ಬುಧವಾರ, ನವೆಂಬರ್ 25, 2020
19 °C
ಲಕ್ಷ್ಮೀ ವಿಲಾಸ್ ಬ್ಯಾಂಕ್‌ ವಹಿವಾಟು ಮೇಲೆ ಕೇಂದ್ರ ಸರ್ಕಾರದ ಒಂದು ತಿಂಗಳ ನಿರ್ಬಂಧ

ಷೇರುದಾರರಿಗೆ ನಷ್ಟ; ಗ್ರಾಹಕರಿಗೆ ಸಂಕಷ್ಟ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಕ್ಷ್ಮೀ ವಿಲಾಸ್ ಬ್ಯಾಂಕಿನ (ಎಲ್‌ವಿಬಿ) ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರ ಒಂದು ತಿಂಗಳ ಅವಧಿಗೆ ವಿಧಿಸಿರುವ ನಿರ್ಬಂಧಗಳ ಪರಿಣಾಮವಾಗಿ ಬ್ಯಾಂಕಿನ ಗ್ರಾಹಕರು ತಾತ್ಕಾಲಿಕವಾಗಿ ತೊಂದರೆಗೆ ಒಳಗಾ ದರೂ, ಅವರ ಹಣ ಸುರಕ್ಷಿತವಾಗಿ ಇರುತ್ತದೆ. ಬ್ಯಾಂಕ್‌ನ ಬಾಂಡ್‌ಗಳನ್ನು ಖರೀದಿ ಮಾಡಿದವರು ಕೂಡ ನಷ್ಟದ ಭೀತಿಯಲ್ಲಿ ಇರಬೇಕಾಗಿಲ್ಲ ಎನ್ನುತ್ತಾರೆ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ತಜ್ಞರು. ಆದರೆ, ಎಲ್‌ವಿಬಿ ಷೇರುದಾರರು ಅತಿಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಯೆಸ್ ಬ್ಯಾಂಕ್‌ ಕೂಡ ಕೆಲವು ತಿಂಗಳುಗಳ ಹಿಂದೆ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಆ ಬ್ಯಾಂಕಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮೂಲಕ ಹಣ ಹೂಡಿಕೆ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಯೆಸ್‌ ಬ್ಯಾಂಕ್‌ನ ಅಸ್ಮಿತೆ ಉಳಿದುಕೊಂಡಿತು. ಯೆಸ್‌ ಬ್ಯಾಂಕ್‌ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ದಾಖಲಾದರೂ, ಷೇರುಪೇಟೆಯಲ್ಲಿ ಆ ಬ್ಯಾಂಕ್‌ನ ಷೇರುಗಳ ಮಾರಾಟ ಮತ್ತು ಖರೀದಿ ಮುಂದುವರಿಯಿತು.

‘ಆದರೆ, ಎಲ್‌ವಿಬಿ ವಿಚಾರದಲ್ಲಿ ಹಾಗೆ ಆಗಲಿಕ್ಕಿಲ್ಲ. ಈಗ ಪ್ರಸ್ತಾಪಿಸಲಾಗಿರುವ ವಿಲೀನ ಸೂತ್ರದ ಪ್ರಕಾರ, ಎಲ್‌ವಿಬಿಯು ಸಿಂಗಪುರ ಮೂಲದ ಡಿಬಿಎಸ್‌ ಬ್ಯಾಂಕಿನಲ್ಲಿ ವಿಲೀನ ಆಗಲಿದೆ. ವಿಲೀನದ ನಂತರ, ಎಲ್‌ವಿಬಿ ಎಂಬ ಹಣಕಾಸು ಸಂಸ್ಥೆ ಅಸ್ತಿತ್ವದಲ್ಲಿ ಇರುವುದಿಲ್ಲ. ಷೇರುಪೇಟೆಯಲ್ಲಿ ಮಾಡಿಕೊಂಡ ನೋಂದಣಿ ಚಾಲ್ತಿಯಲ್ಲಿ ಉಳಿಯುವುದಿಲ್ಲ. ಹಾಗಾಗಿ ಬ್ಯಾಂಕಿನ ಷೇರುಗಳನ್ನು ಮಾರಲು ಅಥವಾ ಖರೀದಿಸಲು ಆಗುವುದಿಲ್ಲ’ ಎಂದು ಇಂಡಿಯನ್‌ಮನಿ.ಕಾಂ ಸಂಸ್ಥೆಯ ಉಪಾಧ್ಯಕ್ಷ ಎಂ.ಎಸ್. ಶರತ್ ಹೇಳಿದರು.

ಷೇರಿನಲ್ಲಿ ಹೂಡಿಕೆ ಮಾಡು ವುದರಲ್ಲಿ ಅಪಾಯ ಇದ್ದಿದ್ದೇ. ವಿಲೀನದ ನಂತರ ಷೇರು ಮೌಲ್ಯ ಕಳೆದುಕೊಳ್ಳುತ್ತದೆ. ಆ ನಷ್ಟವನ್ನು ಹೂಡಿಕೆದಾರರು ಹೊರಲೇಬೇಕಾಗುತ್ತದೆ ಎಂದು ಶರತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಲದ ಕಂತು?: ಎಲ್‌ವಿಬಿಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಆ ಖಾತೆಯಿಂದ ವ್ಯವಸ್ಥಿತ ಹೂಡಿಕೆ ಯೋಜನೆಗಳಿಗೆ (ಎಸ್‌ಐಪಿ) ಹಣ ವರ್ಗಾವಣೆ ಆಗುವುದಿದ್ದರೆ, ಅದಕ್ಕೆ ಈಗಿನ ನಿರ್ಬಂಧಗಳ ಅವಧಿಯಲ್ಲಿ ಅಡಚಣೆ ಎದುರಾಗಬಹುದು. ‘ಬೇರೊಂದು ಬ್ಯಾಂಕಿನಲ್ಲಿ ಸಾಲ ಮಾಡಿ, ಅದರ ಕಂತುಗಳು ಎಲ್‌ವಿಬಿ ಖಾತೆಯಿಂದ ಪಾವತಿಯಾಗುವುದಿದ್ದರೆ, ಕಂತಿನ ಮೊತ್ತವು ₹ 25 ಸಾವಿರಕ್ಕಿಂತ ಹೆಚ್ಚಿದ್ದರೆ ಸಮಸ್ಯೆ ಆಗಬಹುದು. ಗ್ರಾಹಕರು ತಮ್ಮ ಸಾಲದ ಖಾತೆ ಇರುವ ಬ್ಯಾಂಕ್‌ ಅಧಿಕಾರಿಗಳ ಜೊತೆ ಮಾತನಾಡಿ, ನಿರ್ಬಂಧಗಳು ಜಾರಿಯಲ್ಲಿರುವವರೆಗೆ ಏನು ಮಾಡಬೇಕು ಎಂಬ ಬಗ್ಗೆ ಅವರಿಂದಲೇ ಸಲಹೆ ಪಡೆಯುವುದು ಒಳಿತು’ ಎಂದು ಶರತ್ ಹೇಳಿದರು.

ನಿರ್ಬಂಧಗಳು ಡಿಸೆಂಬರ್ 16ರವರೆಗೂ ಮುಂದುವರಿಯಲಿರುವ ಕಾರಣ, ಎಲ್‌ವಿಬಿಯಲ್ಲಿ ಸಂಬಳದ ಖಾತೆ ಹೊಂದಿರುವವರು ಡಿಸೆಂಬರ್ ಆರಂಭದಲ್ಲಿ ಬರುವ ಸಂಬಳವನ್ನು ಬೇರೆ ಬ್ಯಾಂಕ್‌ನಲ್ಲಿ ತಾವು ಹೊಂದಿರುವ ಖಾತೆಗೆ ಹಾಕಿಸಿಕೊಳ್ಳುವುದು ಉತ್ತಮ ಎಂದು ವೈಯಕ್ತಿಕ ಹಣಕಾಸು ಸಲಹೆಗಾರರು ಹೇಳುತ್ತಾರೆ. ಆಗ, ₹ 25 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸಲು ಅಡಚಣೆ ಆಗುವುದಿಲ್ಲ ಎಂಬುದು ಅವರ ಅನಿಸಿಕೆ.

ಎಲ್‌ವಿಬಿಯಿಂದ ಬಾಂಡ್‌ ಖರೀದಿ ಮಾಡಿದ್ದವರು ಆತಂಕಕ್ಕೆ ಒಳಗಾಗುವ ಅಗತ್ಯ ಕಾಣುತ್ತಿಲ್ಲ ಎಂದು ಹಣಕಾಸು ತಜ್ಞರೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಹೇಳಿದರು. ಡಿಬಿಎಸ್‌ ಬ್ಯಾಂಕ್ ಜೊತೆ ಎಲ್‌ವಿಬಿ ವಿಲೀನ ಆದ ನಂತರ, ಬಾಂಡ್‌ಗಳಿಗೆ ಸಂಬಂಧಿಸಿದ ಮೊತ್ತವನ್ನು ಡಿಬಿಎಸ್‌ ಮರಳಿಸುತ್ತದೆ ಎಂಬುದು ಅವರ ಅಭಿಪ್ರಾಯ.

‘ಎಲ್‌ವಿಬಿಯಲ್ಲಿ ಇರುವ ಎಲ್ಲ ಬಗೆಯ ಠೇವಣಿಗಳು ಸುರಕ್ಷಿತವಾಗಿ ಇರುತ್ತವೆ. ನಿರ್ಬಂಧಗಳ ಅವಧಿ ಮುಗಿದ ನಂತರ ಎಲ್‌ವಿಬಿ ಪಾವತಿಸುತ್ತಿರುವ ಹೆಚ್ಚಿನ ಬಡ್ಡಿ ದರ ಸಿಗುವುದಿಲ್ಲ. ಅದರ ಬದಲಿಗೆ, ಡಿಬಿಎಸ್‌ ಪಾವತಿಸುವ ಬಡ್ಡಿ ದರ ಸಿಗುತ್ತದೆ. ಗ್ರಾಹಕರು ತಮ್ಮ ಹಣ ಹಿಂಪಡೆಯಲು ತೊಂದರೆಯಾಗದು’ ಎಂದು ಎಸ್‌ಆರ್‌ಇ ಲಿಮಿಟೆಡ್‌ನ ಮುಖ್ಯ ಹಣಕಾಸು ಯೋಜಕ ಕೀರ್ತನ್ ಎ. ಶಾ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.