ಮಂಗಳವಾರ, ಸೆಪ್ಟೆಂಬರ್ 24, 2019
28 °C
ಜೀವ ವಿಮೆ: ಆಕರ್ಷಕ ಯೋಜನೆಗೆ ಬಲಿ ಬೀಳದಿರಿ

ಜೀವವಿಮೆ ಆಯ್ಕೆ; ಗೊಂದಲ ಬೇಡ

Published:
Updated:
Prajavani

ಹತ್ತಾರು ಜೀವ ವಿಮೆ ಕಂಪನಿಗಳ ಹಲವಾರು ಪಾಲಿಸಿಗಳಿಂದಾಗಿ ಯಾವ ಕಂಪನಿಯ, ಯಾವ ಪಾಲಿಸಿ ಖರೀದಿಸುವುದು ಹೆಚ್ಚು ಪ್ರಯೋಜನಕರ ಎನ್ನುವ ಗೊಂದಲಗಳಿಗೆ ಇಲ್ಲಿದೆ ಮಾರ್ಗದರ್ಶನ.

***

ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಜೀವವಿಮೆ ಕ್ಷೇತ್ರದ ಚಿತ್ರಣವು ಸಮಗ್ರವಾಗಿ ಬದಲಾಗಿದೆ. 2000ನೇ ಸಾಲಿನಲ್ಲಿ ವಿಮೆ  ಮಾರುಕಟ್ಟೆಯನ್ನು ಮುಕ್ತಗೊಳಿಸಿದ್ದರಿಂದ ಜೀವವಿಮೆ ಉತ್ಪನ್ನಗಳು ಮತ್ತು ವಿತರಣಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳಾಗಿವೆ. ಆಕರ್ಷಕ ಯೋಜನೆಗಳು ಜಾರಿಗೆ ಬರುತ್ತಿವೆ.

ಡಿಜಿಟಲ್‌ ತಂತ್ರಜ್ಞಾನವು ಈ ಕ್ಷೇತ್ರವನ್ನು ಇನ್ನಷ್ಟು ಆಕರ್ಷಕಗೊಳಿಸಿದೆ. ಕೆಲವೇ ನಿಮಿಷಗಳಲ್ಲಿ ಪಾಲಿಸಿಯನ್ನು ಖರೀದಿಸಬಹುದಾದ ವ್ಯವಸ್ಥೆ ರೂಪುಗೊಂಡಿದೆ. ಇವೆಲ್ಲವುಗಳ ಜೊತೆಗೆ ಗ್ರಾಹಕರಿಗೆ ಒಂದು ಸಮಸ್ಯೆಯೂ ಎದುರಾಗಿದೆ. ಸರಳವಾದ ಖರೀದಿ ವಿಧಾನ, ಆಯ್ಕೆಗೆ ನೂರಾರು ಅವಕಾಶಗಳು, ಹತ್ತಾರು ವಿಮಾ ಕಂಪನಿಗಳು ಬಂದಿರುವುದರಿಂದಾಗಿ ಯಾವ ಕಂಪನಿಯಿಂದ, ಯಾವ ಪಾಲಿಸಿಯನ್ನು ಖರೀದಿಸಬೇಕು ಎಂಬ ಗೊಂದಲ ಉಂಟಾಗಿದೆ. ಸ್ನೇಹಿತರು ಮತ್ತು ಸಂಬಂಧಿಗಳು ನೀಡುವ ಸಲಹೆಗಳು ಗ್ರಾಹಕರನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಬಹುದು.

ಇಂಥ ಸಂದರ್ಭದಲ್ಲಿ ‘ಒಂದೇ ಹೊದಿಕೆಯು ಎಲ್ಲರಿಗೂ ಸರಿಹೊಂದುವುದಿಲ್ಲ’ ಎಂಬ ಮಾತನ್ನು ನೆನಪಿಸಿಕೊಂಡು, ಸಾಕಷ್ಟು ಅಧ್ಯಯನ ನಡೆಸಿ ನಮ್ಮ ಅನುಕೂಲಕ್ಕೆ ತಕ್ಕಂತಹ ವಿಮೆಯನ್ನು ಖರೀದಿಸುವುದು ಮುಖ್ಯವಾಗುತ್ತದೆ. ಹಾಗಾದರೆ ವಿಮೆ ಖರೀದಿಸಲು ಮುಂದಾಗುವವರು ಗಮನಿಸಬೇಕಾದ ಅಂಶಗಳೇನು? ಇಲ್ಲಿವೆ ಒಂದಿಷ್ಟು ಸಲಹೆಗಳು...

ಜೀವವಿಮೆ ಎಂದರೆ ದೀರ್ಘಾವಧಿಯ ಹೂಡಿಕೆ. ಪಾಲಿಸಿ ಖರೀದಿಸುವುದಕ್ಕೂ ಮುನ್ನ ಕನಿಷ್ಠ 10 ವರ್ಷಗಳ ಹೂಡಿಕೆಯ ಅವಧಿಯನ್ನು ಆಯ್ದುಕೊಳ್ಳಬೇಕು. ಅಲ್ಲಿ ಚೌಕಾಸಿ ಮಾಡಿದಿರೆಂದರೆ ಆದಾಯಕ್ಕೆ ಕತ್ತರಿ ಹಾಕಿಕೊಂಡಂತೆಯೇ ಸರಿ.

ಹೂಡಿಕೆಗೂ ಮುನ್ನ ಆರ್ಥಿಕ ಭದ್ರತೆಯನ್ನು ದೃಢಪಡಿಸಿಕೊಳ್ಳಿ. ಜೀವನದ ಭದ್ರತೆ, ಆರೋಗ್ಯ ರಕ್ಷಣೆ ಹಾಗೂ ನಿವೃತ್ತಿಯ ನಂತರದ ಜೀವನವನ್ನು ಭದ್ರಪಡಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ. ಸಂಭವನೀಯ ಅಪಾಯಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಇದು ಅಗತ್ಯ.

ನಿಮ್ಮ ಜೀವನದ ಹಂತ, ಅಪಾಯವನ್ನು ಎದುರಿಸಲು ಇರುವ ಸಾಮರ್ಥ್ಯ ಹಾಗೂ ದೀರ್ಘಾವಧಿಯ ಆರ್ಥಿಕ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳಿ. ವಿಮೆಯಲ್ಲಿ ಸಾಂಪ್ರದಾಯಿಕ ಮತ್ತು ಷೇರು ಸೂಚ್ಯಂಕ ಆಧಾರಿತ ಎಂದು ಎರಡು ವಿಧಗಳಿವೆ. ನಿಮ್ಮಲ್ಲಿ ಆರ್ಥಿಕ ಅಪಾಯ ಎದುರಿಸುವ ಸಾಮರ್ಥ್ಯ ಕಡಿಮೆ ಇದ್ದಲ್ಲಿ ಸಾಂಪ್ರದಾಯಿಕ ಪಾಲಿಸಿಯನ್ನು ಆಯ್ಕೆ ಮಾಡಬಹುದು. ನಿಮ್ಮ ಆದಾಯವನ್ನು ಹೆಚ್ಚಿಸಬೇಕೆಂಬ ಆಸೆ ಇದ್ದರೆ ಸ್ವಲ್ಪ ಅಪಾಯವನ್ನು ಎದುರುಹಾಕಿಕೊಂಡು, ಷೇರು ಸೂಚ್ಯಂಕ ಆಧಾರಿತ ವಿಮೆಯಲ್ಲಿ ಹೂಡಿಕೆ ಮಾಡಬಹುದು.

ನಿಮ್ಮ ಸಾಮರ್ಥ್ಯ ಹಾಗೂ ಭವಿಷ್ಯದ ಆರ್ಥಿಕ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ವಿಮೆಯ ಅವಧಿ ಹಾಗೂ ಕಂತಿನ ಬಗ್ಗೆ ತೀರ್ಮಾನ ಕೈಗೊಳ್ಳಿ. ಒಪ್ಪಂದಕ್ಕೆ ಸಹಿ ಮಾಡುವುದಕ್ಕೂ ಮುನ್ನ ಸಂಪೂರ್ಣ ಮಾಹಿತಿ ಹೊಂದುವುದು ಅಗತ್ಯ. ಅನೇಕ ಮಂದಿ ತಮ್ಮ ಸಾಮರ್ಥ್ಯವೇನು ಎಂಬುದನ್ನು ತಿಳಿಯದೆಯೇ, ಕಂತು ಮತ್ತು ಅವಧಿಯನ್ನು ನಿರ್ಧರಿಸುವ ಹೊಣೆಯನ್ನು ಏಜೆಂಟರು ಅಥವಾ ಆರ್ಥಿಕ ಸಲಹೆಗಾರರಿಗೆ ಬಿಟ್ಟುಬಿಡುತ್ತಾರೆ. ಹೀಗೆ ಮಾಡಿದರೆ ಭವಿಷ್ಯದಲ್ಲಿ ಕಂತು ಪಾವತಿಸಲಾಗದ ಸಂದರ್ಭ ಬರಬಹುದು. ಇದರಿಂದಾಗಿ ಆದಾಯಕ್ಕೆ ಕತ್ತರಿ ಬೀಳುವುದಲ್ಲದೆ ಅವಧಿಗೂ ಮುನ್ನ ಹಣವನ್ನು ಪಡೆಯಲಾಗದ ಸ್ಥಿತಿಯೂ ಬರಬಹುದು.

ಗಂಭೀರ ಕಾಯಿಲೆಯ ವಿಮೆ ಮಾಡಿಸುವಾಗ ಕಾಯಿಲೆಯು ಯಾವ ಹಂತದಲ್ಲಿದ್ದರೂ ವಿಮೆ ಅನ್ವಯವಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ‘ಸಂಪೂರ್ಣ ರಕ್ಷಣೆ ನೀಡುತ್ತದೆ’ ಎಂದು ಘೋಷಿಸುವ ಕೆಲವು ವಿಮೆಗಳು, ಗಂಭೀರ ಕಾಯಿಲೆಯು ಪ್ರಾಥಮಿಕ ಹಂತದಲ್ಲಿದ್ದರೆ ಪರಿಹಾರ ನೀಡುವುದಿಲ್ಲ. ಈ ಬಗ್ಗೆ ಎಚ್ಚರವಿರಲಿ.

ನೆನಪಿಡಿ, ಅತ್ಯಂತ ಕಡಿಮೆ ಕಂತು ಬೇಡುವ ವಿಮೆಯು ಅತ್ಯುತ್ತಮ ಆಯ್ಕೆಯಾಗಬೇಕಿಲ್ಲ. ನೀವು ನಿಮ್ಮ ಆರ್ಥಿಕ ಭದ್ರತೆಗಾಗಿ ವಿಮೆಯನ್ನು ಖರೀದಿಸುತ್ತಿದ್ದೀರಿ ಎಂಬುದನ್ನು ಮರೆಯಬೇಡಿ. ಆಕರ್ಷಕವಾಗಿ ಕಾಣುವ ಯೋಜನೆಗಳ ಬಲೆಗೆ ಬೀಳಬೇಡಿ.

ವಿಮೆಯ ಅರ್ಜಿ ತುಂಬುವಾಗ ಆರ್ಥಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ. ಇಲ್ಲಿ ತಪ್ಪು ಮಾಡಿದರೆ, ಮಾಹಿತಿ ಬಚ್ಚಿಟ್ಟರೆ ಪರಿಹಾರ ಪಡೆಯುವ ಸಂದರ್ಭದಲ್ಲಿ ಸಮಸ್ಯೆ ಆಗಬಹುದು.

ಸಹಿ ಮಾಡುವುದಕ್ಕೂ ಮುನ್ನ ವಿಮೆಯನ್ನು ಕುರಿತ ನಿಯಮ– ನಿಬಂಧನೆಗಳನ್ನು ಓದಿ ಅರ್ಥ ಮಾಡಿಕೊಳ್ಳಿ. ಕಂತು ಪಾವತಿಗೆ ಎಲೆಕ್ಟ್ರಾನಿಕ್‌ ಪಾವತಿ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡರೆ ಪಾವತಿಯಲ್ಲಿ ಎರುಪೇರಾಗುವುದನ್ನು ತಪ್ಪಿಸಬಹುದು. ಕೆಲವು ಕಂಪನಿಗಳು ಪಾವತಿಗಾಗಿ ತಮ್ಮದೇ ಆದ ಆ್ಯಪ್‌ ಅಭಿವೃದ್ಧಿಪಡಿಸಿವೆ.

ಪ್ರತಿ ವಿಮಾ ಪಾಲಿಸಿಗೂ 15 ದಿನಗಳ ‘ಫ್ರೀಲುಕ್‌’ ಅವಧಿ ಇರುತ್ತದೆ. ವಿಮಾ ಪಾಲಿಸಿ ಖದೀದಿಸಿದ  ಬಳಿಕ ಕಂಪನಿಯವರು ನಿಮಗೆ ‘ಪಾಲಿಸಿಯ ವೈಶಿಷ್ಟ್ಯಗಳ ದಾಖಲೆ’ಯನ್ನು (ಕೆಎಫ್‌ಡಿ) ನೀಡುತ್ತಾರೆ. ಅದನ್ನು ವಿವರವಾಗಿ ಓದಿ. ನೀವು ಖರೀದಿಸಿರುವ ಉತ್ಪನ್ನವು ನಿಮ್ಮ ನಿರೀಕ್ಷೆಯಂತೆ ಇಲ್ಲ ಎಂದಾದರೆ 15 ದಿನಗಳೊಳಗೆ ಅದನ್ನು ರದ್ದುಪಡಿಸಿ ಹಣವನ್ನು ವಾಪಸ್‌ ಪಡೆಯಲು ಅವಕಾಶ ಇರುತ್ತದೆ.

ಪಾಲಿಸಿಯಲ್ಲಿ ನಾಮನಿರ್ದೇಶನ ಮಾಡುವುದನ್ನು ಮರೆಯಬೇಡಿ. ಪಾಲಿಸಿದಾರರಿಗೆ ಯಾವುದೇ ಅವಘಡ ಸಂಭವಿಸಿದರೆ ಪರಿಹಾರವು ನಾಮನಿರ್ದೇಶಿತ ವ್ಯಕ್ತಿಗೆ ಲಭಿಸುತ್ತದೆ. ನೀವು ಯಾರ ಹೆಸರನ್ನು ನಮೂದಿಸಿರುವಿರೋ ಅವರಿಗೂ ವಿಮಾ ಪಾಲಿಸಿಯ ಬಗ್ಗೆ ಮಾಹಿತಿ ನೀಡಿ.

ನಿಮ್ಮ ಪಾಲಿಸಿಯ ಪ್ರತಿಯನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಸಂಗ್ರಹಿಸಿಡಿ. ಇದರಿಂದ ಒಪ್ಪಂದದ ಪ್ರತಿಯು ದೀರ್ಘಕಾಲದವರೆಗೂ ಹಾಳಾಗದಂತೆ ಉಳಿಯುತ್ತದೆ.

ಜೀವ ವಿಮೆ ಎಂದರೆ ಗಂಭೀರವಾದ ಹೂಡಿಕೆ. ವಿಮೆ ಮಾಡಿಸುವುದಕ್ಕೂ ಮುನ್ನ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟರೆ ಪಾಲಿಸಿಯ ಗರಿಷ್ಠ ಲಾಭ ಪಡೆಯಲು ಸಾಧ್ಯ.

ಕಿವಿಮಾತು

1. ದೀರ್ಘಾವಧಿ ಹೂಡಿಕೆಗೆ ಚೌಕಾಸಿ ಮಾಡಬೇಡಿ

2. ಪಾಲಿಸಿ ಖರೀದಿ ಮುನ್ನ ಆರ್ಥಿಕ ಭದ್ರತೆ ದೃಢಪಡಿಸಿಕೊಳ್ಳಿ

3.  ಸೂಕ್ತ ವಿಮೆ ಉತ್ಪನ್ನ ಆಯ್ಕೆ ಮಾಡಿಕೊಳ್ಳಲು ಗಮನ ನೀಡಿ

4.  ಹೆಚ್ಚಿನ ನೆಮ್ಮದಿಗೆ ಸಾಂಪ್ರದಾಯಿಕ ಪಾಲಿಸಿ ಖರೀದಿಸಿ

5.  ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶ ಇದ್ದರೆ, ನಷ್ಟ ಎದುರಿಸುವ ಮನಸ್ಥಿತಿ ನಿಮ್ಮಲ್ಲಿ ಇದ್ದರೆ ಷೇರು ಸೂಚ್ಯಂಕ ಆಧಾರಿತ ವಿಮೆಯಲ್ಲಿ ಹಣ ತೊಡಗಿಸಿ

6.  ನಿಮ್ಮ ಹಣಕಾಸಿನ ಪರಿಸ್ಥಿತಿ ಮತ್ತು ಭವಿಷ್ಯದ ಗುರಿ ಗಮನದಲ್ಲಿ ಇರಲಿ

7.  ಆರ್ಥಿಕ ಭದ್ರತೆಯೇ  ವಿಮೆ ಖರೀದಿಯ ಮುಖ್ಯ ಉದ್ದೇಶ ಎನ್ನುವುದನ್ನು ಮರೆಯಬೇಡಿ

8.  ನಿಯಮಗಳನ್ನು ವಿವರವಾಗಿ ಅರ್ಥೈಸಿಕೊಂಡು ಪಾಲಿಸಿಗಳಿಗೆ ಸಹಿ ಹಾಕಿ

9.  ಫ್ರೀಲುಕ್‌ ಅವಧಿಯಲ್ಲಿ (15 ದಿನ) ಪಾಲಿಸಿ ರದ್ದಿಗೆ ಅವಕಾಶ ಇರಲಿದೆ

10. ಪಾಲಿಸಿ ಪ್ರತಿಯನ್ನು ಎಲೆಕ್ಟ್ರಾನಿಕ್‌ ಪ್ರತಿಯಲ್ಲಿ ಸಂಗ್ರಹಿಸಿ ಇಡಿ

(ಲೇಖಕ; ಎಚ್‌ಡಿಎಫ್‌ಸಿ ಲೈಫ್‌ ಸಿಇಒ)

Post Comments (+)