ಗುರಿಯ ಮೇಲೆ ದೃಷ್ಟಿಇರಲಿ

7

ಗುರಿಯ ಮೇಲೆ ದೃಷ್ಟಿಇರಲಿ

Published:
Updated:
Deccan Herald

ನಿಮ್ಮ ಕಾರಿನಲ್ಲಿ ನೀವು ಯಾವುದೋ ಜಾಗಕ್ಕೆ ಪ್ರಯಾಣ ಹೊರಟಿದ್ದೀರಿ. ಇಂಥ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಅನುಸರಿಸುವ ವಿಧಾನವೆಂದರೆ ಗೂಗಲ್‌ ಮ್ಯಾಪ್‌ ಹಾಕಿ ತಾವು ಬಳಸಬಹುದಾದ, ಸಾಧ್ಯವಾದಷ್ಟು ಒಳ್ಳೆಯ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು. ನೀವು ಇದ್ದಲ್ಲಿಂದ ತಲುಪಬೇಕಾದ ಜಾಗಕ್ಕೆ ಹೋಗಲು ಬೇರೆ ದಾರಿಗಳೂ ಇರಬಹುದು. ಆದರೆ, ನೀವು ನಿಮಗೆ ಅತ್ಯುತ್ತಮ ಎನಿಸಿದ್ದನ್ನೇ ಆಯ್ಕೆ ಮಾಡಿಕೊಳ್ಳುತ್ತೀರಿ. ಹೀಗೆ ಮಾಡುವಾಗ ನಿಮಗೆ ಗುರಿ ತಲುಪಲು ಎಷ್ಟು ಸಮಯ ಬೇಕಾಗಬಹುದು, ಎಷ್ಟು ಇಂಧನ ಬೇಕಾಗಬಹುದು ಎಂಬ ಬಗ್ಗೆ ಒಂದು ಸ್ಥೂಲ ಚಿತ್ರಣ ಲಭಿಸುತ್ತದೆ.

ಹೂಡಿಕೆಯ ವಿಚಾರದಲ್ಲೂ ಈ ವ್ಯವಸ್ಥೆ ಅನುಕರಣೀಯ. ಮೊದಲು ನಿಮ್ಮ ಗುರಿ ನಿರ್ಧರಿಸಬೇಕು. ಅದಕ್ಕೆ ಅನುಗುಣವಾಗಿ ಹೂಡಿಕೆಯ ಪ್ರಮಾಣ, ಎಲ್ಲಿ ಹೂಡಿಕೆ ಮಾಡಬೇಕು, ಎಷ್ಟು ಅವಧಿಗೆ ಹೂಡಿಕೆ ಮಾಡಬೇಕು ಎಂಬ ವಿಚಾರಗಳ ಬಗ್ಗೆ ಯೋಜನೆ ರೂಪಿಸುವುದು ಅಗತ್ಯ. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ‘ಯಾಕೆ’ ಮತ್ತು ‘ಎಲ್ಲಿ’ ಹೂಡಿಕೆ ಮಾಡಬೇಕು ಎಂಬ ವಿಚಾರಗಳು ಸಹ, ‘ಹೇಗೆ’ ಹೂಡಿಕೆ ಮಾಡಬೇಕು ಎಂಬಷ್ಟೇ ಮುಖ್ಯವಾಗುತ್ತವೆ. ಆ ಕುರಿತು ಕೆಲವು ಸಲಹೆಗಳು ಇಲ್ಲಿವೆ

ಗುರಿ ನಿರ್ಧರಿಸಿ: ಯಾವ ಉದ್ದೇಶಕ್ಕೆ ಹೂಡಿಕೆ ಮಾಡುತ್ತಿದ್ದೀರಿ ಎಂಬ ಗುರಿ ನಿರ್ಧರಿಸುವುದು ಹೂಡಿಕೆಯ ವಿಚಾರದಲ್ಲಿ ಮೊದಲ ಮತ್ತು ಪ್ರಮುಖ ಹೆಜ್ಜೆ. ಒಮ್ಮೆ ಗುರಿ ನಿರ್ಧಾರ ಮಾಡಿದಿರಿ ಎಂದರೆ ಮುಂದಿನ ದಾರಿಗಳು ಸರಳವಾಗುತ್ತವೆ. ಯಾವುದೋ ಎಲೆಕ್ಟ್ರಾನಿಕ್‌ ಉತ್ಪನ್ನ ಖರೀದಿಸುವುದು, ವಿದೇಶ ಪ್ರಯಾಣ, ಹೊಸ ಕಾರು ಖರೀದಿ, ಮನೆ ಖರೀದಿ... ಹೀಗೆ ಗುರಿ ದೀರ್ಘಾವಧಿ, ಮಧ್ಯಮಾವಧಿ ಅಥವಾ ಅಲ್ಪಾವಧಿಯದ್ದೂ ಆಗಿರಬಹುದು. ನೀವು ಏನನ್ನು ಸಾಧಿಸಲು ಬಯಸಿದ್ದೀರಿ ಎಂಬುದು ನಿರ್ಧಾರವಾದರೆ, ಮುಂದಿನ ಯೋಜನೆ ರೂಪಿಸುವುದು ಸುಲಭವಾಗುತ್ತದೆ.

ಹೂಡಿಕೆ ‘ನಿಧಿ’ ಆಯ್ಕೆ: ಗುರಿ ನಿರ್ಧಾರವಾಯಿತು ಎಂದರೆ ಹೂಡಿಕೆಯ ಅವಧಿ ಹಾಗೂ ನಷ್ಟ ತಾಳಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆಯ ನಿಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಹೂಡಿಕೆಯ ಅವಧಿಯು ಹತ್ತು ವರ್ಷಗಳದ್ದು ಆಗಿದ್ದರೆ ಷೇರು ಸಂಬಂಧಿ ಹೈಬ್ರಿಡ್‌ ನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹೂಡಿಕೆಯ ಅವಧಿ 5ವರ್ಷದೊಳಗೆ ಇದ್ದರೆ ಸಾಲ ನಿಧಿ ಅಥವಾ ಸಾಲ ನಿಧಿ ಆಧಾರಿತ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಷೇರು ಆಧಾರಿತ ನಿಧಿಗಳಲ್ಲಿ ಅಪಾಯ ಹೆಚ್ಚಿರುವುದರಿಂದ ದೀರ್ಘಾವಧಿಯಲ್ಲಿ ಮಾತ್ರ ಅವು ಹೆಚ್ಚಿನ ಗಳಿಕೆ ದಾಖಲಿಸುತ್ತವೆ.

ಪ್ರಮಾಣ ನಿರ್ಧಾರ: ಹೂಡಿಕೆಯ ಉದ್ದೇಶ ಮತ್ತು ಯಾವ ನಿಧಿಯಲ್ಲಿ ಹೂಡಿಕೆ ಮಾಡಬೇಕು ಎಂಬುದು ತೀರ್ಮಾನವಾದ ನಂತರ ಉದ್ದೇಶಿತ ಗುರಿ ಸಾಧಿಸಲು ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನೂ ತೀರ್ಮಾನಿಸಬೇಕು. ಈ ಸಂದರ್ಭದಲ್ಲಿ ನಿಮ್ಮ ಈಗಿನ ಜೀವನಶೈಲಿ, ಹಣದುಬ್ಬರ ಮುಂತಾದ ವಿಚಾರಗಳನ್ನೂ ಪರಿಗಣಿಸಬೇಕು. ಇಲ್ಲಿ ಅತಿ ಮುಖ್ಯವಾದ ವಿಚಾರ ಏನೆಂದರೆ ‘ಹೂಡಿಕೆಯನ್ನು ಇಂದಿನಿಂದಲೇ ಆರಂಭಿಸಬೇಕು’ ಎಂಬುದು. ಏಕೆಂದರೆ ಇಂದಿನ ಸಮಸ್ಯೆಗಳು ನಿಮ್ಮ ಭವಿಷ್ಯವನ್ನು ಹಾಳುಮಾಡುವಂತೆ ಇರಬಾರದು. ಇಂದು ನಿಮ್ಮ ಹೂಡಿಕೆಯ ಸಾಮರ್ಥ್ಯ ಕಡಿಮೆ ಇರಬಹುದು, ನಿರೀಕ್ಷೆಯ ಪ್ರಮಾಣದಲ್ಲಿ ಹೂಡಿಕೆ ಮಾಡಲು ನೂರೆಂಟು ಅಡೆತಡೆಗಳೂ ಇರಬಹುದು. ಆದರೂ ಸಣ್ಣ ಪ್ರಮಾಣದಲ್ಲಾದರೂ ಹೂಡಿಕೆಯ ಮೊದಲ ಹೆಜ್ಜೆಯನ್ನು ಇಂದೇ ಇಡಬೇಕು. ನಿಮ್ಮ ಆದಾಯ ಹೆಚ್ಚಾದಂತೆ ನಿಧಾನವಾಗಿ ಹೂಡಿಕೆಯನ್ನು ಹೆಚ್ಚಿಸಲೂ ಅವಕಾಶ ಇರುತ್ತದೆ.

ಆದರೆ, ಹೂಡಿಕೆ ಆರಂಭಿಸುವಲ್ಲಿಗೇ ಪ್ರಕ್ರಿಯೆಯು ಕೊನೆಯಾಗುವುದಿಲ್ಲ. ಬದಲಾಗುತ್ತಿರುವ ಮಾರುಕಟ್ಟೆಯ ಸಂದರ್ಭಗಳಿಗೆ ಅನುಗುಣವಾಗಿ ಕಾಲಕಾಲಕ್ಕೆ ಇಂಥ ಹೂಡಿಕೆಯ ವಿಶ್ಲೇಷಣೆ ಮಾಡುವುದೂ ಅಗತ್ಯ. ಎಲ್ಲಾದರೂ ತಪ್ಪಾಗಿರುವುದು ಕಂಡುಬಂದರೆ ಕೂಡಲೇ ಅದನ್ನು ಸರಿಪಡಿಸಿಕೊಳ್ಳಬೇಕು. ಇದನ್ನು ನಿರ್ಲಕ್ಷಿಸಿದರೆ ಹೂಡಿಕೆಯು ನಿರರ್ಥಕವಾಗುವ ಅಪಾಯವೂ ಇರುತ್ತದೆ.

ಯಾವುದೇ ಗುರಿಯನ್ನು ತಲುಪಲು ಅನುಸರಿಸಬಹುದಾದ ಸುರಕ್ಷಿತ ಹೂಡಿಕೆ ಮಾರ್ಗವೆಂದರೆ ‘ಎಸ್‌ಐಪಿ’. ಅಂದರೆ ಪ್ರತಿ ತಿಂಗಳೂ ಇಂತಿಷ್ಟು ರೂಪಾಯಿ ಎಂದು ಹೂಡಿಕೆ ಮಾಡುತ್ತಾ ಹೋಗುವುದು. ಹಣ ವಾಪಸ್‌ ಪಡೆಯುವಾಗಲೂ ಎಸ್‌ಡಬ್ಲ್ಯುಪಿ (ವ್ಯವಸ್ಥಿತ ಹಿಂಪಡೆಯುವ ಯೋಜನೆ) ಅನುಸರಿಸುವುದೂ ಸೂಕ್ತ.

ಒಂದು ನಿಧಿಯು ಹಿಂದೆ ದಾಖಲಿಸಿದ ಯಶಸ್ಸನ್ನು ಪರಿಶೀಲಿಸಿ ಅದರಲ್ಲಿ ಹೂಡಿಕೆ ಮಾಡುವ ವಿಧಾನವನ್ನು ಹಲವರು ಅನುಸರಿಸುತ್ತಾರೆ. ಆದರೆ, ಹಿಂದಿನ ಸಾಧನೆಗಳು ಭವಿಷ್ಯದ ಏರಿಳಿಕೆಗಳನ್ನು ಅಳೆಯುವ ಮಾನದಂಡಗಳಾಗಲಾರವು ಎಂಬುದನ್ನು ಗಮನಿಸಬೇಕು. ಆದ್ದರಿಂದ ಹಿಂದಿನ ದಾಖಲೆಗಳನ್ನು ಕೆದಕುವ ಬದಲು, ನಿಧಿಯನ್ನು ನಿರ್ವಹಿಸುವ ಸಂಸ್ಥೆಯ ಈವರೆಗಿನ ಸಾಧನೆ ಏನು, ಫಂಡ್‌ ಮ್ಯಾನೇಜರ್‌ಗಳು ಸತತವಾಗಿ ಹೂಡಿಕೆದಾರರಿಗೆ ಒಳ್ಳೆಯ ಗಳಿಕೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆಯೇ ಎಂಬ ವಿಚಾರಗಳತ್ತ ಗಮನ ಕೊಡಬೇಕು. ಜೊತೆಗೆ ನಿಮ್ಮ ಉದ್ದೇಶ ಸಾಧನೆಯ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಬುದ್ಧಿವಂತಿಕೆಯ ನಿರ್ಧಾರವಾಗಿರುತ್ತದೆ.

(ಲೇಖಕ: ಎಸ್‌ಬಿಐ ಮ್ಯೂಚುವಲ್‌ ಫಂಡ್‌ನ ಸಿಎಂಒ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !