ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕ ಬಾರಿಸಿದ ಈರುಳ್ಳಿ ಬೆಲೆ: ಹೋಟೆಲ್‌ ಉದ್ಯಮ ತತ್ತರ

ತಿಂಡಿ–ತಿನಿಸು ಬೆಲೆ ಏರಿಸಿದರೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ!
Last Updated 3 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ಹಾವೇರಿ: ಪ್ರವಾಹ ಮತ್ತು ಅತಿವೃಷ್ಟಿಯಿಂದ ಉಳ್ಳಾಗಡ್ಡಿ ಬೆಲೆನವೆಂಬರ್‌ ಮೊದಲ ವಾರದಿಂದ ಏರಿಕೆಯಾಗುತ್ತಾ ಪ್ರಸ್ತುತ ಶತಕದ ಗಡಿ ದಾಟಿದೆ. ಈ ದುಬಾರಿ ದರ ಗ್ರಾಹಕರ ಕಣ್ಣಲ್ಲಿ ನೀರು ತರಿಸುವ ಜತೆಗೆ, ಹೋಟೆಲ್‌ ಉದ್ಯಮ ಕೂಡ ತತ್ತರಿಸುವಂತೆ ಮಾಡಿದೆ.

ನಗರದ ಹೋಟೆಲ್‌, ರೆಸ್ಟೋರೆಂಟ್‌, ಡಾಬಾ, ಬೇಕರಿ, ಬೀದಿಬದಿಯ ತಳ್ಳುಗಾಡಿ ವ್ಯಾಪಾರ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿದ್ದು, ಈರುಳ್ಳಿ ಘಾಟಿಗೆ ಮಾಲೀಕರು ಕಣ್ಣು–ಬಾಯಿ ಬಿಡುವಂತಾಗಿದೆ.

‘ಈರುಳ್ಳಿ ದರ ಜಾಸ್ತಿಯಾಗಿದೆ ಅಂತ ಬೇಕರಿ ತಿನಿಸು ಬೆಲೆ ಏರಿಸಿದರೆ, ಈರುಳ್ಳಿ ದರ ಇಳಿದ ಮೇಲೆ ತಿನಿಸುಗಳ ಬೆಲೆ ಇಳಿಸುವುದು ಕಷ್ಟವಾಗುತ್ತದೆ. ಹಾಗಾಗಿ ಇದ್ದುದರಲ್ಲೇ ವ್ಯಾಪಾರ ನಡೆಸುತ್ತಿದ್ದೇವೆ. ಡಿಸೆಂಬರ್‌ ಅಂತ್ಯದವರೆಗೆ ದರ ಇದೇ ರೀತಿ ಮುಂದುವರಿದರೆ ಪಪ್ಸ್‌, ಖಾರಾ ಬನ್‌, ಟೋಸ್ಟ್‌ ಮುಂತಾದವುಗಳ ಬೆಲೆ ಏರಿಕೆ ಅನಿವಾರ್ಯ’ ಎನ್ನುತ್ತಾರೆ ನಗರದ ಪ್ರಜ್ವಲ್‌ ಬೇಕರಿ ಮಾಲೀಕ ದೇವರಾಜು ತಳವಾರ.

‘ನಮ್ಮ ಹೋಟೆಲ್‌ನಲ್ಲಿ ಒಂದು ಉತ್ತಪ್ಪಕ್ಕೆ (ಈರುಳ್ಳಿ ದೋಸೆ) ₹ 45 ಬೆಲೆ ಇತ್ತು. ಉಳ್ಳಾಗಡ್ಡಿ ದರ ದುಬಾರಿಯಾದ ಪರಿಣಾಮ ₹ 60ಕ್ಕೆ ಬೆಲೆ ಹೆಚ್ಚಿಸಿದ್ದೇವೆ. ಇಪ್ಪತ್ತು ದಿನಗಳಿಂದ ಗ್ರಾಹಕರು ಉತ್ತಪ್ಪ ಕೇಳುವುದೇ ಕಡಿಮೆಯಾಗಿದೆ. ಅಕಸ್ಮಾತ್‌ ಕೇಳಿದರೆ ಬೆಲೆ ಮುಂಚಿತವಾಗಿ ಹೇಳಿ, ಆಮೇಲೆ ಆರ್ಡರ್‌ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ಹೋಟೆಲ್‌ ಮಾಣಿಯೊಬ್ಬರು.

‘ಈರುಳ್ಳಿ ದರ ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ. ಹಾಗಂತ ಕೂಡಲೇ ನಾವು ಪ್ಲೇಟ್‌ ಗಿರ್ಮಿಟ್‌ಗೆ ಇರುವ ₹ 20 ದರವನ್ನು ಏರಿಸಲು ಸಾಧ್ಯವಿಲ್ಲ. ನಮ್ಮ ಕಾಯಂ ಗ್ರಾಹಕರು ಕೈತಪ್ಪಿ ಹೋದರೆ, ವ್ಯಾಪಾರಕ್ಕೆ ಕುತ್ತು ಬರುತ್ತದೆ. ಆದರೆ, ಡಿಸೆಂಬರ್‌ ಅಂತ್ಯದವರೆಗೆ ದರ ಇಳಿಯದಿದ್ದರೆ, ಜನವರಿ 1ರಿಂದ ಪ್ಲೇಟ್‌ ಗಿರ್ಮಿಟ್‌ ₹ 25 ಮಾಡುವುದು ಅನಿವಾರ್ಯ’ ಎಂದು ವ್ಯಾಪಾರದ ಸಂಕಟವನ್ನು ತೋಡಿಕೊಂಡರು ಬಸವೇಶ್ವರ ತಟ್ಟೆ ಇಡ್ಲಿ ಸೆಂಟರ್‌ ಮಾಲೀಕ ಪಿ.ಎಂ. ಹಿರೇಮಠ.

ದಪ್ಪ ಗಾತ್ರದ ಉತ್ತಮ ಈರುಳ್ಳಿ ಕ್ವಿಂಟಲ್‌ಗೆ ₹ 5 ಸಾವಿರದಿಂದ ₹ 9 ಸಾವಿರದವರೆಗೂ ದರವಿದೆ. ಸಣ್ಣ ಗಾತ್ರದ ಹಾಗೂ ಹಸಿ ಇರುವ ಲೋಕಲ್‌ ಉಳ್ಳಾಗಡ್ಡಿ ಕ್ವಿಂಟಲ್‌ಗೆ ₹ 2 ಸಾವಿರದಿಂದ ₹ 3 ಸಾವಿರದವರೆಗೆ ದರವಿದೆ. ಈರುಳ್ಳಿ ಬೆಲೆ ಜಾಸ್ತಿಯಾಗಿರುವುದರಿಂದ ಬಹಳಷ್ಟು ರೈತರು ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದಾರೆ. ಡಿಸೆಂಬರ್‌ ಅಂತ್ಯಕ್ಕೆ ಆವಕ ಹೆಚ್ಚಾಗಿ ಬೆಲೆ ಇಳಿಯುವ ಸಾಧ್ಯತೆ ಇದೆ ಎಂಬುದು ಈರುಳ್ಳಿ ವರ್ತಕ ಬಸವರಾಜ ಬಾದಾಮಿ ಅವರ ಅಭಿಪ್ರಾಯ.

ನಮ್ಮ ಡಾಬಾದಲ್ಲಿ ಗ್ರೇವಿ, ಎಗ್‌ ಬುರ್ಜಿ, ದಾಲ್‌ ತಯಾರಿಸಲು ಹಾಗೂ ನಾನ್‌ ವೆಜ್‌ ಊಟದ ಜತೆಗೆ ಕೊಡಲು ನಿತ್ಯ 25 ಕೆ.ಜಿ. ಈರುಳ್ಳಿ ಬೇಕು. ಅಕ್ಟೋಬರ್‌ನಲ್ಲಿ 25 ಕೆ.ಜಿ. ಈರುಳ್ಳಿಗೆ ₹ 750 ವೆಚ್ಚವಾಗುತ್ತಿತ್ತು. ಈಗ ಬರೋಬ್ಬರಿ ₹ 2,500ರಿಂದ ₹ 3 ಸಾವಿರ ಭರಿಸಬೇಕಿದೆ. ಅಷ್ಟೇ ಅಲ್ಲ ಒಂದು ಚೀಲಕ್ಕೆ 15 ಕೆ.ಜಿ. ವೆಸ್ಟೇಜ್‌ ಬರುತ್ತಿದೆ. ಹಾಗಂತ ಗ್ರಾಹಕರಿಗೆ ಈರುಳ್ಳಿ ಕೊಡುವುದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಡಾಬಾಗಳ ನಡುವೆ ಸ್ಪರ್ಧೆಯೂ ಹೆಚ್ಚಿರುವುದರಿಂದ ನಮ್ಮ ಲಾಭಾಂಶದಲ್ಲೇ ದುಬಾರಿ ಖರ್ಚು ಭರಿಸುತ್ತಿದ್ದೇವೆ’ ಎಂದು ವ್ಯಾಪಾರದ ಕಷ್ಟ–ನಷ್ಟವನ್ನು ತೋಡಿಕೊಂಡರು ಜೈಶಂಕರ್‌ ಡಾಬಾದ ಅಶೋಕ್‌ ಶೆಟ್ಟಿ.

ಇತ್ತ, ಈರುಳ್ಳಿ ದುಬಾರಿ ಬೆಲೆಯ ಭಾರವನ್ನೂ ಹೊರಲಾಗದೆ, ಅತ್ತ, ಗ್ರಾಹಕರನ್ನು ಕಳೆದುಕೊಳ್ಳುವ ಭಯದಿಂದಆಹಾರ ಪದಾರ್ಥಗಳ ದರವನ್ನೂ ಏರಿಸಲಾಗದೆ ಹೋಟೆಲ್‌ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT