ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ, ಸೇವಾ ಚಟುವಟಿಕೆ ಕುಸಿತ: ಆರ್ಥಿಕ ಸಮೀಕ್ಷೆ ಅಂದಾಜು

Published 17 ಫೆಬ್ರುವರಿ 2024, 0:13 IST
Last Updated 17 ಫೆಬ್ರುವರಿ 2024, 0:13 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ ಕೃಷಿ ಹಾಗೂ ಸೇವಾ ವಲಯದ ಬೆಳವಣಿಗೆ ದರ ಕುಸಿತವಾಗಲಿದ್ದು, ಕೈಗಾರಿಕಾ ವಲಯವು ಹೆಚ್ಚಿನ ಪ್ರಗತಿ ದಾಖಲಿಸಲಿದೆ ಎಂದು ‘ಕರ್ನಾಟಕ ಆರ್ಥಿಕ ಸಮೀಕ್ಷೆ 2023–24’ರ ವರದಿಯು ಅಂದಾಜಿಸಿದೆ. 

ವಿಧಾನಸಭೆಯಲ್ಲಿ ಶುಕ್ರವಾರ ಬಜೆಟ್‌ ಮಂಡನೆಗೂ ಮೊದಲು ಈ ಸಮೀಕ್ಷಾ ವರದಿಯನ್ನು ಮಂಡಿಸಲಾಯಿತು.

ತೀವ್ರ ಬರಗಾಲ ಹಾಗೂ ಮಳೆ ಕೊರತೆಯೇ ಕೃಷಿ ಮತ್ತು ಅದರ ಅವಲಂಬಿತ ವಲಯಗಳ ಬೆಳವಣಿಗೆ ದರದ ಇಳಿಕೆಗೆ ಮೂಲ ಕಾರಣ ಎಂದು ವರದಿ ಹೇಳಿದೆ.

2022–23ನೇ ಸಾಲಿನಡಿ ಕೃಷಿ ವಲಯದ ಬೆಳವಣಿಗೆ ದರವು ಶೇ 2.8ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಶೇ (–) 1.8ರಷ್ಟು ಇಳಿಕೆಯಾಗಬಹುದು ಎಂದು ಹೇಳಿದೆ. 2021–22ನೇ ಸಾಲಿನಡಿ ಈ ವಲಯವು ಶೇ 5.7ರಷ್ಟು ಪ್ರಗತಿ ಸಾಧಿಸಿತ್ತು. 

ಮೀನುಗಾರಿಕೆ ವಲಯದ ಬೆಳವಣಿಗೆ ದರವೂ ಶೇ (–) 4.6ರಷ್ಟು ಇಳಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಕೈಗಾರಿಕಾ ಚಟುವಟಿಕೆ ಹೆಚ್ಚಳ ನಿರೀಕ್ಷೆ:

2022–23ನೇ ಸಾಲಿನಡಿ ಕೈಗಾರಿಕಾ ವಲಯದ ಬೆಳವಣಿಗೆ ದರವು ಶೇ 3.8ರಷ್ಟಿದ್ದು, 2023–24ನೇ ಸಾಲಿಗೆ ಶೇ 7.5ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಈ ವಲಯದ ಬೆಳವಣಿಗೆಯು 2021–22ನೇ ಸಾಲಿನಡಿ ಶೇ 11.1ರಷ್ಟು ಇತ್ತು.

ಕೋವಿಡ್‌ ಸಾಂಕ್ರಾಮಿಕದ ವೇಳೆ ಹಿಂಜರಿತಕ್ಕೆ ಒಳಗಾಗಿದ್ದ ಕೈಗಾರಿಕಾ ವಲಯವು ಕ್ರಮೇಣ ಚೇತರಿಕೆಯ ಹಳಿಗೆ ಮರಳುತ್ತಿರುವುದು ಆಶಾದಾಯಕವಾಗಿದೆ. 

ನಿರ್ಮಾಣ ವಲಯದ ಶೇ 8.2ರಷ್ಟು ಹಾಗೂ ತಯಾರಿಕಾ ವಲಯದ ಶೇ 7.4ರಷ್ಟು ಬೆಳವಣಿಗೆಯು ಕೈಗಾರಿಕಾ ವಲಯದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡಲಿದೆ ಎಂದು ಸಮೀಕ್ಷೆ ಹೇಳಿದೆ.

ಸೇವಾ ಚಟುವಟಿಕೆ ಕುಸಿತ:

ರಾಜ್ಯದ ಸೇವಾ ವಲಯದ ಬೆಳವಣಿಗೆ ದರವು ಕುಸಿತವಾಗಲಿದೆ ಎಂದು ಸಮೀಕ್ಷೆಯು ಅಂದಾಜಿಸಿದೆ.

2021–22ನೇ ಸಾಲಿನಡಿ ಶೇ 10ರಷ್ಟು ಹಾಗೂ 2022–23ನೇ ಸಾಲಿನಡಿ ಶೇ 9.9ರಷ್ಟಿದ್ದ ಬೆಳವಣಿಗೆ ದರವು, 2023–24ನೇ ಸಾಲಿನಡಿ ಶೇ 8.7ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಅಂದಾಜಿಸಲಾಗಿದೆ.

ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯು 2021–22ರಲ್ಲಿ ಶೇ 11.7 ಹಾಗೂ 2022–23ರಲ್ಲಿ ಶೇ 9.20ರಷ್ಟು ಇತ್ತು. 2023–24ರಲ್ಲಿ ಶೇ 12.6ರಷ್ಟು ಪ್ರಗತಿ ಸಾಧಿಸಲಿದೆ. ಅಲ್ಲದೇ, ಉಪ ವಲಯಗಳಾದ ಸಾರ್ವಜನಿಕ ಆಡಳಿತ ಶೇ 10.5, ಇತರೆ ಸೇವೆಗಳು ಶೇ 8.2, ಹೋಟೆಲ್‌, ರೆಸ್ಟೋರೆಂಟ್‌ಗಳ ಶೇ 6.5ರಷ್ಟು ಬೆಳವಣಿಗೆಯು ಸೇವಾ ವಲಯದ ಪ್ರಗತಿಗೆ ಕೊಡುಗೆ ನೀಡುತ್ತವೆ ಎಂದು ಸಮೀಕ್ಷೆ ವಿವರಿಸಿದೆ.

ರಾಜ್ಯದ ಜಿಡಿ‍ಪಿಗೆ ಸೇವಾ ಮತ್ತು ಕೈಗಾರಿಕಾ ವಲಯದ ಪಾಲು ದೊಡ್ಡದಿದೆ. ಸೇವಾ ವಲಯ ಶೇ 67, ಕೈಗಾರಿಕೆ ಶೇ 20 ಹಾಗೂ ಕೃಷಿ ವಲಯವು ಶೇ 13ರಷ್ಟು ಕೊಡುಗೆ ನೀಡಲಿದೆ.

2022–23ರಲ್ಲಿ ಬೆಂಗಳೂರು ನಗರದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ₹8,59,154 ಕೋಟಿ ಆಗಿದೆ. ಇದು ರಾಜ್ಯದ ಜಿಡಿಪಿಗೆ ಶೇ 37.8ರಷ್ಟು ಕೊಡುಗೆ ನೀಡುತ್ತದೆ. ನಂತರದ ಸ್ಥಾನಗಳಲ್ಲಿ ದಕ್ಷಿಣ ಕನ್ನಡ (ಶೇ 5.5) ಬೆಳಗಾವಿ (ಶೇ 4.0) ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT