ಶನಿವಾರ, ಅಕ್ಟೋಬರ್ 16, 2021
22 °C

ಬಹುತೇಕ ಕೇಂದ್ರೋದ್ಯಮಗಳು ಖಾಸಗಿ ವಲಯ ಸೃಷ್ಟಿಸಿದ್ದೇ ಆಗಿವೆ: ಸನ್ಯಾಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರವು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವ ಸರ್ಕಾರಿ ಸ್ವಾಮ್ಯದ ಬಹುತೇಕ ಕಂಪನಿಗಳು (ಪಿಎಸ್‌ಯು) ಹಿಂದೆ ಖಾಸಗಿಯವರಿಂದಲೇ ಜನ್ಮತಾಳಿದ್ದವು ಎಂದು ಹೇಳುವ ಮೂಲಕ ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಸಂಜೀವ್‌ ಸನ್ಯಾಲ್‌ ಅವರು ಖಾಸಗೀಕರಣ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಪಿಎಸ್‌ಯು’ಗಳನ್ನು ಸರ್ಕಾರದ ಶ್ರಮದ ಮೂಲಕ ಕಟ್ಟಲಾಗಿದೆ ಎಂದು ನೀವು (ಪ್ರತಿಪಕ್ಷ) ಹೇಳುತ್ತೀರಿ. ಆದರೆ, ನಾವು ಖಾಸಗಿಯವರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಹೆಚ್ಚಿನವು ವಾಸ್ತವವಾಗಿ ಖಾಸಗಿ ವಲಯದಿಂದಲೇ ನಿರ್ಮಾಣ ಆಗಿರುವಂಥವು’ ಎಂದು ಹೇಳಿದ್ದಾರೆ.

ಇದಕ್ಕೆ ಒಂದು ಉದಾಹರಣೆಯನ್ನೂ ನೀಡಿದ ಅವರು, ಏರ್‌ ಇಂಡಿಯಾವನ್ನು ಖಾಸಗಿ ವಲಯದಿಂದ ಪಡೆದು 1953ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು ಎಂದಿದ್ದಾರೆ.

‘1969ರಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಲಾಯಿತು. ಆದ್ದರಿಂದ, ಈ ಸಂಸ್ಥೆಗಳು ದೇಶದ ಅಧಿಕಾರಿಗಳ ಶ್ರಮದಿಂದ ನಿರ್ಮಿಸಲ್ಪಟ್ಟಿವೆ ಎಂದು ಕೆಲವರು ಹೇಳುವಾಗ, ಇವುಗಳನ್ನು ಖಾಸಗಿ ಕಂಪನಿಗಳು ಸ್ಥಾಪಿಸಿದ್ದು ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ’ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಖಾಸಗೀಕರಣ ಮಾಡುವ ಸಲುವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಮುಖ ಮತ್ತು ಪ್ರಮುಖ ಅಲ್ಲದ ವಲಯಗಳು ಯಾವುವು ಎನ್ನುವುದನ್ನು ಈಗಾಗಲೇ ಗುರುತಿಸಿದ್ದಾರೆ. ಪ್ರಮುಖ ವಲಯಗಳಲ್ಲಿ ಸರ್ಕಾರವು ಕನಿಷ್ಠ ಉಪಸ್ಥಿತಿಯನ್ನು ಹೊಂದಲಿದೆ.

ಎಲ್ಲಿ ಅಗತ್ಯ ಇದೆಯೇ ಅಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಸೃಷ್ಟಿಸಲು ಸರ್ಕಾರ ಹಿಂಜರಿಯುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಈಚೆಗಷ್ಟೇ ‘ಅಭಿವೃದ್ಧಿ ಹಣಕಾಸು ಸಂಸ್ಥೆ’ಯನ್ನು (ಡಿಎಫ್‌ಐ) ಆರಂಭಿಸಿರುವುದನ್ನು ಅವರು ಉದಾಹರಣೆಯಾಗಿ ನೀಡಿದರು.

ಬ್ಯಾಂಕಿಂಗ್‌ ವಲಯದ ಕುರಿತು ಮಾತನಾಡಿದ ಅವರು, ‘ಇದು ಪ್ರಮುಖ ವಲಯದ ಭಾಗವಾಗಿದ್ದು, ಸರ್ಕಾರವು ಈ ವಲಯದಲ್ಲಿ ತನ್ನ ಅಸ್ತಿತ್ವ ಹೊಂದಿರಲಿದೆ. ಇದಕ್ಕೆ ಕೆಲವು ಕಾರಣಗಳಿವೆ. ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಸಮಸ್ಯೆಗಳಿವೆ. ನಾವು ಯೆಸ್‌ ಬ್ಯಾಂಕ್‌ನಂತಹ ಕೆಲವು ನಿದರ್ಶನಗಳನ್ನು ನೋಡಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.