ಮಂಗಳವಾರ, ನವೆಂಬರ್ 12, 2019
28 °C

ತಯಾರಿಕಾ ವಲಯದ ಮಂದ ಪ್ರಗತಿ

Published:
Updated:

ನವದೆಹಲಿ : ದೇಶದಲ್ಲಿ ತಯಾರಿಕೆ ಚಟುವಟಿಕೆಗಳು ಕುಂಠಿತಗೊಂಡಿದ್ದು, ಅಕ್ಟೋಬರ್‌ ತಿಂಗಳಲ್ಲಿ ಕಾರ್ಖಾನೆಗಳಿಗೆ ಸಲ್ಲಿಕೆಯಾದ ಸರಕುಗಳ ಬೇಡಿಕೆ ಮತ್ತು ತಯಾರಿಕೆ ಪ್ರಮಾಣವು ಎರಡು ವರ್ಷಗಳಲ್ಲಿಯೇ ಕಡಿಮೆ ಮಟ್ಟದಲ್ಲಿ ದಾಖಲಾಗಿದೆ.

ಮರ್ಕಿಟ್‌ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ), ಸೆ‍ಪ್ಟೆಂಬರ್‌ನಲ್ಲಿನ 51.4 ರಿಂದ ಅಕ್ಟೋಬರ್‌ನಲ್ಲಿ 50.6ಕ್ಕೆ ಇಳಿದಿದೆ.

ತಯಾರಿಕಾ ವಲಯದಲ್ಲಿನ ಬೆಳವಣಿಗೆಯು ಅಲ್ಪಮಟ್ಟಿಗಿನ ಸುಧಾರಣೆ ಕಂಡಿರುವುದನ್ನು ಇದು ಸೂಚಿಸುತ್ತದೆ. 50ಕ್ಕಿಂತ ಹೆಚ್ಚಿಗೆ ಇದ್ದರೆ ಬೆಳವಣಿಗೆ ಮತ್ತು ಅದಕ್ಕಿಂತ ಕಡಿಮೆ ಇದ್ದರೆ ಪ್ರಗತಿ ಕುಸಿತ ಎಂದು ಪರಿಗಣಿಸಲಾಗುತ್ತಿದೆ.

ಐಎಚ್‌ಎಸ್‌ ಮರ್ಕಿಟ್‌ ಸಮೀಕ್ಷೆ ಪ್ರಕಾರ, ತಯಾರಿಕಾ ವಲಯದಲ್ಲಿನ ಕಾರ್ಖಾನೆಗಳಿಗೆ ಸಲ್ಲಿಕೆಯಾದ ಸರಕುಗಳ ಬೇಡಿಕೆ ಮತ್ತು ತಯಾರಿಕೆ ಪ್ರಮಾಣವು ಕಡಿಮೆ ಇದೆ. ಇದರಿಂದಾಗಿ ಹೊಸ ಉದ್ಯೋಗ ಅವಕಾಶಗಳ ಸೃಷ್ಟಿಯು 6 ತಿಂಗಳ ಮಟ್ಟಕ್ಕೆ ಇಳಿದಿದೆ. ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ದಾಸ್ತಾನು ಇಟ್ಟುಕೊಳ್ಳಲು ಹಿಂದೇಟು ಹಾಕುತ್ತಿವೆ. ಇದೇ ಕಾರಣಕ್ಕೆ ಕಚ್ಚಾ ಸರಕು ಖರೀದಿ ಪ್ರಮಾಣವನ್ನೂ ತಗ್ಗಿಸಿವೆ.

ಬೇಡಿಕೆ ಪ್ರಮಾಣ ತಗ್ಗಿರುವುದರಿಂದ ಸರಕುಗಳನ್ನು ತಯಾರಿಸುವ ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಕಂಡು ಬರುತ್ತಿದೆ. ಇದರಿಂದ ತಯಾರಿಕೆ ಕುಂಠಿತಗೊಳ್ಳುತ್ತದೆ. ಹೊಸ ಉದ್ಯೋಗ ಸೃಷ್ಟಿ ಕಡಿಮೆಯಾಗುತ್ತವೆ. ವಹಿವಾಟು ವಿಸ್ತರಣೆಯ ಅವಕಾಶಗಳೂ ಕಡಿಮೆಯಾಗುತ್ತವೆ.

ಪ್ರತಿಕ್ರಿಯಿಸಿ (+)