ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಲೆಮಾರಿಗೆ ಆರೋಗ್ಯ ವಿಮೆ

Last Updated 31 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಹೊಸ ತಲೆಮಾರು ಅಥವಾ ‘ವೈ– ತಲೆಮಾರು’ (ಜೆನ್‌ ವೈ) ತಮ್ಮ ಸ್ಮಾರ್ಟ್‌ಫೋನ್‌, ಅತ್ಯಾಧುನಿಕ ಲ್ಯಾಪ್‌ಟಾಪ್‌ಗಳ ಬಗ್ಗೆ ವಹಿಸುವಷ್ಟು ಕಾಳಜಿಯನ್ನು ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ವಹಿಸುವುದಿಲ್ಲ. ‘ನಾನಿನ್ನೂ ಯುವಕ, ಆರೋಗ್ಯದಿಂದಿದ್ದೇನೆ. ನನಗೆ ವೈದ್ಯಕೀಯ ತಪಾಸಣೆ ಮಾಡಿಸುವ ಅಥವಾ ವೈದ್ಯರ ಸೇವೆಯ ಅಗತ್ಯ ಇಲ್ಲ. ಆರೋಗ್ಯ ವಿಮೆ ಯಾಕೆ ಮಾಡಿಸಿಕೊಳ್ಳಬೇಕು’ ಎಂಬುದು ಈ ತಲೆಮಾರಿನ (Millennials) ಬಹುತೇಕರ ಮನಸ್ಥಿತಿಯಾಗಿದೆ.

ಈ ತಲೆಮಾರು ತಮ್ಮ ಗ್ಯಾಜೆಟ್‌ಗಳಲ್ಲಿ ಎಷ್ಟರ ಮಟ್ಟಿಗೆ ಮುಳುಗಿರುತ್ತದೆ ಎಂದರೆ, ಆರೋಗ್ಯ ವಿಮೆ ಎಂಬುದು ಅವರ ಆದ್ಯತೆಗಳ ಪಟ್ಟಿಯಲ್ಲಿ ಕೊನೆಯಲ್ಲಿರುತ್ತದೆ. ನಿಜ ಹೇಳಬೇಕೆಂದರೆ, ಆರೋಗ್ಯ ವಿಮೆ ಮಾಡಿಸಿಲ್ಲ ಎಂಬುದೇ, ‘ನನ್ನ ಆರೋಗ್ಯ ಚೆನ್ನಾಗಿದೆ’ ಎಂಬ ಮಿಥ್ಯೆಯ ಭಾವನೆಯನ್ನು ಅವರಲ್ಲಿ ಮೂಡಿಸುತ್ತದೆ. ಯಾರೇ ಆದರೂ ಆರೋಗ್ಯ ವಿಮೆ ಮಾಡಿಸಿದರೆ ನಿಯಮಿತವಾಗಿ ರಕ್ತ ಪರೀಕ್ಷೆ, ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುತ್ತಾರೆ. ಹಾಗೆ ಮಾಡಿದಾಗ ಮಾತ್ರ ನಿಜವಾಗಿಯೂ ಅವರು ಆರೋಗ್ಯದಿಂದಿದ್ದಾರೆಯೇ ಅಥವಾ ವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆಯೇ ಎಂಬುದು ತಿಳಿಯುತ್ತದೆ.

ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದ ಹೊಸ ತಲೆಮಾರಿನ ಯುವಕರು, ಅನಾರೋಗ್ಯಕರ ಜೀವನಕ್ರಮದಿಂದ ಆರೋಗ್ಯದ ಮೇಲಾಗಬಹುದಾದ ಪರಿಣಾಮಗಳ ಬಗ್ಗೆ ಅರಿತುಕೊಳ್ಳುತ್ತಿದ್ದಾರೆ. ಜತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ತಡರಾತ್ರಿಯವರೆಗೆ ಕೆಲಸ ಮಾಡುವುದು, ವ್ಯಾಯಾಮದ ಕೊರತೆ, ಸಿಟ್ಟು ಮುಂತಾದವುಗಳ ದುಷ್ಪರಿಣಾಮ
ಗಳಿಂದ ರಕ್ಷಿಸಿಕೊಳ್ಳಲು ಮುಂದಾಗು ತ್ತಿದ್ದಾರೆ. ಕ್ರಿಯಾಶೀಲ ಸಾಮಾಜಿಕ ಬದುಕು, ಆರೋಗ್ಯಕರ ಆಹಾರ, ಪ್ರವಾಸ, ಸಾಹಸ ಕ್ರೀಡೆ, ಧ್ಯಾನ ಮುಂತಾದವುಗಳ ಕಡೆಗೆ ಗಮನ ಹರಿಸುತ್ತಿದ್ದಾರೆ.

ಇವೆಲ್ಲವುಗಳ ಹೊರತಾಗಿಯೂ ಆರೋಗ್ಯ ವಿಮೆ ಮಾಡಿಸಿಕೊಂಡ ಯುವಕರ ಸಂಖ್ಯೆ ಕಡಿಮೆ ಇದೆ ಎಂಬುದು ವಿಪರ್ಯಾಸವಾಗಿದೆ. ಹೊಸ ತಲೆಮಾರಿನ ನಾಲ್ಕನೇ ಒಂದರಷ್ಟು ಭಾಗ ಈಗಲೂ ಆರೋಗ್ಯ ವಿಮೆಯಿಂದ ಹೊರಗುಳಿದಿದೆ. ಹೊಸ ತಲೆಮಾರಿನ ಶೇ 64ರಷ್ಟು ಮಂದಿಗೆ ಅವಘಡವೇನಾದರೂ ಸಂಭವಿಸಿದರೆ, ಅವರು ತಮ್ಮ ಪಾಲಕರ ಮೇಲೆ ದೊಡ್ಡ ಆರ್ಥಿಕ ಹೊರೆ ಹೊರಿಸಲಿದ್ದಾರೆ.

ಈಚಿನ ವರ್ಷಗಳಲ್ಲಿ ಆರೋಗ್ಯ ಸೇವೆಗಳ ವೆಚ್ಚವು ಗಗನಕ್ಕೇರುತ್ತಿವೆ. ಸಣ್ಣ ವಯಸ್ಸಿನಲ್ಲೇ ವಿಮೆ ಮಾಡಿಸದಿದ್ದರೆ ವಿಮೆಯ ಕಂತು ಹೆಚ್ಚಾಗುವುದಲ್ಲದೆ ವಿಮಾದಾರರು ಕೆಲವು ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂಬುದನ್ನು ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕಾಗಿದೆ. 22ರಿಂದ 35 ವರ್ಷ ವಯಸ್ಸಿನೊಳ ಗಿನವರಿಗೆ ಅತ್ಯಂತ ಕಡಿಮೆ ಕಂತಿನಲ್ಲಿ ಗರಿಷ್ಠ ಸೌಲಭ್ಯಗಳ ಆರೋಗ್ಯ ವಿಮೆ ಲಭಿಸುತ್ತದೆ. ವಯಸ್ಸಾದಂತೆ ಸೌಲಭ್ಯ ಕಡಿಮೆಯಾಗುವುದರ ಜತೆಗೆ, ವಿಮಾ ಕಂತು ದುಬಾರಿಯಾಗುತ್ತಾ ಸಾಗುತ್ತದೆ. ಹೊಸ ತಲೆಮಾರಿನ ಯುವಕರಿಗೆ ಆರೋಗ್ಯ ಭದ್ರತೆಯನ್ನು ನೀಡಬೇಕೆಂಬ ಉದ್ದೇಶದಿಂದ, ‘ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು’ (ಐಆರ್‌ಡಿಎಐ) 2016ರಲ್ಲಿ ಆರೋಗ್ಯ ವಿಮೆಗೆ ಹೆಲವು ಹೊಸ ನಿಯಮಾವಳಿಗಳನ್ನು ರೂಪಿಸಿದೆ. ಅದರಡಿ, ವಿಮಾದಾರನ ವಯಸ್ಸಿನ ಆಧಾರದಲ್ಲಿ ಕಂತಿನ ಪ್ರಮಾಣ ನಿರ್ಧರಿಸುವುದು, ವಿಮೆ ಮಾಡಿಸಿಯೂ ಸೌಲಭ್ಯವನ್ನು ಬಳಸದಿರುವವರಿಗೆ ಬೋನಸ್‌ ನೀಡುವುದೇ ಮುಂತಾದ ಸೌಲಭ್ಯಗಳನ್ನು ನೀಡಲಾಗಿದೆ.

ಕೆಲವು ವಿಮಾ ಕಂಪನಿಗಳು, ಯುವ ಸಮುದಾಯಕ್ಕೆ ಆರೋಗ್ಯವಾಗಿರುವುದು ಹೇಗೆ, ರೋಗಗಳನ್ನು ತಡೆಯುವ ವಿಧಾನವೇನು ಮುಂತಾದ ವಿಚಾರಗಳ ಬಗ್ಗೆ ಸತತವಾಗಿ ಮಾಹಿತಿ ನೀಡುತ್ತಿವೆ.

ಆಗಾಗ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ವಿಮೆಯ ನವೀಕರಣದ ದಿನಾಂಕದ ಬಗ್ಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡುತ್ತವೆ. ಈ ಎಲ್ಲ ಕ್ರಿಯೆಗಳು ವಿಮಾ ಕಂಪನಿ ಹಾಗೂ ಗ್ರಾಹಕರ ಮಧ್ಯೆ ವಿಶ್ವಾಸ ವೃದ್ಧಿಗೆ ಸಹಕಾರಿಯಾಗುತ್ತವೆ.

ದೇಶದಲ್ಲಿ ಹೊಸ ತಲೆಮಾರಿನ ಸುಮಾರು 4 ರಿಂದ 5 ಕೋಟಿ ಯುವಕರು ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹದಂಥ ರೋಗಕ್ಕೆ ತುತ್ತಾಗಿದ್ದಾರೆ ಅಥವಾ ಇನ್ನೇನು ಇಂಥ ರೋಗಕ್ಕೆ ತುತ್ತಾಗುವ ಹಂತದಲ್ಲಿದ್ದಾರೆ. ನಮ್ಮಲ್ಲಿ 22 ರಿಂದ 37ವರ್ಷ ವಯಸ್ಸಿನೊಳಗಿನ 35 ಕೋಟಿ ಜನರಿದ್ದಾರೆ. ಇಂಥ ಸ್ಥಿತಿಯಲ್ಲಿ ಆರೋಗ್ಯ ವಿಮೆ ಎಂಬುದು ಅನಿವಾರ್ಯವಾಗುತ್ತಿದೆ.

(ಲೇಖಕ: ಸ್ಟಾರ್‌ ಹೆಲ್ತ್‌ ಆ್ಯಂಡ್‌ ಅಲೈಡ್‌ ಇನ್ಶುರೆನ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT