ್ಲಿ ಹೆಚ್ಚಳವಾದುದರಿಂದಾಗಿ ದೇಶದ ಸೇವಾ ವಲಯದ ಕಂಪನಿಗಳು ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ನೇಮಕಾತಿ ನಡೆಸಿವೆ. ಇದರಿಂದಾಗಿ ಸತತ ಒಂಬತ್ತು ತಿಂಗಳುಗಳಿಂದ ನಡೆದಿದ್ದ ಉದ್ಯೋಗ ಕಡಿತವು ಈ ವಲಯದಲ್ಲಿ ಕೊನೆಗೊಂಡಿದೆ.

‘ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದ ಕಂಪನಿಗಳು ಹೊಸ ಕೆಲಸಗಳನ್ನು ವಹಿಸಿಕೊಂಡಿವೆ’ ಎಂದು ಐಎಚ್‌ಎಸ್ ಮರ್ಕಿಟ್ ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ. ಹೆಚ್ಚುತ್ತಿರುವ ಹಣದುಬ್ಬರ, ಸೇವಾ ವಲಯದ ವೆಚ್ಚಗಳು ಏರಿಕೆ ಆಗುತ್ತಿರುವುದು ಬೆಳವಣಿಗೆಗೆ ಅಡ್ಡಿ ಎಂದು ಸಂಸ್ಥೆ ಅಂದಾಜು ಮಾಡಿದೆ.

ಸೇವಾ ವಲಯ ಹಾಗೂ ತಯಾರಿಕಾ ವಲಯಗಳ ಚಟುವಟಿಕೆಗಳನ್ನು ಒಟ್ಟಾಗಿ ತಿಳಿಸುವ ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ 55.3ಕ್ಕೆ ತಲುಪಿದೆ. ಇದು ಆಗಸ್ಟ್‌ನಲ್ಲಿ 55.4ರಷ್ಟು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT