ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ್’ ಬ್ರ್ಯಾಂಡ್‌ ಯೂರಿಯಾ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

600 ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಪ್ರಧಾನಿ ಚಾಲನೆ
Last Updated 17 ಅಕ್ಟೋಬರ್ 2022, 11:18 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಒಂದು ದೇಶ ಒಂದು ರಸಗೊಬ್ಬರ ಯೋಜನೆ’ಯ ಅಡಿಯಲ್ಲಿ ಸೋಮವಾರ, ಸಬ್ಸಿಡಿ ಸಹಿತ ಯೂರಿಯಾದ‘ಭಾರತ್’ ಬ್ರ್ಯಾಂಡ್‌ ಬಿಡುಗಡೆ ಮಾಡಿದರು.

ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಭಾರತೀಯ ಜನ ಊರ್ವರಕ್ ಪರಿಯೋಜನಾ’ (ಒಂದು ದೇಶ, ಒಂದು ರಸಗೊಬ್ಬರ – ಒಎನ್‌ಒಎಫ್‌) ಅಡಿಯಲ್ಲಿ ವಿವಿಧ ಕಂಪನಿಗಳು ಸಬ್ಸಿಡಿ ಇರುವ ರಸಗೊಬ್ಬರವನ್ನು ‘ಭಾರತ್’ ಬ್ರ್ಯಾಂಡ್‌ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಕಡ್ಡಾಯ.

ಸಬ್ಸಿಡಿ ಇರುವ ರಸಗೊಬ್ಬರಗಳಿಗೆ ಒಂದು ಬ್ರ್ಯಾಂಡ್‌ ನಿಗದಿ ಮಾಡಿರುವುದು ಸರ್ಕಾರ ಕೈಗೊಂಡಿರುವ ಪ್ರಮುಖ ಸುಧಾರಣಾ ಕ್ರಮಗಳ ಪೈಕಿ ಒಂದು ಎಂದು ಮೋದಿ ಹೇಳಿದರು. ‘ರಸಗೊಬ್ಬರಗಳ ಬ್ರ್ಯಾಂಡ್‌ ವಿಚಾರವಾಗಿ ರೈತರು ಗೊಂದಲದಲ್ಲಿ, ಭ್ರಮೆಯಲ್ಲಿ ಇದ್ದಾರೆ. ಹೆಚ್ಚಿನ ಕಮಿಷನ್ ಪಡೆಯಲು ಚಿಲ್ಲರೆ ಮಾರಾಟಗಾರರು ಕೆಲವು ಬ್ರ್ಯಾಂಡ್‌ಗಳ ರಸಗೊಬ್ಬರಕ್ಕೆ ಆದ್ಯತೆ ನೀಡುತ್ತಾರೆ. ಇನ್ನೊಂದೆಡೆ ಕಂಪನಿಗಳು ತಮ್ಮ ಉತ್ಪನ್ನಗಳ ಬಗ್ಗೆ ಜಾಹೀರಾತು ಅಭಿಯಾನ ನಡೆಸುತ್ತವೆ. ಇವೆರಡರ ನಡುವೆ ರೈತರಿಗೆ ಗುಣಮಟ್ಟದ ರಸಗೊಬ್ಬರ ಸಿಗುತ್ತಿಲ್ಲ’ ಎಂದು ಅವರು ಹೇಳಿದರು.

‘ಈಗ ಯೂರಿಯಾವನ್ನು ಒಂದೇ ಬ್ರ್ಯಾಂಡ್‌ನ ಅಡಿಯಲ್ಲಿ ದೇಶದೆಲ್ಲೆಡೆ ಮಾರಾಟ ಮಾಡಲಾಗುತ್ತದೆ. ಇನ್ನು ಮುಂದೆ ಯೂರಿಯಾ, ಭಾರತ್ ಎಂಬ ಬ್ರ್ಯಾಂಡ್‌ ಅಡಿ ಸಿಗಲಿದೆ’ ಎಂದು ತಿಳಿಸಿದರು. ಒಂದೇ ಬ್ರ್ಯಾಂಡ್‌ನ ಪರಿಣಾಮವಾಗಿ ಕಂಪನಿಗಳ ನಡುವೆ ತಮ್ಮ ಬ್ರ್ಯಾಂಡ್‌ಗೆ ಮಾತ್ರ ಆದ್ಯತೆ ನೀಡುವ ಸ್ಪರ್ಧೆಯು ಕಡಿಮೆಯಾಗಲಿದೆ. ಇದು ದೇಶದಾದ್ಯಂತ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ಮಾಡಲಿದೆ ಎಂದು ತಿಳಿಸಿದರು.

ರೈತರಿಗೆ ಒಂದೇ ಜಾಗದಲ್ಲಿ ಹಲವು ಬಗೆಯ ಸೇವೆಗಳನ್ನು ಒದಗಿಸುವ 600 ಪಿಎಂ–ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಅವರು ಉದ್ಘಾಟಿಸಿದರು. ಈ ಕೇಂದ್ರಗಳು ಬೀಜ, ರಸಗೊಬ್ಬರ, ಕೃಷಿ ಉಪಕರಣಗಳ ಮಾರಾಟದ ಜೊತೆಯಲ್ಲೇ ರೈತರಿಗೆ ಮಣ್ಣು, ಬೀಜ ಪರೀಕ್ಷೆಯ ಸೇವೆಗಳನ್ನು ಒದಗಿಸಲಿವೆ. ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕೂಡ ನೀಡಲಿದೆ ಎಂದರು.

ದೇಶದಲ್ಲಿ ಅಂದಾಜು 3.25 ಲಕ್ಷ ರಸಗೊಬ್ಬರ ಚಿಲ್ಲರೆ ಮಾರಾಟ ಅಂಗಡಿಗಳನ್ನು ಕಿಸಾನ್ ಸಮೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT