ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್ ಫಂಡ್: ಕಲಿಯೋಣ ಬನ್ನಿ

Last Updated 11 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

‘ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಲಾರ್ಜ್, ಮಿಡ್, ಸ್ಮಾಲ್ ಮತ್ತು ಮಲ್ಟಿ ಕ್ಯಾಪ್ ಫಂಡ್‌ಗಳು ಅಂತಾರೆ. ಅವೇನು ಅಂತ ಅರ್ಥವೇ ಆಗೋಲ್ಲ. ಹಾಗಾಗಿ ನಾವು ಸ್ಟಾಕ್ ಮಾರ್ಕೆಟ್ ಮತ್ತು ಮ್ಯೂಚುವಲ್ ಫಂಡ್ ಗೋಜಿಗೆ ಹೋಗಲ್ಲ’ ಎಂದು ಹೇಳುವ ಅನೇಕ ಹೂಡಿಕೆದಾರರನ್ನು ನಾವು ನೋಡಿದ್ದೇವೆ. ಆದರೆ, ಈ ಫಂಡ್‌ಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಈ ಮೂರು ಮಾದರಿಯ ಫಂಡ್‌ಗಳನ್ನು ಸರಿಯಾಗಿ ಅರ್ಥೈಸಿಕೊಂಡರೆ ಮ್ಯೂಚುವಲ್ ಫಂಡ್ ಹೂಡಿಕೆ ಸಲೀಸು.

ಏನಿದು ಲಾರ್ಜ್, ಮಿಡ್, ಸ್ಮಾಲ್ ಮತ್ತು ಮಲ್ಟಿ ಕ್ಯಾಪ್? ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಕಂಪನಿಗಳಿರುತ್ತವೆ. ಸಣ್ಣ ಕಂಪನಿಗಳಿಂದ ಹಿಡಿದು ಅಗ್ರಮಾನ್ಯ ಕಂಪನಿಗಳವರೆಗೆ ಹಲವು ಕಂಪನಿಗಳು ಷೇರುಪೇಟೆಯ ಭಾಗವಾಗಿರುತ್ತವೆ. ಈ ರೀತಿಯ ಕಂಪನಿಗಳನ್ನು ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಎಂದು ವಿಂಗಡಿಸಲಾಗುತ್ತದೆ.

ಲಾರ್ಜ್ ಕ್ಯಾಪ್ ಫಂಡ್: ಷೇರು ಮಾರುಕಟ್ಟೆಯಲ್ಲಿನ ಅಗ್ರಮಾನ್ಯ ಕಂಪನಿಗಳನ್ನು ಲಾರ್ಜ್ ಕ್ಯಾಪ್ ಕಂಪನಿಗಳು ಎಂದು ಕರೆಯಲಾಗುತ್ತದೆ. ಈ ಕಂಪನಿಗಳ ಮಾರುಕಟ್ಟೆ ಮೌಲ್ಯ ₹ 20,000 ಕೋಟಿಗೂ ಹೆಚ್ಚಿಗೆ ಇರುತ್ತದೆ. ಲಾರ್ಜ್ ಕ್ಯಾಪ್ ಕಂಪನಿಗಳಲ್ಲಿ ಸ್ಥಿರವಾದ ಆದಾಯ ಬರುವುದರಿಂದ ಇಲ್ಲಿ ಹೂಡಿಕೆ ಮಾಡಿದಾಗ ರಿಸ್ಕ್ ಕಡಿಮೆ. ಕಳೆದ ಐದು ವರ್ಷಗಳ ಲೆಕ್ಕಾಚಾರದಲ್ಲಿ ನೋಡಿದಾಗ ಲಾರ್ಜ್ ಕ್ಯಾಪ್ ಫಂಡ್‌ಗಳು ಶೇ 10ರಿಂದ
ಶೇ 12ರಷ್ಟು ಲಾಭಾಂಶ ನೀಡಿವೆ.

ಮಿಡ್ ಕ್ಯಾಪ್ ಫಂಡ್: ಷೇರು ಮಾರುಕಟ್ಟೆಯಲ್ಲಿನ ಮಧ್ಯಮ ಶ್ರೇಣಿ ಕಂಪನಿಗಳನ್ನು ಮಿಡ್ ಕ್ಯಾಪ್ ಕಂಪನಿಗಳು ಎಂದು ಪರಿಗಣಿಸಲಾಗುತ್ತದೆ. ಈ ಕಂಪನಿಗಳ ಮಾರುಕಟ್ಟೆ ಮೌಲ್ಯ ₹ 5,000 ಕೋಟಿಯಿಂದ ₹ 20,000 ಕೋಟಿವರೆಗೆ ಇರುತ್ತದೆ. ಮಿಡ್ ಕ್ಯಾಪ್ ಕಂಪನಿಗಳಲ್ಲಿ ರಿಸ್ಕ್ ಹೆಚ್ಚಿಗೆ ಇರುತ್ತದೆ. ಆದರೆ ಅತಿ ಹೆಚ್ಚು ಲಾಭ ಗಳಿಸುವ ಅವಕಾಶವೂ ಇದರಲ್ಲಿರುತ್ತದೆ. ಮಿಡ್ ಕ್ಯಾಪ್ ಕಂಪನಿಗಳು ಅಂದರೆ ಬೆಳವಣಿಗೆ ಹಂತದಲ್ಲಿರುವ ಕಂಪನಿಗಳು. ಕಳೆದ ವರ್ಷದ ಲಾಭಾಂಶ ನೋಡಿ ಈ ವರ್ಷ ಅದೇ ಮಿಡ್ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ನಿರ್ಧಾರ ಸರಿಯಲ್ಲ. ಮಿಡ್ ಕ್ಯಾಪ್ ಫಂಡ್‌ಗಳು ಶೇ 10ರಿಂದ ಶೇ 15ರವರೆಗೂ ಲಾಭಾಂಶ ನೀಡಿವೆ.

ಸ್ಮಾಲ್ ಕ್ಯಾಪ್ ಫಂಡ್: ಸಣ್ಣ ಮಟ್ಟದ ಕಂಪನಿಗಳು ಅಂದರೆ ₹ 5,000 ಕೋಟಿಗಿಂತ ಕಡಿಮೆ ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳನ್ನು ಸ್ಮಾಲ್ ಕ್ಯಾಪ್ ಕಂಪನಿಗಳು ಎಂದು ವರ್ಗೀಕರಿಸಲಾಗುತ್ತದೆ. ದೈತ್ಯ ಕಂಪನಿಗಳು ಕೊಡಲು ಸಾಧ್ಯವಾಗದಂತಹ ದೊಡ್ಡ ಮಟ್ಟದ ಲಾಭಾಂಶ ತಂದುಕೊಡಲು ಇವುಗಳಿಂದ ಸಾಧ್ಯ. ಆದರೆ ಹೆಚ್ಚು ರಿಸ್ಕ್ ಇದ್ದೇ ಇರುತ್ತದೆ. ಕಳೆದ ಐದು ವರ್ಷಗಳನ್ನು ಗಣನೆಗೆ ತೆಗೆದುಕೊಂಡು ನೋಡಿದಾಗ ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಶೇ 13ರಿಂದ ಶೇ 15ರವರೆಗೆ ಲಾಭಾಂಶ ಗಳಿಸಲು ಸಾಧ್ಯ.

ಮಲ್ಟಿ ಕ್ಯಾಪ್ ಫಂಡ್: ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಫಂಡ್‌ಗಳ ಮಿಶ್ರಣವೇ ಮಲ್ಟಿ ಕ್ಯಾಪ್ ಫಂಡ್. ಈ ರೀತಿಯ ಹೂಡಿಕೆಯಲ್ಲಿ ವೈವಿಧ್ಯತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಫಂಡ್‌ಗಳಿಗೆ ಹೋಲಿಕೆ ಮಾಡಿ ನೋಡಿದಾಗ ಇಲ್ಲಿ ಹೂಡಿಕೆಯ ರಿಸ್ಕ್ ಬಹಳ ಕಡಿಮೆ ಇರುತ್ತದೆ. ಮಲ್ಟಿ ಕ್ಯಾಪ್ ಫಂಡ್‌ಗಳು ಶೇ 8ರಿಂದ ಶೇ 10ರವರೆಗೆ ಲಾಭಾಂಶ ನೀಡಿರುವ ಉದಾಹರಣೆಗಳಿವೆ.

ಈ ಎಲ್ಲಾ ಫಂಡ್‌ಗಳಲ್ಲಿ ಹೇಗೆ ಹೂಡಿಕೆ ಮಾಡಬಹುದು? ಉದಾಹರಣೆಗೆ, ಮ್ಯೂಚುವಲ್ ಫಂಡ್‌ನಲ್ಲಿ ತಿಂಗಳಿಗೆ ₹ 4 ಸಾವಿರ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ ಎಂದಾದರೆ, ಮಿಡ್ ಕ್ಯಾಪ್‌ನಲ್ಲಿ ₹ 1 ಸಾವಿರ, ಸ್ಮಾಲ್ ಕ್ಯಾಪ್‌ನಲ್ಲಿ ₹ 1 ಸಾವಿರ ಮತ್ತು ಮಲ್ಟಿ ಕ್ಯಾಪ್‌ನಲ್ಲಿ ₹ 2 ಸಾವಿರ ಹೂಡಿಕೆ ಮಾಡಬಹುದು. (ಸೂಚನೆ: ಈ ಉದಾಹರಣೆ ನಿಮ್ಮ ಅಂದಾಜಿಗೆ ಮಾತ್ರ).

ಕೋವಿಡ್ ಪೂರ್ವದ ಸ್ಥಿತಿಗೆ ಸೂಚ್ಯಂಕಗಳು

ಷೇರುಪೇಟೆ ಸೂಚ್ಯಂಕಗಳು ಕೋವಿಡ್ ಪೂರ್ವದ ಸ್ಥಿತಿಗೆ ಮರಳಿವೆ. ಮಾರ್ಚ್ 2020ರಲ್ಲಿ 25,000 ಅಂಶಗಳಿಗೆ ಕುಸಿದಿದ್ದ ಸೆನ್ಸೆಕ್ಸ್ ಅಕ್ಟೋಬರ್ 9ರ ಅಂತ್ಯಕ್ಕೆ 40,509 ಅಂಶಗಳಿಗೆ ಜಿಗಿದಿದೆ. ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 4.7ರಷ್ಟು ಹೆಚ್ಚಳ ದಾಖಲಿಸಿದೆ. 11,914 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ, ಶೇ 4.3ರಷ್ಟು ಜಿಗಿದಿದೆ. ಆದರೆ ಮಿಡ್ ಕ್ಯಾಪ್ ಸೂಚ್ಯಂಕ ಶೇ 0.2ರಷ್ಟು ಕುಸಿದಿದೆ.

ಆರ್‌ಬಿಐ ಪ್ರಕಟಿಸಿದ ಹಣಕಾಸು ನೀತಿಯ ಕಾರಣದಿಂದ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕತೆ ಕಂಡುಬಂದಿದೆ. ವಾರದ ಅವಧಿಯಲ್ಲಿ ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 7.2ರಷ್ಟು ಜಿಗಿದಿದೆ. ಅಕ್ಟೋಬರ್‌
ನಲ್ಲಿ ಒಟ್ಟಾರೆಯಾಗಿ ಬ್ಯಾಂಕ್ ಸೂಚ್ಯಂಕ ಶೇ 11.3ರಷ್ಟು ಹೆಚ್ಚಳ ಕಂಡಿದೆ. ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 4.2ರಷ್ಟು, ನಿಫ್ಟಿ ಐ.ಟಿ. ಸೂಚ್ಯಂಕ ಶೇ 8.6ರಷ್ಟು ಹೆಚ್ಚಳ ದಾಖಲಿಸಿವೆ.

ಗಳಿಕೆ-ಇಳಿಕೆ: ವಿಪ್ರೋ ಶೇ 19.5ರಷ್ಟು, ಟಿಸಿಎಸ್ ಶೇ 11.5ರಷ್ಟು, ಇನ್ಫೊಸಿಸ್ ಶೇ 9ರಷ್ಟು, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 11.4ರಷ್ಟು, ಎಚ್‌ಡಿಎಫ್‌ಸಿ ಲಿ., ಶೇ 9.3ರಷ್ಟು, ಐಸಿಐಸಿಐ ಬ್ಯಾಂಕ್
ಶೇ 8.7ರಷ್ಟು ಜಿಗಿದಿವೆ. ಮಿಡ್ ಕ್ಯಾಪ್‌ನಲ್ಲಿ ಬಂಧನ್ ಬ್ಯಾಂಕ್ ಶೇ 14ರಷ್ಟು, ಮೈಂಡ್ ಟ್ರೀ ಶೇ 14ರಷ್ಟು, ಕ್ಯಾಡಿಲಾ ಶೇ 9.3ರಷ್ಟು ಮತ್ತು ಅಪೋಲೊ ಹಾಸ್ಪಿಟಲ್ಸ್ ಶೇ 9ರಷ್ಟು ಹೆಚ್ಚಳವಾಗಿವೆ.

ಪವರ್ ಗ್ರಿಡ್ ಶೇ 4ರಷ್ಟು, ಬಜಾಜ್ ಫೈನಾನ್ಸ್ ಶೇ 3.5ರಷ್ಟು, ಗೇಲ್ ಶೇ 3ರಷ್ಟು ಕುಸಿದಿವೆ.
ವೇದಾಂತ ಶೇ 11ರಷ್ಟು, ಜೀ ಶೇ 7ರಷ್ಟು, ಟಾಟಾ ಕನ್ಸ್ಯೂಮರ್ ಶೇ 7ರಷ್ಟು ಮತ್ತು ಬಾಷ್ ಶೇ 6ರಷ್ಟು ತಗ್ಗಿವೆ.

ಮುನ್ನೋಟ: ಯುಐಟಿ ಎಎಂಸಿ ಮತ್ತು ಮೆಜಾಗಾನ್ ಡಾಕ್ ಶಿಪ್ ಬಿಲ್ಡರ್ಸ್ ಐಪಿಒ ಷೇರುಗಳು ಷೇರು ಮಾರುಕಟ್ಟೆಗೆ ಸೋಮವಾರ ಸೇರ್ಪಡೆಗೊಳ್ಳಲಿವೆ. ಕೋವಿಡ್ ನಂತರದಲ್ಲಿ ನಕಾರಾತ್ಮಕವಾಗಿದ್ದ ಬ್ಯಾಂಕಿಂಗ್ ಸೂಚ್ಯಂಕ ಸಕಾರಾತ್ಮಕವಾಗಿ ಕಂಡುಬರುತ್ತಿರುವುದು ಆಶಾದಾಯಕವಾಗಿದೆ. ಕೋವಿಡ್ ಲಸಿಕೆ ವಿಚಾರವಾಗಿ ಆಗುವ ಬೆಳವಣಿಗೆಗಳು ಮತ್ತು ಜಾಗತಿಕ ವಿದ್ಯಮಾನಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ. ಅಸ್ಥಿರತೆಯ ನಡುವೆಯೂ ನಿಫ್ಟಿ ದೀಪಾವಳಿಯ ವೇಳೆಗೆ 12,500 ಅಂಶಗಳ ಗುರಿ ತಲುಪುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT