ಶನಿವಾರ, ಜುಲೈ 24, 2021
22 °C

ಲಾಕ್‌ಡೌನ್‌: ಎಫ್‌ಎಂಸಿಜಿ ಕಂಪನಿಗಳಿಗೆ ಸಮಸ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಆಗಾಗ ಮತ್ತು ಅಲ್ಲಲ್ಲಿ ಲಾಕ್‌ಡೌನ್‌ ಜಾರಿಗೆ ತರುತ್ತಿರುವುದರ ಪರಿಣಾಮವಾಗಿ ಎಫ್‌ಎಂಸಿಜಿ ಉತ್ಪನ್ನಗಳ (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳು) ಮಾರಾಟದಲ್ಲಿ ಜುಲೈ ತಿಂಗಳಿನಲ್ಲಿ ಸ್ಥಿರತೆ ಕಾಯ್ದುಕೊಳ್ಳಬಹುದು ಎಂಬ ವಿಶ್ವಾಸ ಕಂಪನಿಗಳಲ್ಲಿ ಕಾಣುತ್ತಿಲ್ಲ. ಎಫ್‌ಎಂಸಿಜಿ ವಸ್ತುಗಳ ಮಾರಾಟ ಪ್ರಮಾಣವು ಜೂನ್ ತಿಂಗಳಿನಲ್ಲಿ ಕೋವಿಡ್ ಪೂರ್ವದ ಹಂತ ತಲುಪುವತ್ತ ಹೆಜ್ಜೆ ಹಾಕಿತ್ತು.

ಎಫ್‌ಎಂಸಿಜಿ ಉತ್ಪನ್ನಗಳ ತಯಾರಿಕಾ ಕೇಂದ್ರಗಳು ಇರುವ ಕೆಲವೆಡೆ ಕಾರ್ಮಿಕರ ಓಡಾಟಕ್ಕೆ ನಿರ್ಬಂಧ ಎದುರಾಗಿದೆ, ಕೆಲವೆಡೆ ಮಾರಾಟಗಾರರು ಲಾಕ್‌ಡೌನ್ ‌ವ್ಯಾಪ್ತಿಗೆ ಬಂದಿದ್ದಾರೆ. ಇವು ಜುಲೈ ತಿಂಗಳಲ್ಲಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಲಿವೆ ಎಂಬುದು ಕಂಪನಿಗಳ ಅಂದಾಜು.

‘ಇದು ಬಹಳ ಸೂಕ್ಷ್ಮ ಪರಿಸ್ಥಿತಿ. ಉತ್ಪನ್ನಗಳ ಪೂರೈಕೆ ವ್ಯವಸ್ಥೆಯಲ್ಲಿ ಕಂಡುಕೊಳ್ಳಲು ಸಾಧ್ಯವಾಗಿದ್ದ ಲಯವನ್ನು ಅಲ್ಲಲ್ಲಿ ಜಾರಿಗೆ ಬರುತ್ತಿರುವ ಲಾಕ್‌ಡೌನ್‌ಗಳು ಕೆಡಿಸುತ್ತಿವೆ’ ಎಂದು ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್‌ ಲಿಮಿಟೆಡ್‌ನ (ಜಿಸಿಪಿಎಲ್‌) ಮುಖ್ಯ ಕಾರ್ಯನಿರ್ವಾಹಕ ಸುನೀಲ್ ಕಟಾರಿಯಾ ಹೇಳಿದರು.

‘ಈಗ ಜಾರಿಯಾಗುತ್ತಿರುವುದು ಏಕರೂಪಿ ಲಾಕ್‌ಡೌನ್‌ ಅಲ್ಲ. ಹಿಂದೆ ಜಾರಿಯಾಗಿದ್ದ ಲಾಕ್‌ಡೌನ್‌ ಇಡೀ ದೇಶಕ್ಕೆ ಅನ್ವಯವಾಗುತ್ತಿತ್ತು. ಆದರೆ, ಈಗಿನ ಲಾಕ್‌ಡೌನ್‌ಗಳು ಆಯ್ದ ಸ್ಥಳಗಳಲ್ಲಿ ಮಾತ್ರ ಜಾರಿಯಾಗುತ್ತಿವೆ. ಯಾವ ಕಡೆ ಲಾಕ್‌ಡೌನ್‌ ಆಗುತ್ತದೆ, ಯಾವ ಘಟಕದ ಮೇಲೆ ಇದರ ಪರಿಣಾಮ ಉಂಟಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಅನಿಶ್ಚಿತತೆಯು ಹೆಚ್ಚಾಗಿದೆ’ ಎಂದು ಕಟಾರಿಯಾ ಹೇಳಿದರು.

ಹೊಸದಾಗಿ ಜಾರಿಯಾಗುತ್ತಿರುವ ಲಾಕ್‌ಡೌನ್‌ಗಳಿಂದಾಗಿ ಉತ್ಪಾದನೆ ಹಾಗೂ ಪೂರೈಕೆ ವ್ಯವಸ್ಥೆಯಲ್ಲಿ ಅಡಚಣೆ ಸೃಷ್ಟಿಯಾಗಲಿದೆ ಎಂದು ಐಟಿಸಿ ಕಂಪನಿ ಕೂಡ ಅಂದಾಜಿಸಿದೆ. ‘ಸಾಂಕ್ರಾಮಿಕ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಬೇಕು. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಘೋಷಣೆಯಾಗಿರುವ ಲಾಕ್‌ಡೌನ್‌ನಿಂದಾಗಿ ಉತ್ಪಾದನೆ ಹಾಗೂ ಪೂರೈಕೆ ವ್ಯವಸ್ಥೆಯ ಮೇಲೆ ಸ್ಥಳೀಯ ಮಟ್ಟದಲ್ಲಿ ತೊಂದರೆ ಆಗಬಹುದು’ ಎಂದು ಐಟಿಸಿ ವಕ್ತಾರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಎಫ್‌ಎಂಸಿಜಿ ಕಂಪನಿಗಳು ತಮ್ಮ ಪೂರೈಕೆ ವ್ಯವಸ್ಥೆಯನ್ನು ಪುನಃ ಕಟ್ಟಿಕೊಳ್ಳುವ ಕೆಲಸವನ್ನು ಮೇ ತಿಂಗಳಲ್ಲಿ ಮಾಡಿದ್ದವು. ಮಾರುಕಟ್ಟೆಗಳು ತೆರೆದುಕೊಂಡಂತೆ ಉತ್ಪಾದನೆ ಹೆಚ್ಚಿಸಿದ್ದವು. ಇದರಿಂದಾಗಿ, ವಸ್ತುಗಳ ಮಾರಾಟವು ಜೂನ್‌ ತಿಂಗಳಿನಲ್ಲಿ ವೇಗ ಪಡೆದುಕೊಂಡಿತ್ತು. ‘ಆದರೆ ಈಗ, ಇದ್ದಕ್ಕಿದ್ದಂತೆ ಎರಡನೆಯ ಸುತ್ತಿನ ಲಾಕ್‌ಡೌನ್‌ ನಮಗೆ ಎದುರಾಗಿದೆ. ಇದು ಖಂಡಿತ ಸಮಸ್ಯೆ ಸೃಷ್ಟಿಸುತ್ತದೆ. ಈ ರೀತಿ ಆಗದಿರಲಿ ಎಂದು ನಾವು ಆಶಿಸಿದ್ದೆವು’ ಎಂದು ಕಟಾರಿಯಾ ಹೇಳಿದರು.

‘ಕಂಪನಿಯ ಜುಲೈ ತಿಂಗಳ ಉತ್ಪಾದನೆಯ ಮೇಲೆ ಪರಿಣಾಮ ಉಂಟಾಗಲಿದೆಯೇ’ ಎಂದು ಪ್ರಶ್ನಿಸಿದಾಗ, ‘ಜೂನ್‌ ಅಂತ್ಯದ ವೇಳೆಗೆ ನಾವು ಶೇಕಡ 85ರಿಂದ ಶೇಕಡ 90ರಷ್ಟು ಉತ್ಪಾದನೆ ಮಾಡುತ್ತಿದ್ದೆವು. ಆದರೆ, ಬೇರೆ ಬೇರೆ ಕಡೆ ಲಾಕ್‌ಡೌನ್‌ ಜಾರಿಗೆ ಬರುತ್ತಿರುವ ಕಾರಣ ಜುಲೈ ತಿಂಗಳ ಸ್ಥಿತಿ ಬೇರೆಯದೇ ಆಗಿರಲಿದೆ’ ಎಂದು ಉತ್ತರಿಸಿದರು.

ದೇಶದಲ್ಲಿ ಕೋವಿಡ್–19 ಪ್ರಕರಣಗಳು ಕಡಿಮೆ ಆಗುವವರೆಗೂ ಅಲ್ಲಲ್ಲಿ ಹಾಗೂ ಆಗಾಗ ಲಾಕ್‌ಡೌನ್‌ ಜಾರಿಗೆ ಬರುವ ಸಾಧ್ಯತೆ ಇದೆ. ಹಾಗಾಗಿ, ಎಫ್‌ಎಂಸಿಜಿ ಕಂಪನಿಗಳು ಇದನ್ನು ನಿಭಾಯಿಸಲು ಸಿದ್ಧವಿರಬೇಕು ಎಂದು ಉದ್ಯಮದ ತಜ್ಞರು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು