ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಒಸಿ ಲಾಭ ಶೇ 49ರಷ್ಟು ಇಳಿಕೆ

Published 30 ಏಪ್ರಿಲ್ 2024, 15:55 IST
Last Updated 30 ಏಪ್ರಿಲ್ 2024, 15:55 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ತೈಲ ನಿಗಮವು (ಐಒಸಿ) 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹4,837 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ 49ರಷ್ಟು ಇಳಿಕೆಯಾಗಿದೆ. 

2022–23ರಲ್ಲಿ ಇದೇ ಅವಧಿಯಲ್ಲಿ ₹10,058 ಕೋಟಿ ಲಾಭ ಗಳಿಸಿದ್ದರೆ, ಡಿಸೆಂಬರ್‌ ತ್ರೈಮಾಸಿಕದಲ್ಲಿ ₹8,063 ಕೋಟಿ ಲಾಭ ಗಳಿಸಿತ್ತು ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ಪೆಟ್ರೋಕೆಮಿಕಲ್‌ ವ್ಯವಹಾರದಲ್ಲಿ ನಷ್ಟವಾಗಿದೆ. ಉತ್ಪಾದನೆ ವೆಚ್ಚ ಹೆಚ್ಚುತ್ತಿದೆ. ಕಚ್ಚಾ ತೈಲದ ದರ ಏರುತ್ತಿದ್ದರೂ, ಚುನಾವಣಾ ಪೂರ್ವದಲ್ಲಿ ಇಂಧನ ಮಾರಾಟ ಬೆಲೆಯಲ್ಲಿ ₹2 ಕಡಿತಗೊಳಿಸಲಾಗಿತ್ತು. ಇದರಿಂದ ಲಾಭದಲ್ಲಿ ಇಳಿಕೆಯಾಗಿದೆ ಎಂದು ಹೇಳಿದೆ.

ಅಲ್ಲದೆ ಗೃಹಬಳಕೆಯ ಅಡುಗೆ ಅನಿಲ ಬೆಲೆ ಹೆಚ್ಚಿಸಿಲ್ಲ. ಇದರಿಂದ ₹1,017 ಕೋಟಿ ನಷ್ಟವಾಗಿದ್ದು, ಸರ್ಕಾರದಿಂದ ಪರಿಹಾರ ನೀಡಿಲ್ಲ ಎಂದು ತಿಳಿಸಿದೆ.

2023–24ನೇ ಪೂರ್ಣ ಹಣಕಾಸು ವರ್ಷದಲ್ಲಿ ಕಂಪನಿಯು ₹39,618 ಕೋಟಿ ಲಾಭ ಗಳಿಸಿದೆ. ಪೆಟ್ರೋಲಿಯಂ ಉತ್ಪನ್ನಗಳ ಮಾರಾಟವು 2.29 ಕೋಟಿ ಟನ್‌ನಿಂದ 2.37 ಕೋಟಿ ಟನ್‌ಗೆ ಏರಿಕೆಯಾಗಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ 2.33 ಕೋಟಿ ಟನ್‌ ಮಾರಾಟವಾಗಿತ್ತು. ಪೂರ್ಣ ಹಣಕಾಸು ವರ್ಷದ ಮಾರಾಟವು 9.06 ಕೋಟಿ ಟನ್‌ನಿಂದ 9.23 ಕೋಟಿ ಟನ್‌ಗೆ ಹೆಚ್ಚಳ ಕಂಡಿದೆ ಎಂದು ವಿವರಿಸಿದೆ.

ಪ್ರತಿ ಷೇರಿಗೆ ₹7 ಲಾಭಾಂಶ ನೀಡಲು ಕಂಪನಿ ನಿರ್ಧರಿಸಿದೆ.  

ಷೇರು ಶೇ 4ರಷ್ಟು ಇಳಿಕೆ: ಲಾಭದಲ್ಲಿ ಇಳಿಕೆಯಾಗಿರುವುದರಿಂದ ನಿಗಮದ ಷೇರಿನ ಮೌಲ್ಯವು ಶೇ 4ಕ್ಕೂ ಹೆಚ್ಚು ಇಳಿಕೆಯಾಗಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆ ₹168 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT