ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.8 ಕೋಟಿ ಭಾರತೀಯರಿಗೆ ಹೊಸ ಉದ್ಯೋಗ ಕಂಡುಕೊಳ್ಳುವುದು ಅನಿವಾರ್ಯ

Last Updated 19 ಫೆಬ್ರುವರಿ 2021, 13:05 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್–19 ಸಾಂಕ್ರಾಮಿಕವು ದೇಶದ ಉದ್ಯೋಗ ಮಾರುಕಟ್ಟೆಯ ಮೇಲೆ ಬಹುಕಾಲ ಪರಿಣಾಮ ಬೀರಲಿದೆ. ಸಾಂಕ್ರಾಮಿಕದ ಕಾರಣದಿಂದಾಗಿ, ಭಾರತದ ಕಾರ್ಮಿಕರ ಪೈಕಿ 1.8 ಕೋಟಿ ಜನ 2030ರೊಳಗೆ ಹೊಸ ಉದ್ಯೋಗ ಕಂಡುಕೊಳ್ಳುವುದು ಅನಿವಾರ್ಯ ಆಗಲಿದೆ ಎಂದು ವರದಿಯೊಂದು ಹೇಳಿದೆ.

ಚಿಲ್ಲರೆ ಮಾರಾಟ, ಆಹಾರ ಸೇವೆಗಳು, ಆತಿಥ್ಯ, ಕಚೇರಿ ನಿರ್ವಹಣೆಯಂತಹ ವಲಯಗಳಲ್ಲಿ ಕೆಲಸ ಮಾಡುವ ಕೆಳಗಿನ ಹಂತದ ನೌಕರರ ಮೇಲೆ ಸಾಂಕ್ರಾಮಿಕದ ಪರಿಣಾಮವು ತೀರಾ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ ಎಂದು ಮೆಕಿನ್ಸಿ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ (ಎಂಜಿಐ) ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ.

ಕೆಲಸದ ವಿಚಾರದಲ್ಲಿ ಕಂಪನಿಗಳು ಹೊಸ ಸವಾಲುಗಳನ್ನು ನಿಭಾಯಿಸಬೇಕಾಗಿದೆ. ಹೀಗಾಗಿ ಸಾಂಕ್ರಾಮಿಕದ ಪರಿಣಾಮವಾಗಿ ಕಾರ್ಮಿಕರ ಮಾರುಕಟ್ಟೆಯಲ್ಲಿ ತೀವ್ರ ಬದಲಾವಣೆಗಳು ಉಂಟಾಗಿವೆ. ಗ್ರಾಹಕರ ವರ್ತನೆಯಲ್ಲಿ ಹಾಗೂ ವಾಣಿಜ್ಯ ವಹಿವಾಟಿನ ಸ್ವರೂಪದಲ್ಲಿ ಆಗಿರುವ ಮೂರು ಮುಖ್ಯ ಬದಲಾವಣೆಗಳು ಉಳಿದುಕೊಳ್ಳಲಿವೆ. ಮನೆಯಿಂದ ಕೆಲಸ ಮಾಡುವ ಮಾದರಿ, ಇ–ಮಾರುಕಟ್ಟೆಯ ಮೇಲಿನ ಅವಲಂಬನೆ ಮತ್ತು ವರ್ಚುವಲ್‌ ಆಗಿ ಸಭೆಗಳನ್ನು ನಡೆಸುವುದು, ಕೃತಕ ಬುದ್ಧಿಮತ್ತೆಯ ಬಳಕೆ ತೀವ್ರವಾಗಿ ಹೆಚ್ಚುವುದು ಮುಂದುವರಿಯಲಿದೆ ಎಂದು ವರದಿಯು ಉಲ್ಲೇಖಿಸಿದೆ.

ಇವುಗಳ ಕಾರಣದಿಂದಾಗಿ ಅರ್ಥ ವ್ಯವಸ್ಥೆಯಲ್ಲಿ ಒಂದು ದಶಕದ ಅವಧಿಯಲ್ಲಿ ಉದ್ಯೋಗಗಳ ಸ್ವರೂಪದಲ್ಲಿ ಬದಲಾವಣೆ ಆಗಲಿದೆ. ಇದರಿಂದಾಗಿ 10 ಕೋಟಿಗಿಂತ ಹೆಚ್ಚು ಜನ ಹೊಸ ಕೆಲಸ ಕಂಡುಕೊಳ್ಳಬೇಕಾದ ಸ್ಥಿತಿ ಎದುರಾಗಲಿದೆ. ಈ 10 ಕೋಟಿ ಜನರ ಪೈಕಿ 1.8 ಕೋಟಿ ಜನ ಭಾರತದವರೇ ಆಗಿರುತ್ತಾರೆ.

‘ಕೋವಿಡ್–19 ಸಾಂಕ್ರಾಮಿಕದ ದೂರಗಾಮಿ ಪರಿಣಾಮವಾಗಿ, ಉದ್ಯೋಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ಸಂಬಳದ ಕೆಲಸಗಳ ಸಂಖ್ಯೆ ತಗ್ಗಬಹುದು. ಇಂತಹ ಉದ್ಯೋಗಗಳು ಒಂದೆಡೆಯಿಂದ ಇನ್ನೊಂದೆಡೆ ಹೋಗಬೇಕಾದ ಸ್ಥಿತಿಯಲ್ಲಿರುವ ನೌಕರರ ಪಾಲಿಗೆ ನೆರವಿಗೆ ಬರುತ್ತಿದ್ದವು’ ಎಂದು ಮೆಕಿನ್ಸಿ ಗ್ಲೋಬಲ್‌ ಇನ್‌ಸ್ಟಿಟ್ಯೂಟ್‌ನ ಸೂಸನ್‌ ಎಲ್‌. ಹೇಳಿದ್ದಾರೆ.

ಇಂತಹ ಕಾರ್ಮಿಕರು ಹೆಚ್ಚಿನ ಕೌಶಲ ಬೇಡುವ ಹಾಗೂ ಹೆಚ್ಚಿನ ಸಂಬಳ ನೀಡುವ ಕೆಲಸಗಳನ್ನು ನಿಭಾಯಿಸಲು ಸಿದ್ಧರಾಗಬೇಕಾಗುತ್ತದೆ. ಆರೋಗ್ಯ ಸೇವೆಗಳು, ತಂತ್ರಜ್ಞಾನ, ಬೋಧನೆ ಮತ್ತು ತರಬೇತಿಯಂತಹ ಕೆಲಸ ನಿಭಾಯಿಸುವುದನ್ನು ಇವರು ಕಲಿಯಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮನೆಯಿಂದಲೇ ಕೆಲಸ ಮಾಡುವುದು ಅಥವಾ ಯಾವುದೇ ಊರಿನಲ್ಲಿ ಇದ್ದುಕೊಂಡು ಕಚೇರಿಯ ಕೆಲಸ ನಿಭಾಯಿಸುವ ಸಂಸ್ಕೃತಿಯು ಚಾಲ್ತಿಯಲ್ಲಿ ಇರಲಿದೆ, ವಾಣಿಜ್ಯ ಉದ್ದೇಶಗಳಿಗಾಗಿ ಪ್ರಯಾಣ ಕೈಗೊಳ್ಳುವುದು ಕಡಿಮೆ ಆಗಲಿದೆ, ಕೃತಕ ಬುದ್ಧಿಮತ್ತೆ ಬಳಸಿಕೊಂಡು ಕೆಲಸ ನಿಭಾಯಿಸುವುದು ಹೆಚ್ಚಾಗಲಿದೆ ಎಂದು ವರದಿಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT