ಗುರುವಾರ , ನವೆಂಬರ್ 14, 2019
19 °C

ಬಡತನ, ಹಸಿವು ಮತ್ತು ನೊಬೆಲ್‌ ಪ್ರಶಸ್ತಿ

Published:
Updated:
Prajavani

ಬಡತನ, ಜಾಗತಿಕ ಹಸಿವು ಸೂಚ್ಯಂಕ ಮತ್ತು ಅರ್ಥಶಾಸ್ತ್ರಕ್ಕೆ ನೊಬೆಲ್‌ ಪ್ರಶಸ್ತಿ ಘೋಷಣೆಗೆ ಸಂಬಂಧಿಸಿದ ಜಾಗತಿಕ ಸುದ್ದಿಗಳು ಕಳೆದ ವಾರ ಗಮನ ಸೆಳೆದಿದ್ದವು. ಈ ಮೂರೂ ಸುದ್ದಿಗಳಲ್ಲಿ ಭಾರತದ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿತ್ತು ಎನ್ನುವುದೂ ಗಮನಿಸಬೇಕಾದ ಸಂಗತಿಯಾಗಿತ್ತು.

ಭಾರತದಲ್ಲಿನ ಬಡತನ ಪ್ರಮಾಣವು 1990ರ ನಂತರ ಅರ್ಧದಷ್ಟು ಇಳಿಕೆಯಾಗಿದೆ ಎಂದು ವಿಶ್ವಬ್ಯಾಂಕ್‌ ಹೇಳಿದ್ದರೆ, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ಈ ಸಾಲಿನಲ್ಲಿ 102ನೇ ಸ್ಥಾನ ಪಡೆದುಕೊಂಡಿರುವುದನ್ನು ‘ಜಾಗತಿಕ ಹಸಿವು ವರದಿ – 2019’ರಲ್ಲಿ ವಿವರಿಸಲಾಗಿತ್ತು. ಈ ಬಾರಿಯ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯು ಬಡತನ ನಿವಾರಣೆಗೆ ಸಂಬಂಧಿಸಿದ ಪ್ರಯೋಗಗಳಿಗೆ ದೊರೆತಿದೆ. ಬಡತನ ಮತ್ತು ಹಸಿವಿಗೆ ನೇರ ಸಂಬಂಧ ಇಲ್ಲ. ಬಡತನ ನಿರ್ಮೂಲನೆ ಎನ್ನುವುದು ಕೇವಲ ಹಸಿವಿಗೆ ಸಂಬಂಧಿಸಿದ ಯೋಜನೆ ಆಗಬಾರದು ಎಂದು ಪ್ರತಿಪಾದಿಸುತ್ತಿರುವ ಅರ್ಥಶಾಸ್ತ್ರಜ್ಞರಿಗೆ ಈ ಬಾರಿಯ ನೊಬೆಲ್‌ ನೀಡಲಾಗಿದೆ.

ಭಾರತ ಸಂಜಾತ ಅಭಿಜಿತ್‌ ವಿನಾಯಕ ಬ್ಯಾನರ್ಜಿ, ಅವರ ಪತ್ನಿ ಎಸ್ತರ್‌ ಡಫ್ಲೊ (ಫ್ರೆಂಚ್‌– ಅಮೆರಿಕನ್‌) ಮತ್ತು ಹಾರ್ವರ್ಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್ ಅವರು 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ಗೆ ಜಂಟಿಯಾಗಿ ಆಯ್ಕೆಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಬಡತನದ ನಿರ್ಮೂಲನಾ ಕಾರ್ಯಕ್ರಮಗಳ  ದಕ್ಷತೆಯನ್ನು ನೊಬೆಲ್‌ ಪ್ರಶಸ್ತಿ ಪಡೆದವರ ಸಂಶೋಧನೆಯು ಗಣನೀಯವಾಗಿ ಹೆಚ್ಚಿಸಿದೆ ಎನ್ನುವುದು ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಶಂಸೆಯಾಗಿತ್ತು.

ಬಡತನ ವಿರುದ್ಧದ ಹೋರಾಟದ ರೂಪುರೇಷೆ ಸಿದ್ಧಪಡಿಸಿದ ಪ್ರಾಯೋಗಿಕ ವಿಧಾನಕ್ಕೆ ನೊಬೆಲ್‌ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಈ ಮೂವರೂ ಬಡತನ ನಿವಾರಣೆ ಮಾಡಲು ಪ್ರಾಯೋಗಿಕ ವಿಧಾನದಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಇವರು ಅಭಿವೃದ್ಧಿ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬಡತನಕ್ಕೆ ಕಾರಣವಾಗುವ ನಿರ್ದಿಷ್ಟ ಕಾರಣಗಳಿಗೆ ಪರಿಹಾರ ಒದಗಿಸಿರುವುದು ಇವರ ಹೆಗ್ಗಳಿಕೆಯಾಗಿದೆ. ಈ ಮೂವರೂ, ಬಡತನವನ್ನು ಅರ್ಥೈಸಿಕೊಳ್ಳಲು ಮತ್ತು ಅದನ್ನು ನಿವಾರಣೆ ಮಾಡಲು ಅಳವಡಿಸಿಕೊಳ್ಳಬೇಕಾದ ವಿಧಾನಗಳ ಬಗ್ಗೆ ವಿಸ್ತೃತ ಅಧ್ಯಯನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರು ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. 

ಈ ಪ್ರಶಸ್ತಿ ಪುರಸ್ಕೃತರು ಬಡತನವನ್ನು ಸಮಗ್ರವಾಗಿ ಅರ್ಥೈಸಿಕೊಂಡು ಅದರ ನಿವಾರಣೆಗೆ ವ್ಯಕ್ತಿಗಳ ವರ್ತನೆಯ ಅಧ್ಯಯನ ನಡೆಸಿದ್ದಾರೆ. ವಿರಳ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬಡತನ ನಿರ್ಮಾಲನೆಗೆ ಪ್ರಯತ್ನಿಸುವುದು ಇವರು ಕಂಡುಕೊಂಡ ವಿಧಾನವಾಗಿದೆ. ತ್ವರಿತ ಆರ್ಥಿಕ ಪ್ರಗತಿಯೊಂದೇ ಬಡತನ ಕೊನೆಗೊಳಿಸಲಾರದು. ಬಡ ದೇಶಗಳಲ್ಲಿಯೂ ಪ್ರತಿಯೊಂದು ಪ್ರದೇಶದಲ್ಲಿ ಬಡತನಕ್ಕೆ ಕಾರಣವಾಗುವ ಸಂಗತಿಗಳು ಭಿನ್ನವಾಗಿರುತ್ತವೆ ಎನ್ನುವುದು ಇವರ ವಾದಸರಣಿಯಾಗಿದೆ. ಪಕ್ಷಪಾತ ಧೋರಣೆ ಮತ್ತು ಪೂರ್ವಗ್ರಹಗಳು ವ್ಯಕ್ತಿಗಳ ನಿರ್ಧಾರವನ್ನು ಪ್ರಭಾವಿಸುತ್ತವೆ ಎನ್ನುವುದನ್ನು ಆಧರಿಸಿ ಇವರು ತಮ್ಮ ಬಡತನ ನಿರ್ಮೂಲನೆಯ ಪ್ರಾಯೋಗಿಕ ವಿಧಾನ ರೂಪಿಸಿದ್ದಾರೆ. 

ಅಭಿವೃದ್ಧಿ ಆರ್ಥಿಕತೆಯ ಬದಲಾದ ಪರಿಕಲ್ಪನೆ

ಪ್ರಯೋಗಗಳನ್ನು ಆಧರಿಸಿದ ಬಡತನ ನಿರ್ಮೂಲನಾ ವಿಧಾನವು, ‘ಅಭಿವೃದ್ಧಿ ಆರ್ಥಿಕತೆ’ಯ ಪರಿಕಲ್ಪನೆಯನ್ನೇ ಬದಲಾಯಿಸಿದೆ. ಸಂಶೋಧನಾ ಕ್ಷೇತ್ರದಲ್ಲಿ ಈ ಪರಿಕಲ್ಪನೆಗೆ ಹೊಸ ಹೊಳವು ನೀಡಿದೆ.

ಈ ಮೂವರೂ ಪರಿಚಯಿಸಿದ ಹೊಸ ಧೋರಣೆಯು ಬಡತನ ನಿರ್ಮೂಲನೆ ಮಾಡುವ ಕಾರ್ಯಕ್ರಮಗಳಿಗೆ ವಿಶ್ವಾಸಾರ್ಹ ಉತ್ತರಗಳನ್ನು ಕೊಡುತ್ತದೆ. ಇವರು ಸಾಕ್ಷ್ಯಾಧಾರ ಆಧರಿಸಿದ ವಿಧಾನ ಅನುಸರಿಸಿದ್ದಾರೆ. ಬದುಕಿನ ವಾಸ್ತವ ಸಂಗತಿಗಳಿಗೆ ಆರ್ಥಿಕ ಸಿದ್ಧಾಂತಗಳನ್ನು ಅನ್ವಯಿಸಿ  ಫಲಿತಾಂಶಗಳನ್ನು ಪ್ರಾಯೋಗಿಕವಾಗಿ ಮೌಲ್ಯಮಾಪನ ಮಾಡುವ ವಿಧಾನ ಅನುಸರಿಸಿದ್ದಾರೆ. ಅಪೇಕ್ಷಿತ ಫಲಿತಾಂಶ ಸಾಧಿಸುವಲ್ಲಿ ಹಸ್ತಕ್ಷೇಪಗಳ ಪರಿಣಾಮಗಳನ್ನು ತಿಳಿದುಕೊಳ್ಳುವ ಪ್ರಯತ್ನ ಇವರಾಗಿದೆ.

ಔಷಧಿ ತಯಾರಿಕಾ ರಂಗದಲ್ಲಿ ನಡೆಯುವ ‘ಕ್ಲಿನಿಕಲ್‌ ಟ್ರಯಲ್ಸ್‌’ ಮಾದರಿಯಲ್ಲಿಯೇ ಇವರು ಬಡತನ ನಿರ್ಮೂಲನೆ ವಿಧಾನ ಅನುಸರಿಸಿದ್ದಾರೆ. ಪ್ರಜ್ಞಾಪೂರ್ವಕವಲ್ಲದ ರೀತಿಯಲ್ಲಿ ಬಡತನ ನಿರ್ಮೂಲನೆ ನಿವಾರಣೆ ಮಾಡುವ ವಿಧಾನ ಅನುಸರಿಸಿದ್ದಾರೆ. ಈ ವಿಧಾನವು ಅಭಿವೃದ್ಧಿ
ಆರ್ಥಿಕತೆಯ ಸಂಶೋಧನೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ.

ಅಭಿಜಿತ್‌ ದಂಪತಿ, ತಮ್ಮ ಈ ಬಡತನ ನಿರ್ಮಾಲನಾ ವಿಧಾನವನ್ನು ಪರೀಕ್ಷಿಸಲು ಭಾರತದಲ್ಲಿ ವ್ಯಾಪಕ ಪ್ರಮಾಣದಲ್ಲಿ ಪ್ರಯೋಗ ಹಾಗೂ ಪರೀಕ್ಷೆಗಳನ್ನು ನಡೆಸಿದ್ದಾರೆ.  ಬಡತನ ನಿರ್ಮಾಲನಾ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಇವರ ಪ್ರಾಯೋಗಿಕ ವಿಧಾನವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿದೆ. 

ನಿರ್ದಿಷ್ಟ ಯೋಜನೆ ಇಲ್ಲದೆ ನಡೆದ ನಿಯಂತ್ರಿತ ಪರೀಕ್ಷೆಗಳು (randomised control trial–RCT) ಬಡತನ ನಿರ್ಮೂಲನಾ ಕಾರ್ಯಕ್ರಮಗಳ ದಕ್ಷತೆ ಹೆಚ್ಚಿಸಿವೆ. ಜನರು ಯಾವುದಾದರೂ ಒಂದು ನಿರ್ಧಾರಕ್ಕೆ ಬರಲು ಏನು ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ‘ಆರ್‌ಸಿಟಿ’ ತಂತ್ರ ಬಳಸಲಾಗಿದೆ. ಜನರ ಇಚ್ಛೆ ಅಥವಾ ಆಯ್ಕೆ ಪ್ರಭಾವಿಸುವ ಉತ್ತೇಜಕ ಸಂಗತಿಗಳನ್ನು ಯೋಜನೆಗಳನ್ನು ರೂಪಿಸುವವರು ತಿಳಿದುಕೊಂಡರೆ ಬಡತನ ನಿರ್ಮಾಲನಾ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಬಹುದು ಎನ್ನುವುದು ಅವರ ಸಲಹೆಯ ಸಾರವಾಗಿದೆ. ಇದೊಂದು ಸಾಕ್ಷಾಧಾರ ಆಧರಿಸಿದ ನೀತಿ ನಿರೂಪಣೆಯಾಗಿರುತ್ತದೆ.

ಈ ವಿಧಾನವು ಟೀಕಾತೀತವೇನಲ್ಲ. ಅದರ ಫಲಿತಾಂಶವನ್ನು ಉತ್ಪ್ರೇಕ್ಷೆಗೊಳಿಸಲಾಗಿದೆ ಎನ್ನುವ ಟೀಕೆಗಳಿವೆ. ಈ ಚರ್ಚೆ ಈಗಲೂ ನಡೆಯುತ್ತಿದೆ. ನೊಬೆಲ್‌ ಪ್ರಶಸ್ತಿ ಹಂಚಿಕೊಂಡ ಈ ಮೂವರೂ ಬಡತನ ನಿವಾರಣೆಗೆ ಸುಸುಂಬದ್ಧ ಆರ್ಥಿಕ ದೃಷ್ಟಿಕೋನ ಒದಗಿಸಿದ್ದು ಅದು ಸೂಕ್ತ ಮಾರ್ಗದರ್ಶನವನ್ನೂ ನೀಡುತ್ತಿದೆ. ಈ ಚಿಂತನೆ ಮತ್ತು ಅದರ ಜಾರಿ ವಿಷಯದಲ್ಲಿ ಮಾತ್ರ ಭಾರತ ಹಿಂದೆ ಬಿದ್ದಿದೆ.

ಅಭಿಜಿತ್ ದಂಪತಿ 2011ರಲ್ಲಿ ಪ್ರಕಟಿಸಿದ್ದ ‘ಪೂರ್‌ ಎಕನಾಮಿಕ್ಸ್‌’ (Poor Economics) ಪುಸ್ತಕವು ಬಡತನವನ್ನು ವಿಭಿನ್ನ ದೃಷ್ಟಿಕೋನದಲ್ಲಿ ಪರಾಮರ್ಶಿಸಿತ್ತು. ಬಡತನ ನಿವಾರಣೆ ಯೋಜನೆಗಳಲ್ಲಿ ಅಳವಡಿಸಿಕೊಳ್ಳಬೇಕಾದ ಪ್ರಮುಖ ಬದಲಾವಣೆಗಳ ಬಗ್ಗೆ ಅಲ್ಲಿ ವಿವರಣೆ ಇತ್ತು. ಇವರ ವಿಧಾನವು ಬಡತನ ನಿರ್ಮೂಲನೆಗೆ ಸರ್ವರೋಗ ನಿವಾರಕವಾಗಿಲ್ಲ ಎನ್ನುವುದೂ ನಿಜ. ಆದರೆ, ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಅಗತ್ಯವಾದ ವಿಧಾನವಾಗಿರುವುದಂತೂ ನಿಜ.

ಪ್ರತಿಕ್ರಿಯಿಸಿ (+)