ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 4.9ಕ್ಕೆ ಕುಸಿಯಲಿದೆ ಜಿಡಿಪಿ

2019–20ರ ಎರಡನೇ ತ್ರೈಮಾಸಿಕಕ್ಕೆ ಎನ್‌ಸಿಎಇಆರ್‌ ಅಂದಾಜು
Last Updated 17 ನವೆಂಬರ್ 2019, 1:08 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿಯೂ ಮಂದಗತಿಯಿಂದ ಹೊರಬರುವ ಸಾಧ್ಯತೆ ಕಡಿಮೆ ಇದೆ ಎಂದು ಸಂಶೋಧನಾ ವರದಿಗಳು ಹೇಳುತ್ತಿವೆ.

ಆರ್ಥಿಕ ವೃದ್ಧಿ ದರವು ಎರಡನೇ ತ್ರೈಮಾಸಿಕದಲ್ಲಿ ಶೇ 4.2ಕ್ಕೆ ಕುಸಿಯಲಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ತಿಳಿಸಿತ್ತು. ಇದೀಗಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಮಂಡಳಿ (ಎನ್‌ಸಿಎಇಆರ್‌) (ಎನ್‌ಸಿಎಇಆರ್‌) ಸಹ ಜಿಡಿಪಿಯು ಶೇ 4.9ರಷ್ಟಿರಲಿದೆ ಎಂದು ಶನಿವಾರ ಹೇಳಿದೆ.

ಕೈಗಾರಿಕೆ, ಮೂಲಸೌಕರ್ಯ, ತಯಾರಿಕೆ, ವಾಹನವನ್ನೂ ಒಳಗೊಂಡು ಪ್ರಮುಖ ಎಲ್ಲಾ ವಲಯಗಳ ಪ್ರಗತಿಯೂ ಇಳಿಮುಖವಾಗಿದೆ. ಹೀಗಾಗಿ ಜಿಡಿಪಿ ವೃದ್ಧಿ ದರದಲ್ಲಿಯೂ ಇಳಿಕೆ ಕಂಡುಬರಲಿದೆ ಎನ್‌ಸಿಎಇಆರ್‌ ವಿಶ್ಲೇಷಣೆ ಮಾಡಿದೆ.

ಮೊದಲ ತ್ರೈಮಾಸಿಕದಲ್ಲಿ ದಾಖಲಾಗಿದ್ದ ಶೇ 5ರಷ್ಟು ಬೆಳವಣಿಗೆ ದರವು ಆರು ವರ್ಷಗಳ ಕನಿಷ್ಠ ಮಟ್ಟದ್ದಾಗಿದೆ. ಹೀಗಾಗಿ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿತ್ತು. ಅದರ ಫಲದಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕತೆಯು ಚೇತರಿಸಿಕೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಆದರೆ, ಕೆಲವು ಸಂಸ್ಥೆಗಳು ಸದ್ಯದ ಮಟ್ಟಿಗೆ ಚೇತರಿಕೆ ಕಂಡುಕೊಳ್ಳುವುದು ಕಷ್ಟ ಎಂದು ಹೇಳುತ್ತಿವೆ.

2019–20ನೇ ಹಣಕಾಸು ವರ್ಷಕ್ಕೆ ಜಿಡಿಪಿ ಶೇ 6.8ರಂತೆ ಬೆಳವಣಿಗೆ ಕಾಣಲಿದೆ ಎಂದು ಎನ್‌ಸಿಎಇಆರ್‌ ಹೇಳಿತ್ತು. ಆದರೆ ಇದೀಗ ಅದನ್ನು ಶೇ 4.9ಕ್ಕೆ ಇಳಿಕೆ ಮಾಡಿದೆ.ಹಣಕಾಸು ನೀತಿಯಲ್ಲಿನ ಸುಧಾರಣೆಗಳು ಆರ್ಥಿಕತೆಗೆ ಪುನಶ್ಚೇತನ ನೀಡುವಲ್ಲಿ ವಿಫಲವಾಗುತ್ತಿವೆ. ವರಮಾನ ಸೃಷ್ಟಿಸುವ ಯೋಜನೆಗಳು ಜಾರಿಯಾಗದೇ ಇದ್ದರೆ ಆರ್ಥಿಕತೆಗೆ ಉತ್ತೇಜನ ನೀಡುವುದೂ ಸವಾಲಾಗಲಿದೆ ಎಂದು ಹೇಳಿದೆ.

‘ಆರ್ಥಿಕ ಬೆಳವಣಿಗೆಯು ತಳಮಟ್ಟಕ್ಕೆ ಇಳಿಯುತ್ತಿದೆಯೇ ಅಥವಾ ಇಲ್ಲವೇ ಎನ್ನುವುದು, ಎರಡನೇ ತ್ರೈಮಾಸಿಕದ ಅಂಕಿ–ಅಂಶ ಪ್ರಕಟವಾದ ಬಳಿಕ ಸ್ಪಷ್ಟವಾಗಲಿದೆ. ಸದ್ಯದ ಮಂದಗತಿಯ ಬೆಳವಣಿಗೆಗೆ ಬೇಡಿಕೆ ಇಲ್ಲದೇ ಇರುವುದೇ ಪ್ರಮುಖ ಕಾರಣ. ಆರ್ಥಿಕ ಸುಧಾರಣಾ ಕ್ರಮಗಳ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು’ ಎಂದು ಎನ್‌ಸಿಎಇಆರ್‌ನ ಸುದೀಪ್ತೊ ಮಂಡಲ್‌ ಅವರು ಹೇಳಿದ್ದಾರೆ.

ವಿತ್ತೀಯ ಕೊರತೆ ಮಿತಿ ಮೀರದಂತೆ ಸರ್ಕಾರದ ವೆಚ್ಚದ ಪ್ರಮಾಣ ಹೆಚ್ಚಿಸುವ ಅಗತ್ಯ ಇದೆ. ಇದಕ್ಕೆ ಹಲವು ಮಾರ್ಗಗಳಿವೆ. ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಉತ್ತಮವಾದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದಾಗ ಮಾತ್ರವೇ ಆರ್ಥಿಕತೆಯು ಚೇತರಿಕೆ ಕಾಣಲು ಸಾಧ್ಯ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಕಸ್ಟಮ್ಸ್‌ ಸುಂಕದ ಮೇಲಿನ ವಿನಾಯಿತಿಯನ್ನು ತಗ್ಗಿಸಬೇಕು. ಕಾರ್ಪೊರೇಟ್‌ ತೆರಿಗೆ ದರ ಕಡಿತ ಮಾಡುವ ಅಗತ್ಯ ಇರಲಿಲ್ಲ. ದರ ಕಡಿತದ ಬಳಿಕ ಕಂಪನಿಗಳು ಹೂಡಿಕೆ ಮಾಡಲು ಆರಂಭಿಸಿವೆಯೇ? ಎಂದು ಪ್ರಶ್ನಿಸಿರುವ ಅವರು, ‘ಈ ನಿರ್ಧಾರದಿಂದಾಗಿಯೇ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ’ ಎಂದು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT