ಸತತ 8ನೇ ವಹಿವಾಟು ಅವಧಿಯಲ್ಲೂ ನಕಾರಾತ್ಮಕ ವಹಿವಾಟು: ಷೇರುಪೇಟೆಯಲ್ಲಿ ಕರಡಿ ಕುಣಿತ

ಶನಿವಾರ, ಮೇ 25, 2019
28 °C

ಸತತ 8ನೇ ವಹಿವಾಟು ಅವಧಿಯಲ್ಲೂ ನಕಾರಾತ್ಮಕ ವಹಿವಾಟು: ಷೇರುಪೇಟೆಯಲ್ಲಿ ಕರಡಿ ಕುಣಿತ

Published:
Updated:
Prajavani

ಮುಂಬೈ: ವಿದೇಶಿ ಬಂಡವಾಳ ಹೊರಹರಿವು, ಜಾಗತಿಕ ವಾಣಿಜ್ಯ ಸಮರದಿಂದಾಗಿ ದೇಶದ ಷೇರುಪೇಟೆಗಳಲ್ಲಿ ನಕಾರತ್ಮಕ ವಹಿವಾಟು ನಡೆಯಿತು.

ಸತತ 8ನೇ ವಹಿವಾಟು ಅವಧಿಯಲ್ಲಿಯೂ ಸೂಚ್ಯಂಕಗಳು ಇಳಿಕೆ ಕಂಡವು. ಫೆಬ್ರುವರಿ ನಂತರ ಸೂಚ್ಯಂಕಗಳ ಅಂತ್ಯಂತ ದೀರ್ಘ ಅವಧಿಯ ನಕಾರಾತ್ಮಕ ಚಲನೆ ಇದಾಗಿದೆ.

2018–19ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕೆಲವು ಕಂಪನಿಗಳ ಆರ್ಥಿಕ ಸಾಧನೆ ಮಾರುಕಟ್ಟೆಯ ನಿರೀಕ್ಷೆಗೆ ಅನುಗುಣವಾಗಿ ಇಲ್ಲ. ಇದು ಆಯಾ ಕಂಪನಿಗಳ ಷೇರುಗಳಲ್ಲಿ ಇಳಿಕೆಗೆ ಕಾರಣವಾಗಿದೆ.

ಅಮೆರಿಕ ಮತ್ತು ಚಿನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಂಘರ್ಷವು ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಚಂಚಲ ವಹಿವಾಟು: ಐದು ದಿನಗಳ ವಾರದ ವಹಿವಾಟು ಚಂಚಲವಾಗಿತ್ತು. ಅತಿಯಾದ ಮಾರಾಟದ ಒತ್ತಡದಿಂದ ಷೇರುಪೇಟೆಗಳಲ್ಲಿ ಕರಡಿ ಕುಣಿತವೇ ಹೆಚ್ಚಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 1,500 ಅಂಶಗಳಷ್ಟು ಕುಸಿತ ಕಂಡು 37,462 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 433 ಅಂಶ ಇಳಿಕೆಯಾಗಿ 11,279 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.

‘ವಾಹನ ಗ್ರಾಹಕ ಬಳಕೆ ವಸ್ತುಗಳು ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ತ್ರೈಮಾಸಿಕದ ಆರ್ಥಿಕ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುವ ಮುನ್ಸೂಚನೆ ಕಂಡುಬರುತ್ತಿದೆ’ ಎಂದು ಕೋಟಕ್‌ ಸೆಕ್ಯುರಿಟೀಸ್ನ ಉಪಾಧ್ಯಕ್ಷ ಸಂಜೀವ್‌ ಜರ್ಬಾಡೆ ಅಭಿಪ್ರಾಯಪಟ್ಟಿದ್ದಾರೆ.

ಬಂಡವಾಳ ಹೊರಹರಿವು: ಫೆಬ್ರುವರಿಯಿಂದ ಷೇರುಪೇಟೆಯಲ್ಲಿ ಹೂಡಿಕೆಗೆ ಗಮನ ನೀಡಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಇದೀಗ ಮೇ ತಿಂಗಳಿನಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದು ಸೂಚ್ಯಂಕವನ್ನು ಇಳಿಕೆ ಕಾಣುವಂತೆ ಮಾಡುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ವಾರದ ವಹಿವಾಟಿನಲ್ಲಿ ₹ 4,194 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ರೂಪಾಯಿ ಇಳಿಕೆ: ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಮುಖವಾಗಿದೆ.

ಐದು ದಿನಗಳ ವಹಿವಾಟು ಅವಧಿಯಲ್ಲಿ 70 ಪೈಸೆಗಳಷ್ಟು ಇಳಿಕೆಯಾಗಿ ಒಂದು ಡಾಲರ್‌ಗೆ 69.92ಕ್ಕೆ ತಲುಪಿದೆ.

ಮುಂದುವರಿದ ನಷ್ಟ
ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಾಗಿರುವುದರಿಂದ ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿ ಇಳಿಕೆ ಕಾಣಲಾರಂಭಿಸಿದೆ.

ಐದು ವಹಿವಾಟು ಅವಧಿಗಳಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ಮಾರುಕಟ್ಟೆ ಲೆಕ್ಕದಲ್ಲಿ ₹ 4.95 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 151.61 ಲಕ್ಷ ಕೋಟಿಗಳಿಂದ ₹ 146.66 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !