ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಮೆಂಟ್ಸ್ ಬ್ಯಾಂಕ್‌ಗಳ ಅನಿಶ್ಚಿತ ಭವಿಷ್ಯ

ರಿಸರ್ವ್‌ ಬ್ಯಾಂಕ್‌, ಸರ್ಕಾರದ ಬೆಂಬಲ ಅಗತ್ಯ: ಎಸ್‌ಬಿಐ ವರದಿಯಲ್ಲಿ ಸಲಹೆ
Last Updated 22 ಜುಲೈ 2019, 19:35 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪೇಮೆಂಟ್ಸ್‌ ಬ್ಯಾಂಕ್‌ಗಳ (ಪಿಬಿ) ಭವಿಷ್ಯ ಅನಿಶ್ಚಿತವಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಆರ್ಥಿಕ ತಜ್ಞರು ಸಿದ್ಧಪಡಿಸಿರುವ ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಬ್ಯಾಂಕಿಂಗ್‌ ಸೌಲಭ್ಯವನ್ನು ವಿಸ್ತರಿಸಿ ಆರ್ಥಿಕ ಸೇರ್ಪಡೆ ಹೆಚ್ಚಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಈ ಪಾವತಿ ಬ್ಯಾಂಕ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಬೆಂಬಲ ದೊರೆಯಬೇಕಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಇದೇ ಅಕ್ಟೋಬರ್‌ನಿಂದ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಆದಿತ್ಯ ಬಿರ್ಲಾ ಪೇಮೆಂಟ್ಸ್‌ ಬ್ಯಾಂಕ್‌ ಪ್ರಕಟಿಸಿದ ಬೆನ್ನಲ್ಲೇ ಈ ವರದಿ ಬಿಡುಗಡೆಯಾಗಿದೆ. ವೊಡಾಫೋನ್‌ನ ಎಂ–ಪೇಸಾ (M-Pesa) ಕೂಡ ಈ ತಿಂಗಳ ಆರಂಭದಲ್ಲಿ ಬಾಗಿಲು ಹಾಕಿದೆ. ಇದೊಂದು ಮೊಬೈಲ್‌ ಫೋನ್‌ ಆಧರಿಸಿದ ಹಣ ವರ್ಗಾವಣೆ, ಹಣಕಾಸು ಮತ್ತು ಕಿರು ಹಣಕಾಸು ಸೇವೆ ಒದಗಿಸುವ ಸೌಲಭ್ಯವಾಗಿತ್ತು.

‘ಪೇಮೆಂಟ್ಸ್‌ ಬ್ಯಾಂಕ್‌ಗಳ ಭವಿಷ್ಯ ಅನಿಶ್ಚಿತವಾಗಿದೆ. ಆದರೆ, ಸದ್ಯಕ್ಕಂತೂ ಇವುಗಳ ವಹಿವಾಟು ವಿಸ್ತರಣೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ಮತ್ತು ಆರ್‌ಬಿಐನ ಬೆಂಬಲ ಅಗತ್ಯವಾಗಿ ಬೇಕಾಗಲಿದೆ’ ಎಂದು ಆರ್ಥಿಕತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಫಲತೆಯ ಹಾದಿಯಲ್ಲಿ?: ‘ಪೇಮೆಂಟ್ಸ್‌ ಬ್ಯಾಂಕ್‌ಗಳ ಮಾದರಿಯು ಅವುಗಳ ಸ್ಥಾಪನೆಯ ಉದ್ದೇಶ ಸಾಧಿಸುವಲ್ಲಿ ವಿಫಲವಾಗುವ ಹಾದಿಯಲ್ಲಿ ಸಾಗುತ್ತಿದೆ. 2014ರಲ್ಲಿ ಪಾವತಿ ಬ್ಯಾಂಕ್‌ಗಳನ್ನು ಆರಂಭಿಸಲು 11 ಸಂಸ್ಥೆಗಳಿಗೆ ಲೈಸೆನ್ಸ್‌ ನೀಡಲಾಗಿತ್ತು. ಇವುಗಳ ಪೈಕಿ ಕೇವಲ 4 ಸಂಸ್ಥೆಗಳು ಮಾತ್ರ ವಹಿವಾಟು ಆರಂಭಿಸಲು ಮುಂದೆ ಬಂದಿದ್ದವು.

ಈ ಬ್ಯಾಂಕ್‌ಗಳು ಸಂಪತ್ತು ಮತ್ತು ಹೊಣೆಗಾರಿಕೆ ವಿಷಯದಲ್ಲಿ ಕಠಿಣ ನಿಯಂತ್ರಣ ಕ್ರಮಗಳನ್ನು ಎದುರಿಸುತ್ತಿವೆ. ನಿರ್ಬಂಧಿತ ಕ್ರಮಗಳಿಂದಾಗಿ ವಾಣಿಜ್ಯ ಬ್ಯಾಂಕ್‌ಗಳಿಗೆ ಸ್ಪರ್ಧೆ ನೀಡಲು ಅವುಗಳಿಗೆ ಸರಿಸಮನಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ.

ಆಧಾರ್‌ ಆಧಾರಿತ ಕಡಿಮೆ ವೆಚ್ಚದ ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ (ಕೆವೈಸಿ) ಸೌಲಭ್ಯ ಕಲ್ಪಿಸಿದರೆ ಈ ಮಾದರಿ ಬ್ಯಾಂಕಿಂಗ್‌ ವ್ಯವಸ್ಥೆ ಯಶಸ್ವಿಯಾಗಬಹುದು. ಮೂರನೇ ಸಂಸ್ಥೆಯ ಹಣಕಾಸು ಉತ್ಪನ್ನಗಳನ್ನು ಮಾರಾಟ ಮಾಡಲು ಆರ್‌ಬಿಐ ಅನುಮತಿ ನೀಡಿದರೆ ವಹಿವಾಟು ಲಾಭದಾಯಕವಾಗಿರಲಿದೆ.

ಖಾತೆಯಲ್ಲಿನ ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತವು ಸ್ವಯಂಚಾಲಿತವಾಗಿ ವಾಣಿಜ್ಯ ಬ್ಯಾಂಕ್‌ಗಳಿಗೆ ವರ್ಗಾವಣೆಗೊಳ್ಳುವ ಸೌಲಭ್ಯ ಕಲ್ಪಿಸಿದರೂ ‘ಪಿಬಿ’ಗಳಿಗೆ ಅನುಕೂಲವಾಗಲಿದೆ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT