ಶುಕ್ರವಾರ, ಜನವರಿ 28, 2022
25 °C

ಸೇವಾ ವಲಯದಲ್ಲಿ ಎರಡನೆಯ ಅತಿ ವೇಗದ ಬೆಳವಣಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನವೆಂಬರ್ ತಿಂಗಳಿನಲ್ಲಿ ದೇಶದ ಸೇವಾ ವಲಯದ ಚಟುವಟಿಕೆಗಳು ಒಂದು ದಶಕಕ್ಕೂ ಹೆಚ್ಚಿನ ಅವಧಿಯ ಎರಡನೆಯ ಅತಿವೇಗದ ಬೆಳವಣಿಗೆ ದಾಖಲಿಸಿವೆ. ಮಾರುಕಟ್ಟೆ ಪರಿಸ್ಥಿತಿ ಸುಧಾರಣೆ ಆಗಿದ್ದು ಮತ್ತು ಉದ್ಯೋಗದ ಅವಕಾಶಗಳು ಹೆಚ್ಚು ಲಭ್ಯವಾಗಿದ್ದು ಈ ಬೆಳವಣಿಗೆಗೆ ಕಾರಣ.

ಸೇವಾ ವಲಯದ ಚಟುವಟಿಕೆಗಳ ಪ್ರಮಾಣವನ್ನು ಹೇಳುವ ಇಂಡಿಯಾ ಸರ್ವಿಸಸ್ ಬ್ಯುಸಿನೆಸ್ ಆ್ಯಕ್ಟಿವಿಟಿ ಇಂಡೆಕ್ಸ್‌ ನವೆಂಬರ್‌ನಲ್ಲಿ 58.1ರ ಮಟ್ಟ ತಲುಪಿದೆ. ಇದು ಅಕ್ಟೋಬರ್‌ನಲ್ಲಿ 58.4 ಆಗಿತ್ತು. 2011ರ ಜುಲೈ ನಂತರದ ಎರಡನೆಯ ಅತಿ ವೇಗದ ಬೆಳವಣಿಗೆಯು ನವೆಂಬರ್‌ನಲ್ಲಿ ದಾಖಲಾಗಿದೆ ಎಂದು ಐಎಚ್‌ಎಸ್‌ ಮರ್ಕಿಟ್ ಸಂಸ್ಥೆ ಹೇಳಿದೆ.

ನವೆಂಬರ್‌ ತಿಂಗಳ ಬೆಳವಣಿಗೆಯನ್ನೂ ‍ಪರಿಗಣನೆಗೆ ತೆಗೆದುಕೊಂಡರೆ ದೇಶದ ಸೇವಾ ವಲಯದ ಚಟುವಟಿಕೆಗಳು ಸತತ ನಾಲ್ಕು ತಿಂಗಳುಗಳಿಂದ ಏರುಗತಿಯಲ್ಲಿ ಇವೆ. ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಬೆಳವಣಿಗೆ ಎಂದೂ, 50ಕ್ಕಿಂತ ಕಡಿಮೆ ಮಟ್ಟದಲ್ಲಿ ಇದ್ದರೆ ಅದನ್ನು ಕುಸಿತ ಎಂದೂ ಪರಿಗಣಿಸಲಾಗುತ್ತದೆ.

‘ಸೇವಾ ವಲಯದಲ್ಲಿ ಮಾರಾಟ ಪ್ರಗತಿಯು ಚೆನ್ನಾಗಿ ಆಗಿರುವ ಕಾರಣ ನವೆಂಬರ್‌ನಲ್ಲಿ ಬೆಳವಣಿಗೆ ದಾಖಲಾಗಿದೆ’ ಎಂದು ಐಎಚ್‌ಎಸ್‌ ಮರ್ಕಿಟ್ ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ. 

ಕೊರೊನಾ ವೈರಾಣುವಿನಿಂದಾಗಿ ಎದುರಾಗಿರುವ ಪ್ರಯಾಣ ನಿರ್ಬಂಧಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಸೇವಾ ವಲಯಕ್ಕೆ ಬೇಡಿಕೆ ಕುಗ್ಗಿಸಿವೆ. ಐಎಚ್‌ಎಸ್‌ ಮರ್ಕಿಟ್ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ, ಖಾಸಗಿ ವಲಯದ ಸೇವಾ ಚಟುವಟಿಕೆಗಳು ಬೆಳವಣಿಗೆ ಕಾಣುವುದು ಮುಂದುವರಿದಿದೆ.

ತಯಾರಿಕಾ ವಲಯ ಮತ್ತು ಸೇವಾ ವಲಯದ ಚಟುವಟಿಕೆಗಳನ್ನು ಒಟ್ಟಾಗಿ ಸೂಚಿಸುವ ಕಾಂ‍ಪೊಸಿಟ್ ಪಿಎಂಐ ಔಟ್‌ಪುಟ್‌ ಸೂಚ್ಯಂಕವು ನವೆಂಬರ್‌ನಲ್ಲಿ 59.2ಕ್ಕೆ ಏರಿಕೆ ಆಗಿದೆ. ಇದು ಅಕ್ಟೋಬರ್‌ನಲ್ಲಿ 58.7ರಷ್ಟು ಇತ್ತು.

‘ತಯಾರಿಕಾ ವಲಯ ಮತ್ತು ಸೇವಾ ವಲಯದ ಚಟುವಟಿಕೆಗಳನ್ನು ಒಟ್ಟಾಗಿ ಹೇಳುವ ಸೂಚ್ಯಂಕವು ಹೆಚ್ಚಿನ ಭರವಸೆ ಮೂಡಿಸುವ ಮಟ್ಟದಲ್ಲಿ ಇದೆ. ಇದು ಪ್ರಸಕ್ತ ಆರ್ಥಿಕ ವರ್ಷದ ಮೂರನೆಯ ತ್ರೈಮಾಸಿಕದಲ್ಲಿ ಒಳ್ಳೆಯ ಆರ್ಥಿಕ ಬೆಳವಣಿಗೆ ಸಾಧ್ಯವಾಗಬಹುದು ಎಂಬುದನ್ನು ಹೇಳುತ್ತಿದೆ’ ಎಂದು ಲಿಮಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು