ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ಹಣ್ಣಿನ ಧಾರಣೆ ಕುಸಿತ

ಬೆಳೆಗಾರರ ಗಾಯದ ಮೇಲೆ ಬರೆ ಎಳೆದ ಕೋವಿಡ್‌
Last Updated 10 ಜೂನ್ 2021, 5:54 IST
ಅಕ್ಷರ ಗಾತ್ರ

ಹೊಸದುರ್ಗ: ಲಾಕ್‌ಡೌನ್‌ನಿಂದಾಗಿ ದಾಳಿಂಬೆ ಹಣ್ಣಿನ ಧಾರಣೆ ಕುಸಿದಿದ್ದು, ಬೆಳೆಗಾರರ ಗಾಯದ ಮೇಲೆ ಕೋವಿಡ್‌ ಬರೆ ಎಳೆದಿದೆ.

ಈ ಬಾರಿ ಲಾಕ್‌ಡೌನ್‌ಗಿಂತ ಮೊದಲು ಪ್ರತಿ ಕೆ.ಜಿ. ದಾಳಿಂಬೆ ಹಣ್ಣಿಗೆ ₹ 150ರಿಂದ ₹ 210ರವರೆಗೂ ದರ ಇತ್ತು. ಆದರೆ, ಲಾಕ್‌ಡೌನ್‌ ಬಳಿಕ ಅರ್ಧದಷ್ಟು ದರ ಕುಸಿದಿದ್ದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಶಕದ ಹಿಂದೆ ತಾಲ್ಲೂಕಿನಲ್ಲಿ 8,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿತ್ತು. ಆದರೆ, ನಾಲ್ಕೈದು ವರ್ಷಗಳ ಹಿಂದೆ ದುಂಡಾಣು ಅಂಗಮಾರಿ ರೋಗ ಕಾಣಿಸಿಕೊಂಡಿದ್ದರಿಂದ ಬೆಳೆ ಉಳಿಸಿಕೊಳ್ಳಲು ಹಲವು ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಔಷಧ ಸಿಂಪಡಿಸಿದ್ದರು. ಹೀಗಿದ್ದರೂ ರೋಗದಿಂದ ಮುಕ್ತವಾಗದ ಕಾರಣ ಬಹುತೇಕ ಬೆಳೆಗಾರರು ‘ದಾಳಿಂಬೆ ಸಹವಾಸವೇ ಬೇಡಪ್ಪಾ’ ಎಂದು ಕಣ್ಣೀರಿಡುತ್ತ ಬೆಳೆ ನಾಶ ಮಾಡಿದ್ದರು.

‘ಕೊಳವೆಬಾವಿ ಕೊರೆಯಿಸಿ, ಜಮೀನಿಗೆ ವಿದ್ಯುತ್‌ ತರಲು, ಪೈಪ್‌ಲೈನ್‌ ಹಾಗೂ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಮಳೆ, ಬಿಸಿಲು, ಚಳಿ, ಕಾಡುಪ್ರಾಣಿ ಹಾವಳಿ ಲೆಕ್ಕಿಸದೇ ಕಷ್ಟಪಟ್ಟು ಬೆಳೆಸಿರುವ ದಾಳಿಂಬೆ

ಗಿಡ ನಾಶ ಪಡಿಸುವುದು ಬೇಡ. ಗಿಡ ತೆಗೆದರೆ ಮತ್ತೆ ಬೆಳೆ ಬೆಳೆಯಲು ಸಾಕಷ್ಟು ಹಣ ಖರ್ಚಾಗುತ್ತದೆ. ಇನ್ನೂ ಎರಡ್ಮೂರು ವರ್ಷಗಳ ಕಾಲ ಕಾದು ನೋಡೋಣ’ ಎಂದು ಕೆಲವು ರೈತರು ಮಾತ್ರ ದಾಳಿಂಬೆ ಗಿಡ ಉಳಿಸಿಕೊಂಡಿದ್ದರು.

ಆರೇಳು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ದಾಳಿಂಬೆ ಹಣ್ಣಿನ ದರ ಗಗನಕ್ಕೇರಿತ್ತು. ಇದರಿಂದಾಗಿ ಉತ್ತಮ ಬೆಲೆ ಸಿಗುತ್ತದೆ
ಎಂಬ ನಿರೀಕ್ಷೆಯಲ್ಲಿ ಬೆಳೆಗಾರರು ಗಿಡಗಳಿಗೆ ಇಥ್ರೇಲ್‌ ಮಾಡಿ ಹಣ್ಣಿಗೆ ಬಿಟ್ಟಿದ್ದರು. ಗೊಬ್ಬರ, ಔಷಧ, ಕೂಲಿಕಾರ್ಮಿಕರು ಸೇರಿ ಕೋವಿಡ್‌ ಸಂಕಷ್ಟದ ನಡುವೆಯೂ ಲಕ್ಷಾಂತರ ರೂಪಾಯಿ ಮತ್ತೆ ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಹಣ್ಣು ಕಟಾವಿಗೆ ಬರುವ ಹೊತ್ತಿಗೆ ಲಾಕ್‌ಡೌನ್‌ ಜಾರಿಯಾಗಿದೆ. ಈ ಮೊದಲು ಹಣ್ಣು ಖರೀದಿಸಲು ಜಮೀನಿಗೆ ಬರುತ್ತಿದಷ್ಟು ಮಧ್ಯವರ್ತಿಗಳು ಈಗ ಬರುತ್ತಿಲ್ಲ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಇದರಿಂದಾಗಿ ದಿಕ್ಕು ತೋಚದಂತಾಗಿದೆ.

‘ಬೆಂಗಳೂರು, ಚೆನ್ನೈನಂತಹ ದೊಡ್ಡ ಮಾರುಕಟ್ಟೆಗಳಿಗೆ ಹೋಗಿ ದಾಳಿಂಬೆ ಹಣ್ಣು ಮಾರಾಟ ಮಾಡಲು ಒಂದೆಡೆ ಕೋವಿಡ್‌ ಭೀತಿ. ಮತ್ತೊಂದೆಡೆ ಲಾಕ್‌ಡೌನ್‌ನಿಂದ ಮುಕ್ತ ಸಾರಿಗೆ ವ್ಯವಸ್ಥೆಗೆ ಅವಕಾಶ ಇಲ್ಲದೇ ಪರದಾಡುವಂತಾಗಿದೆ. ಕೊಯ್ಲಿಗೆ ಬಂದಿರುವ ಹಣ್ಣು ಕಟಾವು ಮಾಡದಿದ್ದರೆ ಫಸಲು ಪ್ರಾಣಿ–ಪಕ್ಷಿ ಹಾಗೂ ಮಣ್ಣು ಪಾಲಾಗುತ್ತದೆ. ಇದರಿಂದಾಗಿ ಬೆಳೆ ಬೆಳೆಯಲು ಖರ್ಚು ಮಾಡಿರುವ ಹಣವೂ ಕೈಸೇರದಂತಾಗುತ್ತದೆ ಎಂದು ದಾಳಿಂಬೆ ಹಣ್ಣು ಖರೀದಿಸುವವರಿಗೆ ದೂರವಾಣಿ ಕರೆ ಮಾಡಿ ಕರೆದರೆ ಪ್ರತಿ ಕೆ.ಜಿಗೆ ₹ 70ರಿಂದ ₹ 100ರವರೆಗೆ ಕೇಳುತ್ತಿದ್ದಾರೆ. ಅನಿವಾರ್ಯವಾಗಿ ಮಧ್ಯವರ್ತಿಗಳು ಕೇಳುವ ಬೆಲೆಗೆ ಮಾರಾಟ ಮಾಡುವಂತಾಗಿದೆ’ ಎಂದು ದಾಳಿಂಬೆ ಬೆಳೆಗಾರ ಹುರುಳೀಹಳ್ಳಿ ಶಿವಕುಮಾರ್‌ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT