ಶುಕ್ರವಾರ, ಏಪ್ರಿಲ್ 16, 2021
23 °C

ಭಾರತದಲ್ಲಿ ಇನ್ನಷ್ಟು ಸುಧಾರಣೆ ಬೇಕು: ಐಎಂಎಫ್

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ವಾಣಿಜ್ಯೋದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ, ಹೂಡಿಕೆಯನ್ನು ಪ್ರೋತ್ಸಾಹಿಸುವಲ್ಲಿ ಭಾರತ ನಡೆಸಿದ ಪ್ರಯತ್ನಗಳು ಫಲ ನೀಡಿವೆಯಾದರೂ, ಸುಸ್ಥಿರ ಹಾಗೂ ಇನ್ನಷ್ಟು ಒಳಗೊಳ್ಳುವ ಬೆಳವಣಿಗೆ ಸಾಧಿಸಲು ಭಾರತವು ಹೆಚ್ಚಿನ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

ಫೇಸ್‌ಬುಕ್‌ ಮತ್ತು ಗೂಗಲ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವುದಾಗಿ ಈಚೆಗೆ ಘೋಷಿಸಿದ್ದರ ಕುರಿತ ಪ್ರಶ್ನೆಗೆ ಉತ್ತರವಾಗಿ, ಐಎಂಎಫ್‌ನ ಪ್ರಧಾನ ವಕ್ತಾರ ಗೆರ್‍ರಿ ರೈಸ್ ಈ ಮಾತು ಹೇಳಿದರು. ₹ 1.49 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಅಂತರರಾಷ್ಟ್ರೀಯ ಮಟ್ಟದ ಹಲವು ಕಂಪನಿಗಳು ಈಚೆಗೆ ಘೋಷಿಸಿವೆ. ಈ ವರ್ಷದಲ್ಲಿ ಭಾರತಕ್ಕೆ ಹರಿದು ಬಂದಿರುವ ಒಟ್ಟು ವಿದೇಶಿ ನೇರ ಬಂಡವಾಳ ₹ 2.99 ಲಕ್ಷ ಕೋಟಿ.

‘ಹೊಸದಾಗಿ ಜಾರಿಗೆ ತಂದ ದಿವಾಳಿ ಸಂಹಿತೆ ಮತ್ತು ರಾಷ್ಟ್ರಮಟ್ಟದಲ್ಲಿ ಜಾರಿಗೆ ಬಂದ ಜಿಎಸ್‌ಟಿ ವ್ಯವಸ್ಥೆಯು ಸುಲಲಿತವಾಗಿ ವಾಣಿಜ್ಯೋದ್ಯಮ ನಡೆಸಲು ಅವಕಾಶ ಇರುವ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನವನ್ನು ಉತ್ತಮಪಡಿಸಿವೆ. 2018ರಲ್ಲಿ ಈ ಪಟ್ಟಿಯಲ್ಲಿ 100ನೆಯ ಸ್ಥಾನದಲ್ಲಿದ್ದ ಭಾರತವು, 2020ರಲ್ಲಿ 63ನೆಯ ಸ್ಥಾನಕ್ಕೆ ಬಂದಿದೆ. ಇದು ನಿಜಕ್ಕೂ ಗಣನೀಯ ಪ್ರಗತಿ’ ಎಂದು ರೈಸ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಹೀಗಿದ್ದರೂ, ಕಾರ್ಮಿಕ ಕಾನೂನುಗಳಲ್ಲಿ, ಭೂಮಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಇನ್ನಷ್ಟು ಸುಧಾರಣೆ ಬೇಕು. ಹೆಚ್ಚಿನ ಹೂಡಿಕೆ ಆಕರ್ಷಿಸಲು, ಸುಸ್ಥಿರ ಅಭಿವೃದ್ಧಿ ಸಾಧಿಸಲು ಮೂಲಸೌಕರ್ಯದ ಮೇಲೆ ಹೆಚ್ಚುವರಿ ಹೂಡಿಕೆ ಆಗಬೇಕು ಎಂಬುದು ನಮ್ಮ ಅಭಿಪ್ರಾಯ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು