ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ಸುಲಲಿತ ಜೀವನ ನಿರ್ವಹಣೆಗೆ ಕ್ರಮ: ನಿರ್ಮಲಾ

Published 12 ಜೂನ್ 2024, 15:22 IST
Last Updated 12 ಜೂನ್ 2024, 15:22 IST
ಅಕ್ಷರ ಗಾತ್ರ

ನವದೆಹಲಿ: ಸತತ ಎರಡನೇ ಬಾರಿಗೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. 

ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥ್‌ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು, ನಿರ್ಮಲಾ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಈ ವೇಳೆ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿ ಕೂಡ ಹಾಜರಿದ್ದರು.  

ಬಳಿಕ ಮಾತನಾಡಿದ ಅವರು, ‘ದೇಶದ ಜನರ ಸುಲಲಿತ ಜೀವನ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಬದ್ಧ. ಜನರ ಜೀವನ ಗುಣಮಟ್ಟ ಸುಧಾರಿಸುವುದೇ ಸರ್ಕಾರದ ಪ್ರಥಮ ಆದ್ಯತೆಯಾಗಿದೆ’ ಎಂದು ಭರವಸೆ ನೀಡಿದರು.

‘2014ರಿಂದ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಮುಂದುವರಿಯಲಿವೆ. ದೇಶದ ಸ್ಥೂಲ ಆರ್ಥಿಕ ಸ್ಥಿರತೆ ಹಾಗೂ ಆರ್ಥಿಕತೆ ಬೆಳವಣಿಗೆಗೆ ಸಂಬಂಧಿಸಿದಂತೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಜಾಗತಿಕ ಬಿಕ್ಕಟ್ಟಿನ ನಡುವೆಯೂ ಮುಂಬರುವ ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಬೆಳವಣಿಗೆ ಸಾಧಿಸಲಿದೆ ಎಂದರು.

ಎನ್‌ಡಿಎ ಮೈತ್ರಿಕೂಟದ ಅಭಿವೃದ್ಧಿ ಕಾರ್ಯಸೂಚಿಯ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ದ ಕನಸು ಈಡೇರಿಸಲು ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.

‘ಕೈಗಾರಿಕಾ ವಲಯದ ನಾಯಕರು, ನಿಯಂತ್ರಕರು, ನಾಗರಿಕರು ಹಾಗೂ ಮಧ್ಯಸ್ಥಗಾರರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಆ ಮೂಲಕ ಸದೃಢ ಆರ್ಥಿಕತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT