ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್‌ ಶತಮಾನೋತ್ಸವ: ರಾಜ್ಯದ ಸ್ವಾಭಿಮಾನ ಕಾಯುವ ಬ್ಯಾಂಕ್‌ ಆಗಲಿ –DCM

ಕರ್ಣಾಟಕ ಬ್ಯಾಂಕ್‌ ಶತಮಾನೋತ್ಸವದಲ್ಲಿ ₹100ರ ನಾಣ್ಯ ಬಿಡುಗಡೆ ಮಾಡಿದ ಉಪಮುಖ್ಯಮಂತ್ರಿ
Published 18 ಫೆಬ್ರುವರಿ 2024, 21:22 IST
Last Updated 18 ಫೆಬ್ರುವರಿ 2024, 21:22 IST
ಅಕ್ಷರ ಗಾತ್ರ

ಮಂಗಳೂರು: ‘ಕರ್ಣಾಟಕ ಬ್ಯಾಂಕ್‌, ವಿಜಯ ಬ್ಯಾಂಕ್‌, ಕೆನರಾ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ಹುಟ್ಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಇವುಗಳಲ್ಲಿ ಕೆಲವು ಬೇರೆ ಬ್ಯಾಂಕ್‌ಗಳ ಜೊತೆ ವಿಲೀನವಾಗಿವೆ. ಕರ್ಣಾಟಕ ಬ್ಯಾಂಕ್‌ ಬೇರೆ ಬ್ಯಾಂಕ್‌ಗಳನ್ನು ತನ್ನ ತೆಕ್ಕೆಗೆ ಪಡೆದು ಬಲಿಷ್ಠವಾಗಿ ಬೆಳೆದು, ರಾಜ್ಯದ ಸ್ವಾಭಿಮಾನ ಕಾಪಾಡುವ ಬ್ಯಾಂಕ್‌ ಆಗಿ ಹೊರಹೊಮ್ಮಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಕರ್ಣಾಟಕ ಬ್ಯಾಂಕಿನ ಶತಮಾನೋತ್ಸವದ ಲಾಂಛನವಿರುವ ₹100ರ ವಿಶೇಷ ನಾಣ್ಯ, ಬ್ಯಾಂಕಿನ ಕೇಂದ್ರ‌ ಕಚೇರಿಯ ಚಿತ್ರವಿರುವ ₹5ರ ಅಂಚೆ ಚೀಟಿ ಹಾಗೂ ಸ್ಮರಣ ಸಂಚಿಕೆಗಳನ್ನು ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಅವರು ಭಾನುವಾರ ಮಾತನಾಡಿದರು.

‘ಸಾಮಾನ್ಯ ಜನರಿಗೆ, ಗ್ರಾಮೀಣ ಭಾಗದ ಕೃಷಿಕರಿಗೆ ಸೇವೆ ನೀಡುತ್ತಾ ಬಂದ ಬ್ಯಾಂಕ್‌ ಇದು. ಬೆಳೆಯುವ ಭರದಲ್ಲಿ ಬೇರು ಹಾಗೂ ಇತಿಹಾಸವನ್ನು ಮರೆಯಬೇಡಿ.‌ ಕರಾವಳಿಯ ಮಣ್ಣಿನಲ್ಲಿ ವಿಶೇಷ ಗುಣವಿದೆ. ಈ ನೆಲದ ನಂಟನ್ನು ಕಳೆದುಕೊಳ್ಳಬೇಡಿ’ ಎಂದರು. 

ಬ್ಯಾಂಕನ್ನು ಆರಂಭಿಸಿದ್ದ 9 ಮಂದಿ ನಿರ್ದೇಶಕ ಭಾವಚಿತ್ರಗಳಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ, ‘ಕಾಶ್ಮೀರದ ಶ್ರೀನಗರದಿಂದ ಕನ್ಯಾಕುಮಾರಿಯವರೆಗೂ ಶಾಖೆಗಳನ್ನು ಆರಂಭಿಸುವ ಮೂಲಕ ಕರ್ಣಾಟಕ ಬ್ಯಾಂಕ್‌ ಭಾರತ್‌ ಜೋಡೊ ಯಾತ್ರೆಯನ್ನು ನಿಜವಾದ ಅರ್ಥದಲ್ಲಿ ಸಾಕಾರಗೊಳಿಸಬೇಕು’ ಎಂದರು.

‘ಜಾಗತಿಕ ಬ್ಯಾಂಕಿಂಗ್‌ ರಂಗ ಏಳು–ಬೀಳುಗಳನ್ನು ಕಾಣುತ್ತಿದೆ. ಇಟಲಿ, ಸ್ಪೇನ್‌, ಗ್ರೀಸ್‌ ಸೇರಿದಂತೆ ಜಗತ್ತಿನ ಅನೇಕ ದೇಶಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಪರಿಹಾರದ ದಾರಿಗಾಗಿ ಭಾರತದತ್ತ ಮುಖಮಾಡಿವೆ. ನಮ್ಮ ದೇಶಕ್ಕೆ ಅಂತಹ ಚೈತನ್ಯ ಇದೆ. ಜಗತ್ತಿನ ಬ್ಯಾಂಕಿಂಗ್‌ ರಂಗಕ್ಕೆ ದಾರಿ ದೀಪವಾಗಬಲ್ಲ ಆರ್ಥಿಕ ವ್ಯವಹಾರಗಳ ಸಂಶೋಧನಾ ಸಂಸ್ಥೆಯನ್ನು ಕರ್ಣಾಟಕ ಬ್ಯಾಂಕ್‌ ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.

ಒಂಬತ್ತು ಮಂದಿ ನಿರ್ದೇಶಕರು ಸೇರಿಕೊಂಡು ಮಂಗಳೂರಿನ ಡೊಂಗರಕೇರಿಯ ಬೀದಿಯಲ್ಲಿ ಬಿ.ಆರ್‌. ವ್ಯಾಸರಾಯ ಆಚಾರ್‌ ಅಧ್ಯಕ್ಷತೆಯಲ್ಲಿ 1924ರಲ್ಲಿ ಆರಂಭಿಸಿದ ಕರ್ಣಾಟಕ ಬ್ಯಾಂಕಿನ ನೂರು ವರ್ಷಗಳ ಇತಿಹಾಸವನ್ನು ಹಾಗೂ ಭವಿಷ್ಯದ ಯೋಜನೆಗಳನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕೃಷ್ಣನ್ ಎಚ್. ವಿವರಿಸಿದರು.

ಕರ್ನಾಟಕ ವೃತ್ತದ ಪೋಸ್ಟ್‌ ಮಾಸ್ಟರ್‌ ಜನರಲ್‌ ರಾಜೇಂದ್ರ ಕುಮಾರ್‌, ಬ್ಯಾಂಕಿನ ಅಧ್ಯಕ್ಷ ಪಿ. ಪ್ರದೀಪ್‌ ಕುಮಾರ್‌, ಕಾರ್ಯಕಾರಿ ನಿರ್ದೇಶಕ ಶೇಖರ್‌ ರಾವ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT