ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವಿಮೆ ಹೆಚ್ಚಿದ ಸುರಕ್ಷೆ

Last Updated 28 ಜನವರಿ 2020, 19:30 IST
ಅಕ್ಷರ ಗಾತ್ರ

ಭಾರತೀಯ ಜೀವವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ರೂಪಿಸಿರುವ ಹೊಸ ನಿಯಮಗಳು ಜೀವ ವಿಮೆ ಕ್ಷೇತ್ರದಲ್ಲಿ ಉತ್ಸಾಹ ಮೂಡಿಸಿವೆ. ಗ್ರಾಹಕರು ದೀರ್ಘಕಾಲದಿಂದ ನಿರೀಕ್ಷಿಸುತ್ತಿದ್ದ ಹೆಚ್ಚಿನ ಭರವಸೆ ಮತ್ತು ಸುರಕ್ಷತೆಗಳನ್ನು ನೀಡುವಲ್ಲಿ ಹೊಸ ನಿಯಮಾವಳಿಗಳು ನೆರವಾಗಿರುವುದನ್ನು ಇಲ್ಲಿ ವಿವರಿಸಲಾಗಿದೆ.

ಭಾರತೀಯ ಜೀವವಿಮೆ ಕ್ಷೇತ್ರಕ್ಕೆ 2019 ಗಮನಾರ್ಹ ವರ್ಷವಾಗಿತ್ತು. ಕೆಲ ಪ್ರತಿಕೂಲ ವಿದ್ಯಮಾನಗಳ ಹೊರತಾಗಿಯೂ ಉತ್ತಮ ಬೆಳವಣಿಗೆ ದಾಖಲಿಸಿದೆ. ಭಾರತೀಯ ಜೀವವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಕೆಲವು ಹೊಸ ನಿಯಮಾವಳಿಗಳನ್ನು ರೂಪಿಸುವ ಮೂಲಕ ಈ ಕ್ಷೇತ್ರಕ್ಕೆ ಉತ್ಸಾಹವನ್ನು ತುಂಬಿದೆ. ದೀರ್ಘಕಾಲದಿಂದ ಗ್ರಾಹಕರು ನಿರೀಕ್ಷಿಸುತ್ತಿದ್ದ ಹೆಚ್ಚಿನ ಭರವಸೆ ಮತ್ತು ಸುರಕ್ಷತೆಗಳನ್ನು ನೀಡುವಲ್ಲಿ ಹೊಸ ನಿಯಮಾವಳಿಗಳು ನೆರವಾಗಿವೆ.

ವಿಮೆಯ ಪುನರುಜ್ಜೀವನ ಅವಧಿ ವಿಸ್ತರಣೆ, ವಿಮೆದಾರನು ಪಾಲಿಸಿ ಜಾರಿಯಲ್ಲಿ ಇರುವ ಅವಧಿಯಲ್ಲಿ ಮೃತಪಟ್ಟ ಸಂದರ್ಭದಲ್ಲಿ ನೀಡುವ ಪರಿಹಾರ ಮೊತ್ತ, ಖಾತರಿ ಸರೆಂಡರ್‌ ವ್ಯಾಲ್ಯು ಹೆಚ್ಚಳ ಮಾಡಲಾಗಿದೆ. ಅಂದರೆ ಪಾಲಿಸಿದಾರನು ಪಾಲಿಸಿ ಪರಿಪಕ್ವಗೊಳ್ಳುವ ಅವಧಿಗೆ ಮುಂಚೆಯೇ ಪಾಲಿಸಿ ರದ್ದುಪಡಿಸಿದರೆ ಆತನಿಗೆ ನೀಡಲಾಗುವ ಖಾತರಿ ಮೊತ್ತ. ಪಿಂಚಣಿ ಹಾಗೂ ನಿವೃತ್ತಿ ಯೋಜನೆಗಳಲ್ಲೂ ಕೆಲ ದಿಟ್ಟ ಹೆಜ್ಜೆಗಳನ್ನಿಡಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಮಾನವಾದ ಯೋಜನೆಗಳು ರೂಪುಗೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನಿವೃತ್ತಿ ಯೋಜನೆಗಳು ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸಲಿವೆ. ದೇಶದಲ್ಲಿ ಜನರ ಜೀವಿತಾವಧಿಯು ಹೆಚ್ಚಾಗುತ್ತಿದೆ. ಅತಿ ಹೆಚ್ಚು ಹಿರಿಯ ನಾಗರಿಕರನ್ನು ಹೊಂದಿದ ರಾಷ್ಟ್ರ ಎನಿಸುವ ನಿಟ್ಟಿನಲ್ಲಿ ಭಾರತವು ದಾಪುಗಾಲಿಡುತ್ತಿದೆ. ಮುಂದಿನ ದಿನಗಳಲ್ಲಿ ಜೀವವಿಮೆ ಕ್ಷೇತ್ರದ ವ್ಯಾಪ್ತಿಯು ಇನ್ನಷ್ಟು ವಿಸ್ತಾರಗೊಳ್ಳಲಿದೆ. ಪಿಂಚಣಿ ಯೋಜನೆಗಳಲ್ಲಿ ಆಗಿರುವ ಪ್ರಗತಿಪರ ಬದಲಾವಣೆಗಳು ಹಿರಿಯ ನಾಗರಿಕರ ಬದುಕಿಗೆ ಇನ್ನಷ್ಟು ಬಣ್ಣಗಳನ್ನು ತುಂಬಲಿವೆ.

ಜೀವವಿಮೆ ಕ್ಷೇತ್ರದಲ್ಲಿ ಒಟ್ಟಾರೆ ಬದಲಾವಣೆಗಳನ್ನು ತರುವ ಉದ್ದೇಶದಿಂದ ಈ ಕ್ಷೇತ್ರದ ಎಲ್ಲಾ ಕಂಪನಿಗಳು 2019ರಲ್ಲಿ ಕೈಜೋಡಿಸಿದ್ದವು. ಜೀವವಿಮೆ ಮಂಡಳಿ ನಡೆಸಿದ ‘ಎಲ್ಲಕ್ಕೂ ಮುನ್ನ ಜೀವವಿಮೆ’ (ಸಬ್‌ಸೆ ಪೆಹಲೆ ಲೈಫ್‌ ಇನ್ಶುರೆನ್ಸ್‌) ಪ್ರಚಾರಾಂದೋಲನವು ಜೀವವಿಮೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಗಮನಾರ್ಹ ಸಾಧನೆ ಮಾಡಿತು. ನಿಯಮಾವಳಿಗಳಲ್ಲಿ ‘ಐಆರ್‌ಡಿಎಐ‘ ಮಾಡಿರುವ ಬದಲಾವಣೆಯಿಂದಾಗಿ ಉದ್ದಿಮೆಯು ಇನ್ನಷ್ಟು ಗಟ್ಟಿಗೊಂಡಿದ್ದು, 2020ರಲ್ಲಿ ಗ್ರಾಹಕ ಪರವಾದ ಇನ್ನಷ್ಟು ಸೇವಾ ಸೌಲಭ್ಯ ರೂಪಿಸಲಿದೆ.

ಈ ಕ್ಷೇತ್ರಕ್ಕೆ 2019 ತಂತ್ರಜ್ಞಾನದ ವರ್ಷವೂ ಆಗಿತ್ತು. ಗ್ರಾಹಕರಿಗೆ ತಂತ್ರಜ್ಞಾನ ಆಧಾರಿತ ಸೇವೆ ಸಂಸ್ಥೆಗಳು ಕೈಜೋಡಿಸಿದ್ದವು. ಮುಂಬರುವ ವರ್ಷಗಳಲ್ಲಿ ಗ್ರಾಹಕರಿಗೆ ವರ್ಷಪೂರ್ತಿ, ದಿನದ 24 ಗಂಟೆಯೂ ಡಿಜಿಟಲ್‌ ಸೇವೆಗಳು ಲಭ್ಯವಾಗಲಿವೆ. ಧ್ವನಿ ಮತ್ತು ಲಿಖಿತ ರೂಪದಲ್ಲಿ ಮಾಹಿತಿ ನೀಡುವ ವ್ಯವಸ್ಥೆ, ಬೇಕಾದಾಗ ಸೇವೆ ಪಡೆಯಬಹುದಾದ ವೆಬ್‌ ಮಾದರಿಗಳು ಜಾರಿಗೆ ಬರಲಿವೆ. ಇವು ಪಾಲಿಸಿದಾರರಿಗೆ ಹೊಸ ಅನುಭವಗಳನ್ನು ನೀಡಲಿವೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವ ಸಮುದಾಯ ಹೊಂದಿದೆ. ದೇಶದ ಶೇ 60ರಷ್ಟು ಜನರು ಉದ್ಯೋಗಸ್ಥ ವಯಸ್ಸಿನಲ್ಲಿರುತ್ತಾರೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತಕ್ಕೆ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ. ಇಂಥ ಸಂದರ್ಭದಲ್ಲಿ, ಗ್ರಾಹಕರ ಬೇಡಿಕೆ ಅರ್ಥ ಮಾಡಿಕೊಳ್ಳುವುದು ಮತ್ತು ಡಿಜಿಟಲೀಕರಣವು ಗ್ರಾಹಕರ ಹಿತವನ್ನು ರಕ್ಷಿಸಲು ಸಹಕಾರಿಯಾಗಲಿದೆ. ಡಿಜಿಟಲ್‌ ಸಂವಹನ ಹೆಚ್ಚಿಸಿರುವುದರಿಂದ ವಿಮೆ ಉತ್ಪನ್ನಗಳ ಮಾರಾಟವು ಹೆಚ್ಚು ಲಾಭದಾಯಕವಾಗಿ ಪರಿಣಮಿಸಲಿದೆ. ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, ಸ್ವಯಂಚಾಲಿತ ವ್ಯವಸ್ಥೆ ಹಾಗೂ ದತ್ತಾಂಶಗಳ ಪ್ರವೇಶವಾದರೆ, ಮಾರಾಟ ಜಾಲವನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಲು ಸಾಧ್ಯವಾಗಲಿದೆ. ಅದು ಉತ್ಪನ್ನಗಳ ಮಾರಾಟ ಹೆಚ್ಚಳಕ್ಕೂ ಸಹಕಾರಿಯಾಗುವುದು.

ಹೊಸದಾಗಿ ವಿನ್ಯಾಸಗೊಂಡ ಉತ್ಪನ್ನಗಳು, ಡಿಜಿಟಲೀಕರಣದತ್ತ ಹೆಚ್ಚಿನ ಒತ್ತು ನೀಡುವುದು, ಜೀವವಿಮೆಗಳ ಬಗ್ಗೆ ಜಾಗೃತಿ ಮೂಡಿಸಿರುವುದೇ ಮುಂತಾದ ಕ್ರಮಗಳು ಹೊಸ ವರ್ಷದಲ್ಲಿ ಈ ಕ್ಷೇತ್ರಕ್ಕೆ ಇನ್ನಷ್ಟು ಉತ್ಸಾಹ ತುಂಬಲಿವೆ. ಈ ಕ್ರಮಗಳಿಗೆ ಅನುಸಾರವಾಗಿ ಅಂತಿಮ ಹಂತದ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡುವ ರೀತಿಯಲ್ಲಿ ಉತ್ಪನ್ನಗಳ ವಿನ್ಯಾಸ, ಗ್ರಾಹಕ ಸೇವೆಗಳಲ್ಲೂ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ.

2020ರಲ್ಲಿ ಹೊಸ ತಲೆಮಾರಿನ ಬಹುದೊಡ್ಡ ಸಮುದಾಯವನ್ನು ತಲುಪುವ ಗುರಿಯನ್ನು ವಿಮೆ ಉದ್ಯಮ ಹೊಂದಬೇಕಾಗಿದೆ. ಈ ತಲೆಮಾರಿನ ಗ್ರಾಹಕರು ಸಮಗ್ರ ಮಾಹಿತಿ ಪಡೆದೇ ಮುಂದಡಿ ಇಡುತ್ತಾರೆ. ಆದ್ದರಿಂದ ಹೆಚ್ಚಿನ ದಕ್ಷತೆ ಹಾಗೂ ಉತ್ಪಾದಕತೆಯನ್ನು ಖಾತರಿಪಡಿಸುವ ಮತ್ತು ಹೆಚ್ಚಿನ ಗಳಿಕೆಯನ್ನು ತಂದುಕೊಡಬಲ್ಲ ವಿಮೆ ಯೋಜನೆಗಳನ್ನು ರೂಪಿಸುವುದು ಅಗತ್ಯವಾಗಿದೆ. ಜತೆಗೆ ವಿಮೆ ಉತ್ಪನ್ನಗಳ ಮಾರಾಟಗಾರರಿಗೂ ಇದನ್ನು ಲಾಭದಾಯಕ ವೃತ್ತಿಯಾಗಿಸಬೇಕು. ಇಂಥ ಮಾರಾಟಗಾರರು ಡಿಜಿಟಲ್‌ ಜ್ಞಾನಹದುವುದರ ಜತೆಗೆ, ಬರಿಯ ವಿಮೆ ಮಾರಾಟಗಾರರಾಗಿ ಉಳಿಯದೆ ಗ್ರಾಹಕರಿಗೆ ವಿಶ್ವಾಸಾರ್ಹ ಆರ್ಥಿಕ ಸಲಹೆಗಾರರಾಗಿಯೂ ರೂಪುಗೊಳ್ಳಬೇಕಾಗುತ್ತದೆ. ಅಭಿವೃದ್ಧಿಯ ಹೆಚ್ಚಿನ ಸಾಧ್ಯತೆಗಳನ್ನು ಅರ್ಥ ಮಾಡಿಕೊಂಡು, ಜೀವವಿಮೆ ಉದ್ದಿಮೆಯು ಕೊನೆಯ ಹಂತದ ಗ್ರಾಹಕನಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕ ಹೆಜ್ಜೆಗಳನ್ನಿಡಬೇಕು. ಆ ಮೂಲಕ ಜೀವವಿಮೆಯ ಉದ್ದೇಶ ಮತ್ತು ಅಗತ್ಯವನ್ನು ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಬೇಕಾಗಿದೆ.

(ಲೇಖಕ: ಮ್ಯಾಕ್ಸ್‌ ಲೈಫ್‌ ಇನ್ಶುರೆನ್ಸ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT